Friday, July 24, 2026
Join WhatsApp Group
HomeStateಚೀನಾದ ಹಾರ್ಡ್‌ವೇರ್‌, ಬಾಂಗ್ಲಾದ ಸಾಫ್ಟ್‌ವೇರ್!‌

ಚೀನಾದ ಹಾರ್ಡ್‌ವೇರ್‌, ಬಾಂಗ್ಲಾದ ಸಾಫ್ಟ್‌ವೇರ್!‌

ಫಾರಿನ್‌ ಕಾಲ್‌ಗಳನ್ನೂ ಲೋಕಲ್‌ ಕಾಲ್‌ ಆಗಿ ಪರಿವರ್ತಿಸಿ ಮೋಸ!

ಭುವನೇಶ್ವರ: ನಗರದ ಚಂದ್ರಶೇಖರ್‌ಪುರ ಪ್ರದೇಶದ ಬಾಲಕರ ಹಾಸ್ಟೆಲ್‌ನಲ್ಲಿ ನಡೆದ ದಾಳಿಯಲ್ಲಿ ಕಮಿಷನರೇಟ್ ಪೊಲೀಸರು 12 ಸಿಮ್ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳನ್ನು ಚೀನಾದಿಂದ ತರಲಾಗಿತ್ತು ಎಂದು ತಿಳಿದುಬಂದಿದ್ದು, ಈ ಪ್ರಕರಣದಲ್ಲಿ ಕೇರಳ ಮೂಲದ ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತರನ್ನು 27 ವರ್ಷದ ಉಮ್ಮರ್ ಎಂ ಹಾಗೂ 28 ವರ್ಷದ ಸಿಯಾಹುಲ್ ಹಕ್ ಎಂದು ಗುರುತಿಸಲಾಗಿದೆ. ಉಮ್ಮರ್ ಸಿವಿಲ್ ಎಂಜಿನಿಯರಿಂಗ್ ಪದವಿ ಮಧ್ಯದಲ್ಲೇ ನಿಲ್ಲಿಸಿದ್ದರೆ, ಸಿಯಾಹುಲ್ ಹಕ್ 12ನೇ ತರಗತಿ ಪೂರ್ಣಗೊಳಿಸಿದ್ದಾನೆ.

ಡಿಸಿಪಿ ಜಗ್ಮೋಹನ್ ಮೀನಾ ಮಾಹಿತಿ ನೀಡುವಂತೆ, ಸೈಬರ್ ಕ್ರೈಮ್ ಪೊಲೀಸರು ಹಾಗೂ ದೂರಸಂಪರ್ಕ ಇಲಾಖೆಯ (DoT) ಅಧಿಕಾರಿಗಳು ಗುಪ್ತಚರ ಮಾಹಿತಿ ಆಧರಿಸಿ ದಾಳಿ ನಡೆಸಿದರು. ಈ ವೇಳೆ ನೂರಾರು ಸಿಮ್ ಕಾರ್ಡ್‌ಗಳು, ರೌಟರ್‌ಗಳು, ಲ್ಯಾಪ್‌ಟಾಪ್ ಸೇರಿದಂತೆ ಹಲವು ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಆರೋಪಿಗಳು ನಾಲ್ಕು ತಿಂಗಳ ಹಿಂದೆ ಕೇರಳದಿಂದ ಭುವನೇಶ್ವರಕ್ಕೆ ಬಂದು ಬಾಡಿಗೆ ಮನೆಯಲ್ಲಿ ಅನಧಿಕೃತವಾಗಿ VoIP (Voice over Internet Protocol) ವ್ಯವಸ್ಥೆ ನಡೆಸುತ್ತಿದ್ದರು. ಇದಕ್ಕಾಗಿ ಚೀನಾದ ಕಂಪನಿಯು ಅಭಿವೃದ್ಧಿಪಡಿಸಿದ VOS 3000 ಆಪ್ ಅನ್ನು ಬಳಸುತ್ತಿದ್ದರು.

ಈ ಸಿಮ್ ಬಾಕ್ಸ್‌ಗಳ ಸಹಾಯದಿಂದ ಮಧ್ಯಪ್ರಾಚ್ಯ ಸೇರಿದಂತೆ ಇತರ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಂತೆ ಪರಿವರ್ತಿಸಿ, ಸಾಮಾನ್ಯ ಜನರನ್ನು ವಂಚಿಸುತ್ತಿದ್ದರು. ಪ್ರಾಥಮಿಕ ತನಿಖೆಯಲ್ಲಿ ಸಿಮ್ ಬಾಕ್ಸ್‌ಗಳನ್ನು ಚೀನಾದಿಂದ ಹಾಗೂ ಸಾಫ್ಟ್‌ವೇರ್ ಅನ್ನು ಬಾಂಗ್ಲಾದೇಶದಿಂದ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ.

ವಿಶೇಷ ದಳದ ಎಸಿಪಿ ಹಿಮಾನ್ಸು ಭೂಷಣ್ ಸ್ವೈನ್ ಹೇಳುವಂತೆ, ಪ್ರತಿ ತಿಂಗಳು ಸುಮಾರು 100ರಿಂದ 150 ಸಿಮ್‌ಗಳನ್ನು ಬಳಸಲಾಗುತ್ತಿತ್ತು. ಈ ಸಂಪೂರ್ಣ ವ್ಯವಸ್ಥೆಯ ನಿಯಂತ್ರಣ ಚೀನಾದಲ್ಲಿದ್ದ ಮಾಸ್ಟರ್‌ಮೈಂಡ್‌ ಕೈಯಲ್ಲಿದ್ದು, ಪ್ರತಿಯೊಬ್ಬ ಆರೋಪಿಗೂ ತಿಂಗಳಿಗೆ 1 ಲಕ್ಷದಿಂದ 1.5 ಲಕ್ಷ ಅಮೆರಿಕನ್ ಡಾಲರ್‌ಗಳವರೆಗೆ ಹಣ ಪಾವತಿಸಲಾಗುತ್ತಿತ್ತು.

ಪ್ರಕರಣದ ವ್ಯಾಪಕ ಜಾಲವನ್ನು ಪತ್ತೆಹಚ್ಚಲು ಹಾಗೂ ಇತರರು ಭಾಗಿಯಾಗಿರುವ ಸಾಧ್ಯತೆಯನ್ನು ಪರಿಶೀಲಿಸಲು ಮುಂದಿನ ತನಿಖೆ ಮುಂದುವರಿದಿದೆ. 2024ರಲ್ಲಿ ಕೂಡ ಲಕ್ಸ್ಮೀ ಸಾಗರ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಅರ್ಧ ಡಜನ್‌ಗಿಂತ ಹೆಚ್ಚು ಸಿಮ್ ಬಾಕ್ಸ್‌ಗಳನ್ನು ವಶಪಡಿಸಿಕೊಂಡು ಒಬ್ಬರನ್ನು ಬಂಧಿಸಲಾಗಿತ್ತು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share