Saturday, May 30, 2026
HomeLocal Newsಎಲ್‌ಪಿಜಿ ಸಿಲಿಂಡರ್‌ ಸಿಗುತ್ತೆ, ಚಿಂತೆ ಬಿಡಿ!

ಎಲ್‌ಪಿಜಿ ಸಿಲಿಂಡರ್‌ ಸಿಗುತ್ತೆ, ಚಿಂತೆ ಬಿಡಿ!

ಕಾರವಾರ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಬಳಕೆಯ ಅನಿಲ ಸರಬರಾಜು ವ್ಯವಸ್ಥೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗಿಲ್ಲ. ಗೃಹಬಳಕೆ ಅನಿಲದ ದೈನಂದಿನ ಸರಬರಾಜು ಮತ್ತು ವಿತರಣೆಯಲ್ಲಿ ಯಾವುದೇ ಅಡಚಣೆ ಇಲ್ಲದೇ ಎಂದಿನಂತೆ ನಡೆಯುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಅನಗತ್ಯ ಗೊಂದಲ ಮತ್ತು ಆತಂಕಗಳಿಗೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಅವರು ಗುರುವಾರ ಜಿಲ್ಲೆಗೆ ಅನಿಲ ಸರಬರಾಜು ಮಾಡುವ ಕಂಪನಿಗಳ ಅಧಿಕಾರಿಗಳು ಮತ್ತು ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ಉತ್ತರ ಕನ್ನಡ ಜಿಲ್ಲೆಗೆ ಅನಿಲ ಸರಬರಾಜು ಮಾಡುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಕಂಪನಿಗಳ ಅಧಿಕಾರಿಗಳೊಂದಿಗೆ ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ, ಎಲ್ಲಾ ಕಂಪನಿಗಳು ಜಿಲ್ಲೆಯ ದೈನಂದಿನ ಬೇಡಿಕೆಗೆ ತಕ್ಕಂತೆ ಗೃಹ ಬಳಕೆಯ ಅನಿಲ ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ಗೃಹ ಬಳಕೆಯ ಅನಿಲ ಸರಬರಾಜು ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಯಿಲ್ಲ, ಕಳೆದ ಒಂದು ದಿನ ಮಾತ್ರ ಗ್ಯಾಸ್ ಮುಂಗಡ ಬುಕ್ಕಿಂಗ್‌ನಲ್ಲಿ ತಾಂತ್ರಿಕ ತೊಂದರೆ ಕಂಡುಬಂದಿದ್ದು, ಪ್ರಸ್ತುತ ಆ ದೋಷವನ್ನು ಸರಿಪಡಿಸಲಾಗಿದೆ. ಸಾರ್ವಜನಿಕರು ಗೃಹ ಬಳಕೆ ಅನಿಲ ಮುಂಗಡ ಬುಕಿಂಗ್ ನ್ನು ಮೊಬೈಲ್ ಮಿಸ್ ಕಾಲ್ ಮೂಲಕ ಮಾತ್ರವೇ ಮಾಡದೇ ಇತರೇ ವಿಧಾನಗಳಾದ ಐ.ವಿ.ಆರ್.ಎಸ್, ವಾಟ್ಸಾಪ್, ಮೊಬೈಲ್ ಅಪ್ಲಿಕೇಶನ್ ಮತ್ತು ಪಾವತಿ ಅಪ್ಲಿಕೇಶನ್ ವಿಧಾನಗಳನ್ನು ಕೂಡಾ ಬಳಸಬಹುದಾಗಿದೆ ಎಂದರು.

ಜಿಲ್ಲೆಯಲ್ಲಿನ ಅಂಗನವಾಡಿಗಳು, ಶಾಲೆಗಳು, ಆಸ್ಪತ್ರೆಗಳು, ಸರ್ಕಾರಿ ಹಾಸ್ಟೆಲ್‌ಗಳು ಮತ್ತು ಇಂದಿರಾ ಕ್ಯಾಂಟೀನ್‌ಗಳ ದೈನಂದಿನ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಆದ್ಯತೆಯಲ್ಲಿ ಅನಿಲ ಸರಬರಾಜು ಮಾಡುವಂತೆ ತಿಳಿಸಿದ ಅವರು, ವಾಣಿಜ್ಯ ಬಳಕೆಯ ಸಿಲೆಂಡರ್‌ಗಳ ಸರಬರಾಜು ಮತ್ತು ವಿತರಣೆ ಕುರಿತಂತೆ ಸರ್ಕಾರ ನೀಡುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಸಾರ್ವಜನಿಕರು ಅನಿಲ ಪೂರೈಕೆ ಕುರಿತಂತೆ  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಯಾವುದೇ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಆಹಾರ ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ್ ಹಾಗೂ ವರ್ಚುವಲ್ ಮೂಲಕ ಅನಿಲ ಸರಬರಾಜು ಕಂಪನಿಗಳ ಅಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ತಾಲೂಕುಗಳ ಅನಿಲ ಸರಬರಾಜುದಾರರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share