ಯಲ್ಲಾಪುರ: ದೇವಸ್ಥಾನಗಳಲ್ಲಿ ಧರ್ಮ ಶಿಕ್ಷಣ ನಡೆಯಬೇಕು ಎಂಬುದು ನಮ್ಮ ಪೂರ್ವಜರ ಸಂಕಲ್ಪವಾಗಿದ್ದು, ಇಂದಿನ ಕಾಲದಲ್ಲೂ ಅದನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ ಎಂದು ವಾಗ್ಮಿ Chakravarthy Sulibele ಹೇಳಿದರು.
ತಾಲೂಕಿನ ಆನಗೋಡದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಅಷ್ಟಬಂಧ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, “ನಮ್ಮ ಇತಿಹಾಸ ಮತ್ತು ಧಾರ್ಮಿಕ ಪರಂಪರೆಗಳ ಬಗ್ಗೆ ತಿಳಿಸುವುದೇ ಕೆಲವರಿಗೆ ತಪ್ಪಾಗಿ ಕಾಣುತ್ತಿದೆ. ಇದು ವಿಷಾದನೀಯ ಸಂಗತಿ” ಎಂದು ಅಭಿಪ್ರಾಯಪಟ್ಟರು.
“ಮಂದಿರಗಳ ಪುನರಾತ್ಥಾನಗಳ ಮೂಲಕವೇ ಭಾರತ ಮರುನಿರ್ಮಾಣಗೊಂಡಿದೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೂ ಶತಮಾನಗಳ ಹೋರಾಟ ನಡೆದಿದೆ. ಆದರೆ ನಿಜವಾದ ಸಂಕಲ್ಪ ಬಂದಾಗ ಅದು ಸಾಧ್ಯವಾಯಿತು.
ನಮ್ಮ ಹಿರಿಯರ ಕನಸುಗಳನ್ನು ಸಾಕಾರಗೊಳಿಸುವ ಜೊತೆಗೆ, ಸಮಾಜದ ಮೇಲೆ ಆಗುವ ಪ್ರಹಾರಗಳನ್ನು ತಡೆಯಲು ನಾವು ಸಿದ್ಧರಾಗಬೇಕು” ಎಂದರು.
ಇಂದಿನ ಯುವ ಪೀಳಿಗೆಯ ಬಗ್ಗೆ ಮಾತನಾಡಿದ ಅವರು, “ಮೊಬೈಲ್‌ಗಳ ಮಾಯಾಜಾಲದಲ್ಲಿ ಮಕ್ಕಳು ಸಿಲುಕುತ್ತಿದ್ದಾರೆ. ಇದರಿಂದ ಅವರ ಬದುಕು ತಪ್ಪು ದಿಕ್ಕಿಗೆ ಹೋಗುವ ಸಾಧ್ಯತೆ ಇದೆ.
ದೇವಸ್ಥಾನಗಳು ಸಮಾಜವನ್ನು ಜಾಗೃತಿಗೊಳಿಸಿ, ಮನಸ್ಸುಗಳನ್ನು ಕಟ್ಟುವ ಕೇಂದ್ರಗಳಾಗಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾರಾಯಣ ಕಾಮೇಶ್ವರ ಭಟ್ಟ ಅಗ್ಗಾಶಿಕುಂಬ್ರಿ, ವಿದ್ವಾನ್ ಗಣಪತಿ ರಾ. ಭಟ್ಟ ಅಂಗಭಟ್ರಮನೆ, ಸತೀಶ ಯಲ್ಲಾಪುರ, ಗಿರೀಶ ಭಟ್ಟ ಅಗ್ಗಾಶಿಮನೆ, ಅರ್ಚಕ ಗೋಪಾಲಕೃಷ್ಣ ಭಟ್ಟ ಮತ್ತು ಮಹಾದೇವಿ ಭಟ್ಟ ಅವರನ್ನು ಸನ್ಮಾನಿಸಲಾಯಿತು.
ದೇವಸ್ಥಾನ ಸಮಿತಿಯ ಅಧ್ಯಕ್ಷ ಗಣಪತಿ ಮಾನಿಗದ್ದೆ ಅಧ್ಯಕ್ಷತೆ ವಹಿಸಿ, ದೇವಾಲಯ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದವರನ್ನು ಸ್ಮರಿಸಿದರು. ಗಣೇಶ ಹೆಗಡೆ ನೆರ್ಲೆಮನೆ ಸ್ವಾಗತಿಸಿದರು. ವಿಶ್ವದರ್ಶನ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸತೀಶ ಯಲ್ಲಾಪುರ ಕಾರ್ಯಕ್ರಮ ನಿರ್ವಹಿಸಿದರೆ, ದೇವಸ್ಥಾನದ ಕಾರ್ಯದರ್ಶಿ ನರಸಿಂಹ ವಡಗಿರಿಪಾಲ್ ವಂದಿಸಿದರು.