Thursday, October 22, 2026
HomeLocal Newsಬನವಾಸಿ ಮಧುಕೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಸಂಪನ್ನ

ಬನವಾಸಿ ಮಧುಕೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಸಂಪನ್ನ

ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೀಮೋಲ್ಲಂಘನ, ಬನ್ನಿ ಮಹಾಕಾಳಿ ಪೂಜೆ

ಬನವಾಸಿ: ಇಲ್ಲಿನ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ಮಧುಕೇಶ್ವರ ದೇವಸ್ಥಾನದಲ್ಲಿ ಹತ್ತು ದಿನಗಳ ಕಾಲ ನಡೆದ ಶರನ್ನವರಾತ್ರಿ ಉತ್ಸವ ಮಂಗಳವಾರ ಸಂಜೆ ಅದ್ದೂರಿಯಾಗಿ ಸಂಪನ್ನಗೊಂಡಿತು.

ಅ. 11ರಂದು ಘಟಸ್ಥಾಪನೆಯೊಂದಿಗೆ ಆರಂಭಗೊಂಡ ಉತ್ಸವದಲ್ಲಿ ಹತ್ತು ದಿನಗಳ ಕಾಲ ದೇವರಿಗೆ ವಿಶೇಷ ಅಲಂಕಾರ, ಪೂಜೆ, ಚಂಡಿ ಪಾರಾಯಣ, ನವಚಂಡಿ ಹವನ, ಪೂರ್ಣಾಹುತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಪ್ರತಿದಿನವೂ ದೇವಸ್ಥಾನದಲ್ಲಿ ಭಕ್ತಿಭಾವದ ವಾತಾವರಣ ಮನೆಮಾಡಿತ್ತು.

ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ಶ್ರೀ ಮಧುಕೇಶ್ವರ ದೇವರ ಲಾಲಕ್ಕಿ ಉತ್ಸವ ಹಾಗೂ ಸೀಮೋಲ್ಲಂಘನ ವೈಭವದಿಂದ ಜರುಗಿತು. ಸಂಜೆ ದೇವಸ್ಥಾನದಿಂದ ಪುರೋಹಿತರು, ತಾಂತ್ರಿಕರು, ಅರ್ಚಕರು, ಉಪಾಧಿವಂತರು, ಬಾಬುದಾರರು ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೀಮೋಲ್ಲಂಘನ ಮೆರವಣಿಗೆ ಆರಂಭಗೊಂಡಿತು. ಮೆರವಣಿಗೆಯು ಸಮೀಪದ ಕಡಗೋಡ ಗ್ರಾಮದ ಬನ್ನಿ ಮಂಟಪವನ್ನು ತಲುಪಿದ ನಂತರ ಅಲ್ಲಿ ಬನ್ನಿ ಮಹಾಕಾಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತರಿಗೆ ಹೊನ್ನಗಂಟು ವಿತರಿಸಲಾಯಿತು. ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡ ಭಕ್ತರು, ಜಯಘೋಷಗಳೊಂದಿಗೆ ವಿಜಯದಶಮಿಯ ಶುಭಾಶಯಗಳನ್ನು ಹಂಚಿಕೊಂಡರು. ಈ ಮೂಲಕ ಬನವಾಸಿಯ ಐತಿಹಾಸಿಕ ಮಧುಕೇಶ್ವರ ದೇವಸ್ಥಾನದ ಶರನ್ನವರಾತ್ರಿ ಉತ್ಸವ ಭಕ್ತಿಪೂರ್ವಕವಾಗಿ ಮುಕ್ತಾಯಗೊಂಡಿತು.

ವರದಿ: ಸುಧೀರ ನಾಯರ್

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share