ಬೆಂಗಳೂರು: ರಾಜ್ಯ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ ಕಲ್ಪಿಸಿದೆ. ಹಲವು ತಿಂಗಳುಗಳಿಂದ ಕಾಯುತ್ತಿದ್ದ ಸಾರ್ವಜನಿಕರಿಗೆ ಇದೀಗ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಮೇ 8, 2026ರಿಂದ ಈ ಪ್ರಕ್ರಿಯೆ ಆರಂಭವಾಗಿದ್ದು, 2027ರ ಮಾರ್ಚ್ 31ರವರೆಗೆ ಅರ್ಜಿ ಸಲ್ಲಿಸಬಹುದು. ಆದರೆ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಇನ್ನೂ ಅನುಮತಿ ನೀಡಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಬಾರಿ ಸಾರ್ವಜನಿಕರು ತಮ್ಮ ರೇಷನ್ ಕಾರ್ಡ್‌ನಲ್ಲಿ ಹಲವು ರೀತಿಯ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದು. ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ, ಅನಗತ್ಯ ಹೆಸರು ತೆಗೆಯುವುದು, ಕುಟುಂಬದ ಮುಖ್ಯಸ್ಥರ ಹೆಸರು ಬದಲಾವಣೆ ಹಾಗೂ ಫೋಟೋ ಬದಲಾವಣೆ ಸೇರಿದಂತೆ ವಿವಿಧ ಸೇವೆಗಳು ಲಭ್ಯವಿರಲಿವೆ.
ಈಗಾಗಲೇ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಹೊಸದಾಗಿ ಜನಿಸಿದ ಮಕ್ಕಳ ಹೆಸರು ಸೇರಿಸುವುದು ಅಥವಾ ಮದುವೆಯಾದ ಮಹಿಳೆಯರ ಹೆಸರು ಸೇರ್ಪಡೆ ಮಾಡುವುದಕ್ಕೂ ಅವಕಾಶ ನೀಡಲಾಗಿದೆ.
ತಿದ್ದುಪಡಿಗೆ ಕೆಲವು ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಸದಸ್ಯರ ಆಧಾರ್ ಕಾರ್ಡ್, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, 6 ವರ್ಷದೊಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ ಅಗತ್ಯವಾಗಲಿದೆ.
ಪತ್ನಿಯ ಹೆಸರು ಸೇರ್ಪಡೆಗೆ ಮದುವೆ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ ಪೋಷಕರ ಪಡಿತರ ಚೀಟಿ ಬೇಕಾಗುತ್ತದೆ. ಮಗುವಿನ ಹೆಸರು ಸೇರಿಸಲು ಮಗುವಿನ ಜನನ ಪ್ರಮಾಣ ಪತ್ರ ಹಾಗೂ ಪೋಷಕರ ಆಧಾರ್ ಕಾರ್ಡ್ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಸೈಬರ್ ಸೆಂಟರ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕವೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. https://ahara.kar.nic.in/home ವೆಬ್‌ಸೈಟ್‌ನಲ್ಲಿ “ಇ-ಸೇವೆಗಳು” ವಿಭಾಗಕ್ಕೆ ಹೋಗಿ “ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ” ಆಯ್ಕೆ ಮಾಡಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು. ಬಳಿಕ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಬ್ಮಿಟ್ ಮಾಡಬೇಕು.
ಸರ್ವರ್ ಸಮಸ್ಯೆಗಳು ಕಂಡುಬಂದರೆ ಮುಂಜಾನೆ ಅಥವಾ ರಾತ್ರಿ 8 ಗಂಟೆಯ ನಂತರ ಅರ್ಜಿ ಸಲ್ಲಿಸುವುದು ಉತ್ತಮ ಎಂದು ಇಲಾಖೆ ಸೂಚಿಸಿದೆ. ಅರ್ಜಿ ಸಲ್ಲಿಸಿದ ಬಳಿಕ ಸಿಗುವ ಸ್ವೀಕೃತಿ ಪತ್ರವನ್ನು ಕಡ್ಡಾಯವಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಅರ್ಜಿ ಸ್ಥಿತಿ ಪರಿಶೀಲಿಸಲು ಅದು ಅತ್ಯಗತ್ಯವಾಗುತ್ತದೆ.
ದಾಖಲೆಗಳು ಸರಿಯಾಗಿದ್ದರೆ ಅರ್ಜಿ ಸಲ್ಲಿಸಿದ 15ರಿಂದ 30 ದಿನಗಳೊಳಗೆ ಪರಿಷ್ಕೃತ ರೇಷನ್ ಕಾರ್ಡ್ ಲಭ್ಯವಾಗಲಿದೆ. ತುರ್ತು ಸಂದರ್ಭಗಳಲ್ಲಿ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ 7ರಿಂದ 10 ದಿನಗಳಲ್ಲಿಯೇ ಹೊಸ ಕಾರ್ಡ್ ಕೈ ಸೇರಬಹುದು ಎಂದು ತಿಳಿಸಲಾಗಿದೆ.