ಯಲ್ಲಾಪುರ: ರಸ್ತೆ ಅಪಘಾತವೆಂದು ಭಾಸವಾಗಿದ್ದ ಪ್ರಕರಣವೊಂದು ಕೊಲೆ ಪ್ರಕರಣವೆಂದು ತಿರುವು ಪಡೆದಿದ್ದು, ವೈಯಕ್ತಿಕ ದ್ವೇಷದ ಹಿನ್ನೆಲೆ ವ್ಯಕ್ತಿಯನ್ನು ಹತ್ಯೆಗೈದು, ಕಾರಿನೊಂದಿಗೆ ಸುಟ್ಟು ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆಯಲ್ಲಿ ಬೆಳಗಾವಿ ಮೂಲದ ನಿತೀಶ್ ದಾಪಲೆ (35) ಮೃತರಾಗಿದ್ದು, ಹುಬ್ಬಳ್ಳಿ ಮೂಲದ ಅಬ್ದುಲ್ ನಹೀಮ್ (32), ಮೌಲಾಸಾಬ್ (36) ಹಾಗೂ ದಾದಾಪೀರ್ ಅಪ್ತಾಬ್ (22)ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಹೇಗೆ ನಡೆದಿತ್ತು?
ಏಪ್ರಿಲ್ 8ರಂದು ಮುಂಜಾನೆ ಯಲ್ಲಾಪುರದ ತಾಳಿಕುಂಬ್ರಿ ಬಸ್ ನಿಲ್ದಾಣದ ಎದುರು ಕಾರೊಂದು ಅಪಘಾತಕ್ಕೀಡಾಗಿ ಬೆಂಕಿಗೆ ಆಹುತಿಯಾದ ಘಟನೆ ನಡೆದಿತ್ತು. ಕಾರಿನೊಳಗಿದ್ದ ವ್ಯಕ್ತಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದರಿಂದ ಇದು ಸಾಮಾನ್ಯ ಅಪಘಾತವೆಂದು ಮೊದಲು ಪ್ರಕರಣ ದಾಖಲಾಗಿತ್ತು.
ತಂದೆಯ ಅನುಮಾನದಿಂದ ಬಯಲಾದ ಸತ್ಯ
ಆದರೆ ಮೃತನ ತಂದೆ ಜಗನ್ನಾಥ್ ಅವರು ಈ ಘಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಇದು ಅಪಘಾತವಲ್ಲ, ಕೊಲೆ ಎಂದು ದೂರು ನೀಡಿದ್ದರು. ಈ ಸುಳಿವಿನ ಆಧಾರದ ಮೇಲೆ ಪೊಲೀಸರು ತನಿಖೆ ತೀವ್ರಗೊಳಿಸಿ ಪ್ರಕರಣದ ನಿಜಸ್ವರೂಪವನ್ನು ಪತ್ತೆಹಚ್ಚಿದರು.
ಪೊಲೀಸರ ಕಾರ್ಯಾಚರಣೆಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ Deepan M ಅವರ ಮಾರ್ಗದರ್ಶನದಲ್ಲಿ, ಯಲ್ಲಾಪುರ ಸಿಪಿಐ ರಮೇಶ್ ಹನಾಪೂರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಸಿಸಿಟಿವಿ ದೃಶ್ಯಗಳು ಹಾಗೂ ಇತರೆ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಕೃತ್ಯಕ್ಕೆ ಬಳಸಿದ್ದ ಬಲೆನೊ ಕಾರು, ಬರ್ಗ್‌ಮ್ಯಾನ್ ಹಾಗೂ ಆಕ್ಟಿವಾ ಸ್ಕೂಟರ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ.ಈ ಕ್ಲಿಷ್ಟಕರ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.