ಶಿರಸಿ: ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಸಲು ಮತ್ತು ಬಡ್ಡಿ ಸೇರಿ 8.91 ಲಕ್ಷ ರೂ. ಪಾವತಿಸಿದರೂ ತಮ್ಮ ಆಭರಣವನ್ನು ಮರಳಿಸಿಲ್ಲ ಎಂದು ಶಿರಸಿಯ ಗಾಂಧೀನಗರದ ರಾಘವೇಂದ್ರ ಕಲ್ಲಕುಟ್ರ ಮಣಪ್ಪುರಂ ಫೈನಾನ್ಸ್‌ನ ಶಿರಸಿ ಶಾಖೆಯ ಮ್ಯಾನೇಜರ್ ಅರ್ಪಿತಾ ನಾಯ್ಕ ಅವರ ಮೇಲೆ ದೂರು ನೀಡಿದ್ದಾರೆ.
ಹಣಕಾಸಿನ ತುರ್ತು ಅಗತ್ಯಕ್ಕಾಗಿ ರಾಘವೇಂದ್ರ ಅವರು ಶಿರಸಿಯ ಹೊಸಪೇಟೆ ರಸ್ತೆಯಲ್ಲಿರುವ ಮಣಪ್ಪುರಂ ಫೈನಾನ್ಸ್‌ನಲ್ಲಿ ತಮ್ಮ ಚಿನ್ನದ ಚೈನು, ನೆಕ್ಲೇಸ್ ಹಾಗೂ ಬಂಗಾರದ ಹಾರವನ್ನು ಅಡವಿಟ್ಟು 7.80 ಲಕ್ಷ ರೂ. ಸಾಲ ಪಡೆದಿದ್ದರು. ಬಳಿಕ ಸಾಲಕ್ಕೆ ಸಂಬಂಧಿಸಿದಂತೆ ಆಗಾಗ ಅಸಲು ಮತ್ತು ಬಡ್ಡಿ ಪಾವತಿಸುತ್ತಿದ್ದರು ಎನ್ನಲಾಗಿದೆ.
ಅ.5ರಂದು ಫೈನಾನ್ಸ್‌ನ ಶಾಖಾ ಮ್ಯಾನೇಜರ್ ಅರ್ಪಿತಾ ನಾಯ್ಕ ಅವರನ್ನು ಭೇಟಿಯಾದ ರಾಘವೇಂದ್ರ, ಬಾಕಿ ಸಾಲದ ಸಂಪೂರ್ಣ ಮೊತ್ತ ಪಾವತಿಸಿ ಚಿನ್ನ ಬಿಡಿಸಿಕೊಳ್ಳುವುದಾಗಿ ತಿಳಿಸಿದ್ದರು. ಈ ವೇಳೆ ಅ.8ರೊಳಗೆ ಹಣ ಪಾವತಿಸಿದರೆ ಚಿನ್ನ ಮರಳಿಸುವುದಾಗಿ ಮ್ಯಾನೇಜರ್ ಭರವಸೆ ನೀಡಿದ್ದರು ಎಂದು ರಾಘವೇಂದ್ರ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ನಂಬಿದ ಅವರು ಅವರಿವರಿಂದ ಸಾಲ ಪಡೆದು, ಅ.8ರಂದು ಸಂಜೆ 5 ಗಂಟೆಯೊಳಗೆ 8.91 ಲಕ್ಷ ರೂ.ಗಳನ್ನು ಸಂಸ್ಥೆಯ ಖಾತೆಗೆ ವರ್ಗಾಯಿಸಿದ್ದಾಗಿ ತಿಳಿಸಿದ್ದಾರೆ. ಹಣ ಪಾವತಿಸಿದ ಬಳಿಕ ಕಚೇರಿಗೆ ತೆರಳಿ ಚಿನ್ನ ಮರಳಿಸುವಂತೆ ಕೇಳಿದಾಗ, ಮರುದಿನ ಬರುವಂತೆ ತಿಳಿಸಲಾಗಿತ್ತು ಎನ್ನಲಾಗಿದೆ.
ಅದರಂತೆ ಮರುದಿನ ಅ.9ರಂದು ಮತ್ತೆ ಮಣಪ್ಪುರಂ ಕಚೇರಿಗೆ ತೆರಳಿ, ನೀವು ಹೇಳಿದಂತೆ ಪೂರ್ತಿ ಹಣವನ್ನು ಪಾವತಿಸಿದ್ದು, ತಮ್ಮ ಆಭರಣಗಳನ್ನು ವಾಪಸ್ ಕೊಡಿ ಎಂದು ವಿನಂತಿಸಿದ್ದಾರಲ್ಲದೆ, ಈಗಲೂ ಆಭರಣ ನೀಡದಿದ್ದರೆ ಫೈನಾನ್ಸ್‌ನ ರೀಜನಲ್ ಮ್ಯಾನೇಜರ್‌ಗೆ ತಿಳಿಸುತ್ತೇನೆಂದು ಹೇಳಿರುವುದಾಗಿ ರಾಘವೇಂದ್ರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಿಮ್ಮನ್ನು ನಂಬಿಸುವ ಉದ್ದೇಶದಿಂದ ರೀಜನಲ್ ಮ್ಯಾನೇಜರ್ ಅವರ ಸೂಚನೆಯಂತೆಯೇ ಹಾಗೆ ಹೇಳಿದ್ದೇನೆ, ಅವರ ಬೆಂಬಲ ತಮಗಿದೆ. ನಿಮ್ಮ ಬಂಗಾರದ ಆಭರಣ ವಾಪಸ್ ಕೊಡಲು ಆಗುವುದಿಲ್ಲ, ಏನು ಮಾಡುತ್ತೀರೋ ಮಾಡಿಕೊಳ್ಳಿ ಎಂದು ಶಾಖಾ ಮ್ಯಾನೇಜರ್ ಅರ್ಪಿತಾ ನಾಯ್ಕ ಮಾತನಾಡಿರುವುದಾಗಿ ರಾಘವೇಂದ್ರ ಕಲ್ಲಕುಟ್ರ ದೂರಿನಲ್ಲಿ ತಿಳಿಸಿದ್ದಾರೆ.
ಚಿನ್ನ ಬಿಡಿಸಿಕೊಳ್ಳುವ ಉದ್ದೇಶದಿಂದ ಇತರರಿಂದ ಸಾಲ ಪಡೆದಿರುವ ರಾಘವೇಂದ್ರ ಅವರು ಈಗ ಅಡವಿಟ್ಟ ಚಿನ್ನವೂ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಹಣ ಪಾವತಿಸಿದ ಬಳಿಕವೂ ಚಿನ್ನವನ್ನು ಲಪಟಾಯಿಸುವ ಉದ್ದೇಶದಿಂದ ಮೋಸ ಮಾಡಿ ವಂಚಿಸಿದ್ದಾರೆ ಎಂದು ರಾಘವೇಂದ್ರ ಕಲ್ಲಕುಟ್ರ ಶಿರಸಿ ನ್ಯೂ ಮಾರ್ಕೆಟ್ ಠಾಣೆಗೆ ದೂರು ನೀಡಿದ್ದಾರೆ.