ತಪ್ಪು ಮಾಡಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲು ಪ್ರತಿಭಟನಾಕಾರರ ಆಗ್ರಹ
ಯಲ್ಲಾಪುರ: ಇಲ್ಲಿನ ಮಾರ್ಕೆಟಿಂಗ್ ಸೊಸೈಟಿಯ ಆಡಳಿತಾಧಿಕಾರಿ ದಮನಕಾರಿ ನೀತಿಯನ್ನು ಖಂಡಿಸಿ ಟಿಎಂಎಸ್ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಹಾಗೂ ಸದಸ್ಯರು ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ರಸ್ತೆ ರೋಖೋ ನಡೆಸಿ ಪ್ರತಿಭಟನೆ ನಡೆಸಿದರು. ಬಳಿಕ ಡೆಪ್ಯೂಟಿ ರಿಜಿಸ್ಟ್ರಾರ್ ಅವರಿಗೆ ಮನವಿ ಸಲ್ಲಿಸಿದರು.
ಬೆಳಿಗ್ಗೆ ಸುಮಾರು 11 ಗಂಟೆಗೆ ಬಸ್ ನಿಲ್ದಾಣ ವೃತ್ತದಲ್ಲಿ ಜಮಾಯಿಸಿದ ರೈತರು ಮತ್ತು ಸೊಸೈಟಿ ಸದಸ್ಯರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿ ಆಡಳಿತಾಧಿಕಾರಿಯ ಕಾರ್ಯವೈಖರಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಟಿಎಂಎಸ್ ಮಾಜಿ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ರೈತರು ಕಟ್ಟಿಕೊಂಡ ಸಂಸ್ಥೆಯನ್ನು ಕೆಲವರು ತಮ್ಮ ಕೈಗೊಂಬೆಯಾಗಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಟಿಎಂಎಸ್ ಜಾಗವನ್ನು ನುಂಗಲು ಹೊರಟವರು ಈಗ ಸೊಸೈಟಿಯ ವ್ಯವಸ್ಥೆಯನ್ನು ಹದಗೆಡಿಸಲು ಸಂಚು ರೂಪಿಸಿದ್ದಾರೆ ಎಂದು ಪರೋಕ್ಷವಾಗಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.
ಸೊಸೈಟಿ ನಿರ್ದೇಶಕ ವೆಂಕಟ್ರಮಣ ಬೆಳ್ಳಿ ಮಾತನಾಡಿ, ಆಡಳಿತಾಧಿಕಾರಿಯ ಮೂಲಕ ಸೊಸೈಟಿಯ ಮೇಲೆ ದರ್ಬಾರು ನಡೆಸಲು ಹೊರಟಿರುವುದು ಸರಿಯಲ್ಲ. ಎಲ್ಲವೂ ತಮ್ಮ ಕಪಿಮುಷ್ಠಿಯಲ್ಲಿ ಇರಬೇಕೆಂಬ ದುರಹಂಕಾರದಿಂದ ಉತ್ತಮ ಸಹಕಾರಿ ಸಂಘಗಳು ಹಾಳಾಗುವಂತಾಗಿದೆ. ಇದರಿಂದ ಜನರಲ್ಲಿ ಗೊಂದಲ ಉಂಟಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಘವ ಭಟ್ಟ ಮಾತನಾಡಿ, ಠರಾವು ನಿರ್ಣಯಿಸುವ ಅಧಿಕಾರ ಆಡಳಿತಾಧಿಕಾರಿಗೆ ಕೊಟ್ಟವರು ಯಾರು? ಠರಾವು ಪುಸ್ತಕ ಹೊರಗೆ ಹೇಗೆ ಹೋಯಿತು? ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿದರು.
ಪ್ರಸಾದ ಹೆಗಡೆ ಮಾತನಾಡಿ, ಈ ಷಡ್ಯಂತ್ರದ ಹಿಂದೆ ಸ್ಥಳೀಯ ಶಾಸಕರ ಪಾತ್ರವಿದೆ ಎಂದು ಆರೋಪಿಸಿದರು. ಹಿರಿಯ ಮುಖಂಡ ಪ್ರಮೋದ ಹೆಗಡೆ ಮಾತನಾಡಿ, ರೈತರ ಸಂಕಷ್ಟದ ಸಮಯದಲ್ಲಿ ಆಡಳಿತಾಧಿಕಾರಿ ಕಾನೂನು ಮೀರಿ ನಡೆದುಕೊಳ್ಳುವುದು ಸರಿಯಲ್ಲ. ಮಾರ್ಚ್ ತಿಂಗಳಲ್ಲಿ ರೈತರು ಸಾಲ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವುಗಳನ್ನು ಬಗೆಹರಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ಮನವಿ ಸ್ವೀಕರಿಸಿದ ಡೆಪ್ಯೂಟಿ ರಿಜಿಸ್ಟ್ರಾರ್ ಸಂಜೆಯೊಳಗೆ ಆಡಳಿತಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆರಂಭದಲ್ಲಿ ಆಡಳಿತಾಧಿಕಾರಿಯ ವರ್ಗಾವಣೆ ತನ್ನ ವ್ಯಾಪ್ತಿಯಲ್ಲಿ ಇಲ್ಲ ಎಂದು ಅವರು ತಿಳಿಸಿದಾಗ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ನಮ್ಮ ಬೇಡಿಕೆ ಈಡೇರಿಸುವ ತನಕ ನಾವು ಇಲ್ಲಿಂದ ತೆರಳುವುದಿಲ್ಲ” ಎಂದು ಪಟ್ಟು ಹಿಡಿದರು. ನಂತರ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವುದಾಗಿ ಡೆಪ್ಯೂಟಿ ರಿಜಿಸ್ಟ್ರಾರ್ ತಿಳಿಸಿದರು.
ಧರಣಿಯಲ್ಲಿ ವೆಂಕಟ್ರಮಣ ಓಂಕಾರ ಭಟ್ಟ, ಸುಬ್ಬಣ್ಣ ದಾನ್ಯಾಕೊಪ್ಪ, ನಾಗರಾಜ ಕವಡಿಕೇರಿ, ಗೋಪಾಲಕೃಷ್ಣ ಗಾಂವ್ಕಾರ್, ಸುಬ್ಬಣ್ಣ ಉದ್ದಾಬೈಲ್, ಕೆ.ಟಿ. ಹೆಗಡೆ, ರಾಮಕೃಷ್ಣ ಅಳವೆಗದ್ದೆ, ನಟರಾಜ ಗೌಡರ್, ಅಪ್ಪು ಆಚಾರಿ, ರವಿ ಕೈಟಕರ್, ಗಾಂವ್ಕಾರ್, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬಸ್ ನಿಲ್ದಾಣ ವೃತ್ತದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ರಸ್ತೆ ತಡೆ ನಡೆಯಿತು. ಸಿಪಿಐ ರಮೇಶ್ ಹಾನಾಪುರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ತಹಸೀಲ್ದಾರರು ಕೂಡ ಸ್ಥಳದಲ್ಲಿದ್ದರು.