Thursday, July 23, 2026
Join WhatsApp Group
HomeNationalನಾನು ಇಂಟರ್‌ನೆಟ್‌ ಬಳಸುವುದಿಲ್ಲ!

ನಾನು ಇಂಟರ್‌ನೆಟ್‌ ಬಳಸುವುದಿಲ್ಲ!

ಈ 2026ರ ಹೊತ್ತಿನಲ್ಲಿಯೂ ಭಾರತದಲ್ಲಿ ಮೊಬೈಲ್ ಫೋನ್‌, ಇಂಟರ್‌ನೆಟ್‌ ಇಲ್ಲದೇ ಜೀವನ ನಡೆಸುವದು ಅಸಾಧ್ಯವೆನಿಸಬಹುದು. ಆದರೆ, “ನಾನು ಇಂಟರ್‌ನೆಟ್‌ ಬಳಸುವುದಿಲ್ಲ, ಸಾಮಾನ್ಯವಾಗಿ ಮೊಬೈಲ್‌ ಕೂಡ ಬಳಸುವುದಿಲ್ಲ” ಎಂದು ರಾಷ್ಟ್ರೀಯ ಭದ್ರತೆಯ ಹೊಣೆ ಹೊತ್ತಿರುವ ವ್ಯಕ್ತಿ ಹೇಳಿದರೆ, ಅದು ಕೇವಲ ವಿಚಿತ್ರವಷ್ಟೇ ಅಲ್ಲ, ಅದೊಂದು ಸ್ಪಷ್ಟ ಸಂದೇಶ.

ಹೀಗೊಂದು ಅಚ್ಚರಿಯ ಹೇಳಿಕೆ ನೀಡಿದವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌. ಅವರ ಮಾತಿನಲ್ಲಿ ತಂತ್ರಜ್ಞಾನದ ವಿರೋಧವಿಲ್ಲ. ಇದು ತಂತ್ರಜ್ಞಾನಕ್ಕಿಂತ ಮುಂದೆ ನಿಂತಿರುವ ಎಚ್ಚರಿಕೆ.

ಇತ್ತೀಚೆಗೆ ವಿಕಸಿತ ಭಾರತ ಯುವ ನಾಯಕರು ಸಂವಾದ-2026ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಧೋವಲ್‌, ಸಾರ್ವಜನಿಕರಿಗೆ ಗೊತ್ತಿರದ ಇನ್ನೂ ಹಲವು ಸಂವಹನ ಮಾರ್ಗಗಳಿವೆ ಎಂದು ಅರ್ಥಪೂರ್ಣವಾಗಿ ಹೇಳಿಬಿಟ್ಟರು. ಆ “ಗೊತ್ತಿಲ್ಲದ ಮಾರ್ಗಗಳು” ಯಾವುವು ಎಂಬುದನ್ನು ವಿವರಿಸದಿದ್ದರೂ, ಆ ಮೌನವೇ ಅವರ ಮಾತಿನ ತೂಕವನ್ನು ಹೆಚ್ಚಿಸಿತ್ತು.

ಕುಟುಂಬದವರ ಜೊತೆ ಮಾತನಾಡಲು ಅಥವಾ ವಿದೇಶಿ ನಾಯಕರೊಂದಿಗೆ ಅಗತ್ಯ ಸಂಭಾಷಣೆ ನಡೆಸಲು ಅವರು ಕೆಲವೊಮ್ಮೆ ಫೋನ್‌ ಬಳಸುತ್ತಾರೆ. ಆದರೆ ಇಂಟರ್‌ನೆಟ್‌ ಇಲ್ಲದ ಜೀವನ ಆಯ್ಕೆ ಮಾಡಿರುವುದು ಯಾದೃಚ್ಛಿಕವಲ್ಲ. ಡಿಜಿಟಲ್ ಯುಗದಲ್ಲಿ ಮಾಹಿತಿ ಎಷ್ಟು ವೇಗವಾಗಿ ಹರಡುತ್ತದೋ, ಅಷ್ಟೇ ವೇಗವಾಗಿ ದುರ್ಬಳಕೆಯೂ ಆಗುತ್ತದೆ.

ಸೈಬರ್‌ ಹ್ಯಾಕ್, ಡೇಟಾ ಲೀಕ್‌, ಟ್ರ್ಯಾಕಿಂಗ್‌ ಇವೆಲ್ಲವೂ ರಾಷ್ಟ್ರೀಯ ಭದ್ರತೆಗೆ ನೈಜ ಅಪಾಯಗಳು. ಆ ಅಪಾಯಗಳನ್ನು ಅತ್ಯಂತ ಗಂಭೀರವಾಗಿ ಅರ್ಥ ಮಾಡಿಕೊಂಡ ವ್ಯಕ್ತಿಯೊಬ್ಬರು ತೆಗೆದುಕೊಳ್ಳುವ ನಿರ್ಧಾರವೇ “ನಾನು ಇಂಟರ್‌ನೆಟ್‌ ಬಳಸುವುದಿಲ್ಲ”!

ಅಜಿತ್‌ ಧೋವಲ್‌ ಮೊಬೈಲ್‌ ಬಳಸುವುದಿಲ್ಲ ಎಂಬ ಸುದ್ದಿ ಗಾಸಿಪ್‌ ಅಲ್ಲ. ಅದು ಒಂದು ತತ್ವ. ಎಲ್ಲರೂ ಆ ದಾರಿಯಲ್ಲಿ ನಡೆಯಬೇಕು ಎಂದಿಲ್ಲ. ಆದರೆ ದೇಶದ ಭದ್ರತೆ ನೋಡಿಕೊಳ್ಳುವವರು ಯಾವ ಮಟ್ಟದ ಎಚ್ಚರಿಕೆಯಲ್ಲಿ ಬದುಕುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ತಂತ್ರಜ್ಞಾನ ನಮಗೆ ಸೌಲಭ್ಯ ಕೊಟ್ಟಿದೆ, ಆದರೆ ಜವಾಬ್ದಾರಿ ಕಲಿಸಿಲ್ಲ. ಆ ಜವಾಬ್ದಾರಿಯನ್ನೇ ಅಜಿತ್‌ ಧೋವಲ್‌ ಅವರ ಜೀವನಶೈಲಿ ಮೌನವಾಗಿ ಬೋಧಿಸುತ್ತದೆ.

ಇದು ಭದ್ರತೆ ಎಂದರೆ ಗನ್‌, ಸೈನ್ಯ, ಗಡಿ ಇವಿಷ್ಟೇ ಅಲ್ಲ. ಮಾಹಿತಿ, ಮೌನ ಮತ್ತು ನಿಯಂತ್ರಣವೂ ಅದರ ಭಾಗವೇ ಎಂಬುದನ್ನು ನೆನಪಿಸುವ ಕಾಲೋಚಿತ ಎಚ್ಚರಿಕೆಯೂ ಹೌದು!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share