Friday, July 24, 2026
Join WhatsApp Group
HomeStateಆಟೋ ಗ್ಯಾಸ್ ಟ್ರಬಲ್; ಸಬ್‌ ಠೀಕ್‌ ಹೈ!

ಆಟೋ ಗ್ಯಾಸ್ ಟ್ರಬಲ್; ಸಬ್‌ ಠೀಕ್‌ ಹೈ!

ಕಾರವಾರ: ರಾಜ್ಯದ ವಿವಿಧ ಆಟೋ ಗ್ಯಾಸ್ ಬಂಕ್‌ಗಳಲ್ಲಿ ಅನಿಲದ ದಾಸ್ತಾನು ಕೊರತೆಯಿದೆ ಎಂಬ ತಪ್ಪು ಮಾಹಿತಿಯ ಆಧಾರದ ಮೇಲೆ, ಕಳೆದ ಕೆಲವು ದಿನಗಳಿಂದ ಆಟೋ ಮಾಲೀಕರು ಮತ್ತು ಚಾಲಕರು ಬಂಕ್‌ಗಳ ಮುಂದೆ ಸುದೀರ್ಘ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಅಂಶ ಸರ್ಕಾರದ ಗಮನಕ್ಕೆ ಬಂದಿದೆ.

ಈ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಕೇವಲ ವದಂತಿಗಳಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸ್ಪಷ್ಟಪಡಿಸಿದೆ.

ಕೆಲವು ಖಾಸಗಿ ಆಟೋ ಗ್ಯಾಸ್ ಸರಬರಾಜು ಸಂಸ್ಥೆಗಳಲ್ಲಿ ಮಾತ್ರ ಅಲ್ಪಮಟ್ಟಿನ ಕೊರತೆ ಕಂಡುಬಂದಿದ್ದು, ಇದನ್ನು ಸರಿಪಡಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ IOC (ಇಂಡಿಯನ್ ಆಯಿಲ್), BPC (ಭಾರತ್ ಪೆಟ್ರೋಲಿಯಂ) ಮತ್ತು HPC (ಹಿಂದೂಸ್ತಾನ್ ಪೆಟ್ರೋಲಿಯಂ) ಮೂಲಕ ಹೆಚ್ಚಿನ ಪ್ರಮಾಣದ ಅನಿಲವನ್ನು ಪೂರೈಕೆ ಮಾಡಲಾಗುತ್ತಿದೆ.

ಹಿಂದೆ ಈ ಮೂರು ಸಂಸ್ಥೆಗಳು ಸರಾಸರಿ 56.67 ಮೆಟ್ರಿಕ್ ಟನ್ ಆಟೋ ಗ್ಯಾಸ್ ಅನ್ನು ಸರಬರಾಜು ಮಾಡುತ್ತಿದ್ದವು. ಆದರೆ ಪ್ರಸ್ತುತ ಬೇಡಿಕೆಯನ್ನು ಪೂರೈಸಲು ಸರಬರಾಜು ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಸದ್ಯ ಪ್ರತಿದಿನ ಸರಾಸರಿ 83.58 ಮೆಟ್ರಿಕ್ ಟನ್ ಗ್ಯಾಸ್ ಅನ್ನು ಚಿಲ್ಲರೆ ಮಾರಾಟ ಮಳಿಗೆಗಳಿಗೆ ಪೂರೈಸಲಾಗುತ್ತಿದೆ.

ಕಳೆದ ಐದು ದಿನಗಳ ಪೂರೈಕೆ ವಿವರ: ಕಳೆದ ಏಪ್ರಿಲ್ 2ರಿಂದ ಏಪ್ರಿಲ್ 6ರವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ, ಪೂರೈಕೆಯಲ್ಲಿ ಸ್ಥಿರತೆ ಇರುವುದು ಕಂಡುಬರುತ್ತದೆ. ಏಪ್ರಿಲ್ 2ರಂದು 87.78 ಮೆಟ್ರಿಕ್ ಟನ್, ಏಪ್ರಿಲ್ 3ರಂದು 86.05 ಮೆಟ್ರಿಕ್ ಟನ್, ಏಪ್ರಿಲ್ 4ರಂದು 84.80 ಮೆಟ್ರಿಕ್ ಟನ್, ಏಪ್ರಿಲ್ 5ರಂದು ಗರಿಷ್ಟ 94.11 ಮೆಟ್ರಿಕ್ ಟನ್ ಹಾಗೂ ಏಪ್ರಿಲ್ 6ರಂದು 83.58 ಮೆಟ್ರಿಕ್ ಟನ್ ಅನಿಲವನ್ನು ಈ ಮೂರು ಪ್ರಮುಖ ಸಂಸ್ಥೆಗಳು ಯಶಸ್ವಿಯಾಗಿ ಪೂರೈಕೆ ಮಾಡಿವೆ.

ಆದ್ದರಿಂದ, ರಾಜ್ಯದ ಆಟೋ ಮಾಲೀಕರು ಮತ್ತು ಚಾಲಕರು ಇಂತಹ ಯಾವುದೇ ಸುಳ್ಳು ವದಂತಿಗಳನ್ನು ನಂಬಬಾರದು ಮತ್ತು ಆತಂಕಕ್ಕೊಳಗಾಗಿ ಬಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲಬಾರದು ಎಂದು ಸರ್ಕಾರ ಮನವಿ ಮಾಡಿದೆ.

ಅನಿಲ ಪೂರೈಕೆ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share