Ad
Home Local News ಆರೋಪಗಳಿಗೆ ನಮ್ಮಲ್ಲಿ ಉತ್ತರವಿದೆ

ಆರೋಪಗಳಿಗೆ ನಮ್ಮಲ್ಲಿ ಉತ್ತರವಿದೆ

0
3

ಟಿಎಸ್‌ಎಸ್‌ ಲಾಭ-ನಷ್ಟದ ಬಗ್ಗೆ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯರ ಸ್ಪಷ್ಟನೆ

ಶಿರಸಿ: 103 ವರ್ಷಗಳ ಇತಿಹಾಸ ಹೊಂದಿರುವ ಟಿಎಸ್‌ಎಸ್ ಪ್ರಸಕ್ತ ಸಾಲಿನಲ್ಲಿ 23.68 ಕೋಟಿ ರೂ ಲಾಭ ಗಳಿಸಿದೆ. ಆದರೆ ಸಂಸ್ಥೆಯ ಹಿಂದಿನ ನಷ್ಟದ ಬಾಕಿ ಇನ್ನೂ 76.79 ಕೋಟಿಯಷ್ಟಿದೆ ಎಂದು ಟಿಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಸಂಸ್ಥೆಯ ಪ್ರಸಕ್ತ ಸಾಲಿನ ಕಾರ್ಯಚಟುವಟಿಕೆಗಳು, ಅಡಿಕೆ ಮಾರುಕಟ್ಟೆಯ ಸ್ಥಿತಿ ಹಾಗೂ ಹಿಂದಿನ ಹಣಕಾಸು ವಿಚಾರಗಳ ಕುರಿತು ವಿವರ ನೀಡಿದರು.

ಅಡಿಕೆ ಉತ್ಪಾದನೆ ಕುಸಿದಿರುವುದು ಈ ಬಾರಿ ಸಂಸ್ಥೆಯ ವ್ಯವಹಾರದ ಮೇಲೂ ಪರಿಣಾಮ ಬೀರಿದೆ. ಎಲೆಚುಕ್ಕೆ ಸೇರಿದಂತೆ ವಿವಿಧ ರೋಗಗಳಿಂದ ಅಡಿಕೆ ಬೆಳೆಗೆ ಹಾನಿಯಾಗಿದ್ದು, ಮಾರುಕಟ್ಟೆಗೆ ಬರುವ ಅಡಿಕೆಯ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಟಿಎಸ್‌ಎಸ್ ಮೂಲಕ 2,13,997 ಕ್ವಿಂಟಾಲ್ ಅಡಿಕೆ ವಿಕ್ರಿಯಾಗಿದೆ. ಮಾರುಕಟ್ಟೆಯಲ್ಲಿ ಸಂಘದ ಮೂಲಕ ನಡೆದ ಅಡಿಕೆ ವಿಕ್ರಿಯ ಪ್ರಮಾಣ ಶೇ.48.23ರಷ್ಟಿದೆ ಎಂದು ವೈದ್ಯ ಹೇಳಿದರು.

ಈ ಅವಧಿಯಲ್ಲಿ ಸಂಸ್ಥೆ 69,163 ಕ್ವಿಂಟಾಲ್ ಅಡಿಕೆಯನ್ನು 300.43 ಕೋಟಿಗೂ ಅಧಿಕ ಮೌಲ್ಯದಲ್ಲಿ ಖರೀದಿಸಿದೆ. ಇದರೊಂದಿಗೆ 446 ಕ್ವಿಂಟಾಲ್ ಕಾಳುಮೆಣಸನ್ನು 2.99 ಕೋಟಿಗೂ ಅಧಿಕ ಮೌಲ್ಯದಲ್ಲಿ ಹಾಗೂ 3 ಕ್ವಿಂಟಾಲ್ ಏಲಕ್ಕಿಯನ್ನು 5.58 ಲಕ್ಷ ಮೌಲ್ಯದಲ್ಲಿ ಖರೀದಿಸಲಾಗಿದೆ.

ಸಂಸ್ಥೆಯ ಶೇಖರಣಾ ಸಾಮರ್ಥ್ಯವನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಬೇಕಿದೆ. ಹೊರಗಿನವರು ಉತ್ತಮ ಗುಣಮಟ್ಟದ ಅಡಿಕೆಯನ್ನು ಖರೀದಿಸಿ ಬೇರೆ ಗುಣಮಟ್ಟದ ಅಡಿಕೆಯೊಂದಿಗೆ ಮಿಶ್ರಣ ಮಾಡುತ್ತಿರುವುದು ಕೂಡ ಮಾರುಕಟ್ಟೆಯಲ್ಲಿ ಸವಾಲಾಗಿದೆ ಎಂದು ಅವರು ಹೇಳಿದರು.

ಹಿಂದಿನ ಹಣಕಾಸು ವ್ಯವಹಾರಗಳ ಕುರಿತು ಮಾತನಾಡಿದ ವೈದ್ಯ, 2018ರಿಂದ 2023ರವರೆಗಿನ ಅವಧಿಯ ಲೆಕ್ಕಪತ್ರಗಳ ಪುನಃ ಆಡಿಟ್ ನಡೆಸಲಾಗಿದೆ. ಹಿಂದಿನ ಅವಧಿಗಳಲ್ಲಿ ವಿವಿಧ ಕಾರಣಗಳಿಂದ ಸಂಸ್ಥೆಗೆ ನಷ್ಟ ಉಂಟಾಗಿದ್ದು, ಅದರ ಬಾಕಿ ಮೊತ್ತ ಸುಮಾರು 76.79 ಕೋಟಿಯಷ್ಟಿದೆ. ಪ್ರಸಕ್ತ ಸಾಲಿನ ಲಾಭವನ್ನು ಈ ನಷ್ಟಕ್ಕೆ ಹೊಂದಾಣಿಕೆ ಮಾಡುವ ಮೂಲಕ ಬಾಕಿ ಮೊತ್ತವನ್ನು ಕಡಿಮೆ ಮಾಡಲಾಗುತ್ತಿದೆ ಎಂದರು.

ಕೆಲವು ಸದಸ್ಯರು ಹಾಗೂ ಸಾಲಗಾರರಿಂದ ಹಿಂದಿನ ಬಾಕಿ ಉಳಿದಿರುವುದು ಸಂಸ್ಥೆಯ ಹಣಕಾಸು ವ್ಯವಹಾರದ ಮೇಲೂ ಪರಿಣಾಮ ಬೀರುತ್ತಿದೆ. ಬಾಕಿ ವಸೂಲಿಗಾಗಿ ಸಂಸ್ಥೆಯ ನಿಯಮ ಹಾಗೂ ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಇದೇ ವೇಳೆ ಟಿಎಸ್‌ಎಸ್‌ಗೆ 123 ಕೋಟಿ ರೂ ನಷ್ಟವಾಗಿದೆ ಎಂಬ ಆರೋಪದ ವಿಚಾರವೂ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪವಾಯಿತು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಗೋಪಾಲಕೃಷ್ಣ ವೈದ್ಯ, ಈ ಆರೋಪದ ಬಗ್ಗೆ ನಮ್ಮಲ್ಲಿ ಉತ್ತರಗಳಿವೆ. ಮೂವರು ದೊಡ್ಡ ಸಾಲಗಾರರಿಂದಲೇ ಸಂಸ್ಥೆಗೆ ನಷ್ಟವಾಗಿದೆ. ಈ ಕುರಿತು ಕಾನೂನು ಕ್ರಮ ಕೈಗೊಂಡಿದ್ದೇವೆ ಎಂದರು.

ಕೆಡಿಸಿಸಿಯಲ್ಲಿ ಸಾಲ ಕೇಳಿದಾಗ ನೀಡದ ಹಿನ್ನೆಲೆಯಲ್ಲಿ ತಾವೇ ಅದರ ಅಧ್ಯಕ್ಷರ ಮನೆಗೆ ಎರಡು ಬಾರಿ ತೆರಳಿದ್ದಾಗಿ ತಿಳಿಸಿದ ಅವರು, ಇತರ ನಿರ್ದೇಶಕರು ಹಾಗೂ ಸಿಇಒ ಕೂಡ ಆಡಳಿತ ಮಂಡಳಿ ಸಭೆಯ ಸಂದರ್ಭದಲ್ಲೇ ತೆರಳಿದ್ದರು ಎಂದು ಹೇಳಿದರು. ಅಂದು ಅವರು ಹೇಳಿದ್ದು ಶುದ್ಧ ಸುಳ್ಳು. ಅವರು ಎಸೆದದ್ದು ಕಲ್ಲಲ್ಲ, ಚಂಡು. ವಾಪಸ್ ಹೊಡೆಯುತ್ತದೆ ಎಂದು ವೈದ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಸಂಸ್ಥೆಯ ಆಸ್ಪತ್ರೆಯಲ್ಲಿಯೂ ಹೊಸ ಚಟುವಟಿಕೆಗಳಿಗೆ ಸಿದ್ಧತೆ ನಡೆದಿದೆ. ಅಕ್ಟೋಬರ್ 5ರಿಂದ ಬಿ.ಎಸ್ಸಿ. ನರ್ಸಿಂಗ್ ಕಾಲೇಜು ಆರಂಭಿಸಲು ನಿರ್ಧರಿಸಲಾಗಿದ್ದು, ಆಸ್ಪತ್ರೆಯಲ್ಲಿ ಪ್ರಾರ್ಥನಾ ಮಂದಿರ ಆರಂಭಿಸುವ ಯೋಜನೆಯೂ ಇದೆ. ಇದಕ್ಕಾಗಿ ಈಗಾಗಲೇ 2 ಕೋಟಿ ರೂ ದೇಣಿಗೆ ಬಂದಿದ್ದು, ಒಟ್ಟು ಸುಮಾರು 4.5 ಕೋಟಿ ರೂ ಅಗತ್ಯವಿದೆ ಎಂದು ವೈದ್ಯ ತಿಳಿಸಿದರು.

103 ವರ್ಷಗಳನ್ನು ಪೂರ್ಣಗೊಳಿಸಿ 104ನೇ ವರ್ಷಕ್ಕೆ ಕಾಲಿಟ್ಟಿರುವ ಟಿಎಸ್‌ಎಸ್‌ಗೆ ಮುಂದಿನ ದಿನಗಳಲ್ಲಿ ಅಡಿಕೆ ಉತ್ಪಾದನೆಯ ಇಳಿಕೆ, ಮಾರುಕಟ್ಟೆಯ ಸ್ಪರ್ಧೆ, ಶೇಖರಣಾ ಸಾಮರ್ಥ್ಯ, ಹಳೆಯ ಬಾಕಿ ವಸೂಲಿ ಸೇರಿದಂತೆ ಹಲವು ಸವಾಲುಗಳಿವೆ. ಸಂಸ್ಥೆ ಲಾಭದೊಂದಿಗೆ ಮುನ್ನಡೆಯುತ್ತಿದ್ದರೂ, ಹಿಂದಿನ ನಷ್ಟದ ಬಾಕಿಯನ್ನು ಕಡಿಮೆ ಮಾಡುವುದು ಹಾಗೂ ಮೂಲ ಅಡಿಕೆ ವ್ಯವಹಾರವನ್ನು ಬಲಪಡಿಸುವುದು ಮುಂದಿನ ಹಂತದ ಪ್ರಮುಖ ಸವಾಲುಗಳಾಗಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಟಿಎಸ್‌ಎಸ್ ನಿರ್ದೇಶಕರಾದ ರವೀಂದ್ರ ಹೆಗಡೆ ಹಳದೋಟ, ನರಸಿಂಹ ಹೆಗಡೆ ಬಾಳೆಗದ್ದೆ, ದತ್ತಗುರು ಹೆಗಡೆ, ಗಣಪತಿ ಜೋಶಿ ಕೊಪ್ಪಲತೋಟ, ನಿರ್ಮಲಾ ಹೆಗಡೆ, ಪುರುಷೋತ್ತಮ ಹೆಗಡೆ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗಿರೀಶ ಹೆಗಡೆ ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!