Ad
Home Local Story ಸರ್ವರಿಗೂ ಸರ್ವರ್‌ ಸಮಸ್ಯೆ!

ಸರ್ವರಿಗೂ ಸರ್ವರ್‌ ಸಮಸ್ಯೆ!

0
9

ಉತ್ತರ ಕನ್ನಡದಲ್ಲೂ ಬಸ್‌ಪಾಸ್ ಅರ್ಜಿಗೆ ತಾಂತ್ರಿಕ ತೊಂದರೆ

ಕಾರವಾರ: 2026-27ನೇ ಶೈಕ್ಷಣಿಕ ಸಾಲಿನ ಉಚಿತ ವಿದ್ಯಾರ್ಥಿ ಬಸ್‌ಪಾಸ್‌ಗಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳು ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳನ್ನೂ ಸಂಕಷ್ಟಕ್ಕೆ ಸಿಲುಕಿಸಿದೆ.

ಕಳೆದ ಕೆಲ ದಿನಗಳಿಂದ ಸರ್ವರ್ ಸಮಸ್ಯೆ, ಒಟಿಪಿ ಬಾರದ ತೊಂದರೆ ಹಾಗೂ ಪ್ರಯಾಣದ ಮಾರ್ಗಗಳ ಮಾಹಿತಿ ಸರಿಯಾಗಿ ಲಭ್ಯವಾಗದ ಕಾರಣ ಸಾವಿರಾರು ವಿದ್ಯಾರ್ಥಿಗಳು ಬಸ್‌ಪಾಸ್‌ಗೆ ಅರ್ಜಿ ಸಲ್ಲಿಸಲು ಪರದಾಡುತ್ತಿದ್ದಾರೆ.

ಜಿಲ್ಲೆಯ ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಅಂಕೋಲಾ ಹಾಗೂ ಜೋಯಿಡಾ ಭಾಗಗಳ ವಿದ್ಯಾರ್ಥಿಗಳು ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದರೂ, ತಾಂತ್ರಿಕ ದೋಷಗಳಿಂದ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುತ್ತಿಲ್ಲ. ಪರಿಣಾಮವಾಗಿ ವಿದ್ಯಾರ್ಥಿಗಳು ಹಲವು ಬಾರಿ ಸೇವಾ ಕೇಂದ್ರಗಳಿಗೆ ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಒಟಿಪಿ ಸಂದೇಶಗಳು ತಲುಪದಿರುವುದು ಪ್ರಮುಖ ಸಮಸ್ಯೆಯಾಗಿದೆ. ಕೆಲವೊಮ್ಮೆ ಒಟಿಪಿ ಬಂದರೂ ಸರ್ವರ್ ಸ್ಪಂದಿಸದೇ ಅರ್ಜಿ ಪ್ರಕ್ರಿಯೆ ಮಧ್ಯದಲ್ಲೇ ಸ್ಥಗಿತಗೊಳ್ಳುತ್ತಿದೆ. ಇದರ ಜೊತೆಗೆ ಬಸ್‌ಗೆ ಹತ್ತುವ ಹಾಗೂ ಇಳಿಯುವ ಸ್ಥಳಗಳ ವಿವರಗಳು ಪೋರ್ಟಲ್‌ನಲ್ಲಿ ಸರಿಯಾಗಿ ತೋರಿಸದಿರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಾಗಿ ತೊಂದರೆ ಅನುಭವಿಸುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಬಹುತೇಕ ವಿದ್ಯಾರ್ಥಿಗಳು ಪ್ರತಿದಿನ ದೂರದ ಊರುಗಳಿಂದ ಶಾಲೆ ಹಾಗೂ ಕಾಲೇಜುಗಳಿಗೆ ಪ್ರಯಾಣಿಸುತ್ತಾರೆ. ಈಗಾಗಲೇ ಶಿಕ್ಷಣ ಸಂಸ್ಥೆಗಳು ಆರಂಭವಾಗಿರುವುದರಿಂದ ಬಸ್‌ಪಾಸ್ ದೊರೆಯದ ವಿದ್ಯಾರ್ಥಿಗಳು ತಮ್ಮ ಖರ್ಚಿನಲ್ಲೇ ಬಸ್‌ದರ ಪಾವತಿಸಿ ಸಂಚರಿಸುತ್ತಿದ್ದಾರೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ.

ಬಸ್‌ಪಾಸ್ ಮಂಜೂರಿಗೆ 60 ಕಿಲೋಮೀಟರ್ ದೂರದ ಮಿತಿ ಅನ್ವಯವಾಗಿದ್ದು, ಪೋರ್ಟಲ್‌ನಲ್ಲಿ ಹಲವು ಗ್ರಾಮಗಳ ಹೆಸರು, ವಾಸದ ಸ್ಥಳ ಹಾಗೂ ಶಿಕ್ಷಣ ಸಂಸ್ಥೆಗಳ ಮಾಹಿತಿ ನಿಖರವಾಗಿ ನವೀಕರಿಸದಿರುವುದರಿಂದ ಅರ್ಜಿ ಭರ್ತಿ ವೇಳೆ ಗೊಂದಲ ಉಂಟಾಗುತ್ತಿದೆ. ವಿಶೇಷವಾಗಿ ಗ್ರಾಮೀಣ ಮತ್ತು ಮಲೆನಾಡು ಪ್ರದೇಶಗಳ ವಿದ್ಯಾರ್ಥಿಗಳು ತಮ್ಮ ಮಾರ್ಗಗಳನ್ನು ಆಯ್ಕೆ ಮಾಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ತಾಂತ್ರಿಕ ಸಮಸ್ಯೆಗಳಿಂದಾಗಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಹೆಚ್ಚಾಗಿದ್ದು, ಶಿಕ್ಷಣ ಆರಂಭವಾದರೂ ಬಸ್‌ಪಾಸ್ ಸೌಲಭ್ಯ ದೊರೆಯದೇ ಇರುವುದಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದೆ. ಕೂಡಲೇ ಸರ್ವರ್ ಸಮಸ್ಯೆ ಸರಿಪಡಿಸಿ, ಅರ್ಜಿ ಪ್ರಕ್ರಿಯೆಯನ್ನು ಸುಗಮಗೊಳಿಸುವಂತೆ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.

Previous articleಕೆಲಸ ಕೇಳಿದ 15 ದಿನದೊಳಗೆ ಉದ್ಯೋಗ ಖಾತ್ರಿ
Next articleಸಾರ್ವಜನಿಕ ರಸ್ತೆಯಲ್ಲಿ ಮಚ್‌ ಮಂಜನ ದಾಂಧಲೆ!
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!