Home Local News ಅಧಿಕಾರದ ವ್ಯಾಪ್ತಿ ಮೀರಿದ ಟಿಎಂಎಸ್ ಆಡಳಿತಾಧಿಕಾರಿ: ನಾಳೆ ಯಲ್ಲಾಪುರದಲ್ಲಿ ಪ್ರತಿಭಟನೆ

ಅಧಿಕಾರದ ವ್ಯಾಪ್ತಿ ಮೀರಿದ ಟಿಎಂಎಸ್ ಆಡಳಿತಾಧಿಕಾರಿ: ನಾಳೆ ಯಲ್ಲಾಪುರದಲ್ಲಿ ಪ್ರತಿಭಟನೆ

0
52

ಯಲ್ಲಾಪುರ: ಟಿಎಂಎಸ್ ಸಂಸ್ಥೆಯ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸುತ್ತಿರುವ ಆಡಳಿತಾಧಿಕಾರಿಗಳ ದಮನಕಾರಿ ನೀತಿಯನ್ನು ವಿರೋಧಿಸಿ ಟಿಎಂಎಸ್ ಉಳಿಸಿ ಹೋರಾಟ ಸಮಿತಿ ವತಿಯಿಂದ ಮಾರ್ಚ್ 11ರಂದು ಬೆಳಿಗ್ಗೆ 10.30ಕ್ಕೆ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೋರಾಟ ಸಮಿತಿ ಪರವಾಗಿ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಯಲ್ಲಾಪುರದ ಎಪಿಎಂಸಿ ಆವರಣದಲ್ಲಿರುವ ಟಿಎಂಎಸ್ ಸಂಸ್ಥೆಯ ಎದುರು ಈ ಪ್ರತಿಭಟನೆ ನಡೆಯಲಿದ್ದು, ಸಾವಿರಾರು ಸದಸ್ಯರ ಹಕ್ಕುಗಳನ್ನು ಹಿಂಬಾಗಿಲಿನಿಂದ ಕಡಿತಗೊಳಿಸುವ ಮೂಲಕ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರ ಹಿಡಿಯಲು ಯತ್ನಿಸುತ್ತಿರುವುದು ಸದಸ್ಯರ ಗಮನಕ್ಕಿದೆ.

Ad

ಸಂಸ್ಥೆಯ ಹಾಗೂ ಸದಸ್ಯರ ಹಿತ ಕಾಪಾಡುವ ಉದ್ದೇಶದಿಂದ ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೂ ತರುವಂತಾಗಿದೆ. ನ್ಯಾಯಾಲಯದ ತೀರ್ಪು ಬರಬೇಕಿರುವ ಸಂದರ್ಭದಲ್ಲಿ ದೈನಂದಿನ ಚಟುವಟಿಕೆಗಳನ್ನು ಮಾತ್ರ ನಡೆಸಬೇಕಾಗಿರುವ ಆಡಳಿತಾಧಿಕಾರಿ ತಮ್ಮ ವ್ಯಾಪ್ತಿಯನ್ನು ಮೀರಿ ಸಂಸ್ಥೆಗೆ ದೀರ್ಘಕಾಲದ ಪರಿಣಾಮ ಬೀರುವ ಮಹತ್ವದ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲು ಮುಂದಾಗಿರುವುದು ಸದಸ್ಯರಲ್ಲಿ ಆತಂಕ ಮೂಡಿಸಿದೆ ಎಂದು ಸಮಿತಿ ಹೇಳಿದೆ.

ಕೇವಲ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಬೇಕಿದ್ದ ಆಡಳಿತಾಧಿಕಾರಿಗಳು ಸ್ವಂತಿಕೆಯಿಂದ ಅಥವಾ ಯಾರದೋ ಒತ್ತಡಕ್ಕೆ ಮಣಿದೋ, ಮಹತ್ವದ ತೀರ್ಮಾನ ಕೈಗೊಳ್ಳಲು ಮುಂದಾಗಿರುವುದು ಸಂಘಕ್ಕೆ ಹಾಗೂ ಸಂಘದ ಸದಸ್ಯರ ಮೇಲೆ ದೀರ್ಘ ಕಾಲೀನ ಪರಿಣಾಮ ಬೀರಲಿದೆ.

ಈ ಹಿನ್ನೆಲೆಯಲ್ಲಿ ಕಾಯ್ದೆ ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಆಡಳಿತಾಧಿಕಾರಿಯನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಮಾರ್ಚ್ 11ರಂದು ಬೆಳಿಗ್ಗೆ 10.30ಕ್ಕೆ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ಇದಕ್ಕೂ ಉನ್ನತ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಮಾರ್ಚ್ 12ರಂದು ಬೆಳಿಗ್ಗೆ 11 ಗಂಟೆಗೆ ರಸ್ತೆ ತಡೆ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ಟಿಎಂಎಸ್ ಸದಸ್ಯರು, ರೈತರು ಹಾಗೂ ವ್ಯವಹಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಿ ಸಂಸ್ಥೆಯ ಹಿತ ಕಾಯಲು ಸಹಕರಿಸಬೇಕು ಎಂದು ಹೋರಾಟ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ಪರವಾಗಿ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಕೋರಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!