Friday, July 24, 2026
Join WhatsApp Group
HomeLocal Newsಪೊಲೀಸರಲ್ಲಿ ಕರ್ತವ್ಯ ಪ್ರಜ್ಞೆ ಸದಾ ಜಾಗೃತವಾಗಿರಲಿ

ಪೊಲೀಸರಲ್ಲಿ ಕರ್ತವ್ಯ ಪ್ರಜ್ಞೆ ಸದಾ ಜಾಗೃತವಾಗಿರಲಿ

ಕಾರವಾರ: ಪೊಲೀಸ್ ಸಿಬ್ಬಂದಿಗಳಲ್ಲಿ ಕರ್ತವ್ಯ ಪ್ರಜ್ಞೆ ಸದಾ ಕಾಲ ಜಾಗೃತವಾಗಿರಬೇಕು ಮತ್ತು ಯಾವುದೇ ತುರ್ತು ಸಂದರ್ಭದಲ್ಲಿ ತಕ್ಷಣ ಸೇವೆಗೆ ಲಭ್ಯರಿರಬೇಕು ಎಂದು ಡಿಐಜಿಪಿ (ತರಬೇತಿ) ಡಿ.ದೇವರಾಜ ಹೇಳಿದರು.

ಅವರು ಶುಕ್ರವಾರ ಕಾರವಾರದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 15ನೇ ತಂಡದಲ್ಲಿ 101 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಣಾರ್ಥಿಗಳ ಬುನಾದಿ ತರಬೇತಿಯ ನಿರ್ಗಮನ ಪಥಸಂಚಲನದಲ್ಲಿ ಕವಾಯತು ಪರಿವೀಕ್ಷಣೆ ನಡೆಸಿ, ಬಹುಮಾನ ವಿತರಿಸಿ ಮಾತನಾಡಿದರು.

ಪೊಲೀಸ್ ಇಲಾಖೆಯಲ್ಲಿ ಶಿಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮಹತ್ತರ ಜವಾಬ್ದಾರಿ ಇಲಾಖೆಗಿದ್ದು, ಯಾವುದೇ ಸಂದರ್ಭದಲ್ಲಿ ಕರೆ ಬಂದರೂ ಕರ್ತವ್ಯಕ್ಕೆ ಹಾಜರಾಗಿ, ತುರ್ತು ಸಂದರ್ಭಗಳನ್ನು ಧೈರ್ಯವಾಗಿ ಎದುರಿಸಬೇಕು ಎಂದರು.

ಇತ್ತೀಚಿನ ವರ್ಷಗಳಲ್ಲಿ ಇಲಾಖೆಗೆ ಹೆಚ್ಚಿನ ಸಂಖ್ಯೆಯ ಸ್ನಾತಕೋತ್ತರ ಪದವೀಧರರು, ಇಂಜಿನಿಯರ್‌ಗಳು, ಪದವೀಧರರು ನೇಮಕಗೊಳ್ಳುತ್ತಿದ್ದು, ನಿಮ್ಮ ಜ್ಞಾನವು ಇಲಾಖೆಗೆ ಸದ್ಬಳಕೆಯಾಗಲಿ ಎಂದ ಅವರು, ಯಾವುದೇ ಸಂದರ್ಭದಲ್ಲೂ ವೃತ್ತಿಪರತೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಹಾಗೂ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಕೃಷ್ಣಮೂರ್ತಿ ಜಿ, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಪ್ರಶಿಕ್ಷಣಾರ್ಥಿಗಳ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ತರಬೇತಿಯಲ್ಲಿ ಹೊರಾಂಗಣದಲ್ಲಿ ಉತ್ತಮ ಸಾಧನೆ ತೋರಿದ, ದೋಂಟಿರಾ ಪರ್ಸೆ, ರಂಗನಾಥ್, ಶಿವರಾಜ್ ಹಾಗೂ ಒಳಾಂಗಣದಲ್ಲಿ ಉತ್ತಮ ಸಾಧನೆ ತೋರಿದ ಮುರಳಿ, ಅನಿಲ್ ಕುಮಾರ್, ಅನ್ವರ್‌ಸಾಬ್ ನದಾಫ್ ಮತ್ತು ಪೈರಿಂಗ್ ನಲ್ಲಿ ಉತ್ತಮ ಸಾಧನೆ ತೋರಿದ ಶಿವಪ್ಪ ದೇವರಮನಿ, ವೀರೇಶ್ ಮಡಿವಾಳ, ದೋಂಟಿರಾ ಪರ್ಸೆ ಅವರಿಗೆ ಬಹುಮಾನ ವಿತರಿಸಲಾಯಿತು. ತರಬೇತಿಯ ಸರ್ವೋತ್ತಮ ಪ್ರಶಸ್ತಿಯನ್ನು ದೋಂಟಿರಾ ಪರ್ಸೆ ಪಡೆದರು.

ಪ್ರಶಿಕ್ಷಣಾರ್ಥಿಗಳಿಗೆ ಒಳಾಂಗಣ ಹಾಗೂ ಹೊರಾಂಗಣ ವಿಷಯದಲ್ಲಿ ತರಬೇತಿಯನ್ನು ಪ್ರತ್ಯೇಕವಾಗಿ ನೀಡಲಾಗಿದ್ದು, ಒಳಾಂಗಣ ತರಬೇತಿಯಲ್ಲಿ ಪ್ರಚಲಿತ ಮಹತ್ವದ ವಿಷಯಗಳೊಂದಿಗೆ 3 ಹೊಸ ಕಾನೂನುಗಳ ಅಧಿನಿಯಮಗಳು, ಪೋಲೀಸ್ ಕೈಪಿಡಿ (ಪೊಲೀಸ್ ಮ್ಯಾನ್ಯುಯಲ್), 19 ವಿವಿಧ ಸ್ಥಳೀಯ ಮತ್ತು ವಿಶೇಷ ಕಾನೂನುಗಳು ಹಾಗೂ ಮಾನಸಿಕ ಆರೋಗ್ಯ, ಒತ್ತಡ ನಿವಾರಣೆ, ನಾಗರಿಕ ರಕ್ಷಣೆ, ವಿಪತ್ತು ನಿರ್ವಹಣೆ, ಗಣಕಯಂತ್ರ ಪ್ರಾಯೋಗಿಕ ತರಬೇತಿ ಮುಂತಾದವುಗಳ ಬಗ್ಗೆ ಅತಿಥಿ ಉಪನ್ಯಾಸಕರಿಂದ ಹಾಗೂ ಪೊಲೀಸ್ ಅಧಿಕಾರಿಗಳಿಂದ ಬೋಧನೆಯನ್ನು ನೀಡಲಾಗಿದೆ.

ತರಬೇತಿಯ ಅವಧಿಯಲ್ಲಿ ಜನಸಂದಣೆಯನ್ನು ನಿರ್ವಹಣೆಯ ಪ್ರಾಯೋಗಿಕ ತರಬೇತಿಗಾಗಿ, ಗಣೇಶ ಚತುರ್ಥಿ, ಬಕ್ರೀದ್ ಹಬ್ಬ, ದಾಂಡೇಲಿಯಪ್ಪ ಜಾತ್ರೆ, ಚಿಕ್ಕಮಗಳೂರು ಜಿಲ್ಲೆಯ ದತ್ತ ಜಯಂತಿ, ಮಹಾಶಿವರಾತ್ರಿ, ಶ್ರೀ.ಮಾರಿಕಾಂಬಾ ಜಾತ್ರಾ, ಹೊಸವರ್ಷದ ಆಚರಣೆ ಹಿನ್ನೆಲೆಯಲ್ಲಿ ವಿವಿಧ ಪೊಲೀಸ್ ಬಂದೋಬಸ್ತ್ ಹಾಗೂ ಅತೀ ಗಣ್ಯ ವ್ಯಕ್ತಿಗಳ ಭದ್ರತೆಯ ಕುರಿತು ಉಪ ರಾಷ್ಟçಪತಿಗಳ ಬಂದೋಬಸ್ತ್ ಹಾಗೂ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಿಕೊಂಡು ತರಬೇತಿಯನ್ನು ನೀಡಲಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share