Saturday, May 30, 2026
HomeLocal Newsಕಾರವಾರ ಮೂಲದ ಕುವರಿ ಸಾಧ್ವಿ ಸೈಲ್‌ಗೆ ʻಮಿಸ್‌ ಇಂಡಿಯಾʼ ಕಿರೀಟ!

ಕಾರವಾರ ಮೂಲದ ಕುವರಿ ಸಾಧ್ವಿ ಸೈಲ್‌ಗೆ ʻಮಿಸ್‌ ಇಂಡಿಯಾʼ ಕಿರೀಟ!

ಭುವನೇಶ್ವರ: ಮಿಸ್ ಇಂಡಿಯಾ 2026 ಸ್ಪರ್ಧೆಯು ಏಪ್ರಿಲ್ 18ರಂದು ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT)ನಲ್ಲಿ ಭವ್ಯವಾಗಿ ನಡೆಯಿತು.

61ನೇ ಆವೃತ್ತಿಯ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಗೋವಾದ ಸಾಧ್ವಿ ಸತೀಶ್ ಸೈಲ್ ಮಿಸ್ ಇಂಡಿಯಾ 2026 ಕಿರೀಟವನ್ನು ಗೆದ್ದು ದೇಶದ ಗಮನ ಸೆಳೆದಿದ್ದಾರೆ. ವಿಶೇಷವಾಗಿ, ಸಾಧ್ವಿ ಅವರು ಕಾರವಾರ ಕ್ಷೇತ್ರದ ಶಾಸಕ ಸತೀಶ್ ಕೆ. ಸೈಲ್ ಅವರ ಪುತ್ರಿಯಾಗಿರುವುದು ಉತ್ತರ ಕನ್ನಡ ಜಿಲ್ಲೆಯ ಜನರಲ್ಲಿ ಹೆಮ್ಮೆ ಮೂಡಿಸಿದೆ.

ಕಿರೀಟ ಧರಿಸಿದ ಕ್ಷಣದಲ್ಲಿ ಸಾಧ್ವಿ ಧರಿಸಿದ್ದ ಆಕರ್ಷಕ ಗೌನ್ ಹಾಗೂ ಆತ್ಮವಿಶ್ವಾಸಭರಿತ ನಡಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಫೆಮಿನಾ ಬಿಡುಗಡೆ ಮಾಡಿದ ಸ್ಪರ್ಧಾಳುಗಳ ವಿವರಗಳ ಪ್ರಕಾರ, ಅವರು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ್ದು, ವೃತ್ತಿಯಿಂದ ಮಾಡೆಲ್ ಹಾಗೂ ಉದ್ಯಮಿಯಾಗಿದ್ದಾರೆ.

ಸಾಧ್ವಿಗೆ ಪ್ರೇರಣೆಯಾದ ವ್ಯಕ್ತಿ ಗೀತಾ ಗೋಪಿನಾಥ್. ಜಾಗತಿಕ ಮಟ್ಟದಲ್ಲಿ ಭಾರತೀಯ ಮಹಿಳೆಯರ ಸಾಮರ್ಥ್ಯವನ್ನು ಜ್ಞಾನ ಮತ್ತು ನಾಯಕತ್ವದ ಮೂಲಕ ಪ್ರತಿನಿಧಿಸಿರುವ ಕಾರಣ ಅವರಿಗೆ ಸಾಧ್ವಿ ವಿಶೇಷ ಗೌರವ ನೀಡುತ್ತಾರೆ.

ಗೋವಾದ ಪ್ರತಿನಿಧಿಯಾಗಿ ಸ್ಪರ್ಧಿಸುವುದು ತಮಗೆ ಹೆಮ್ಮೆ ಹಾಗೂ ಜವಾಬ್ದಾರಿ ಎಂದು ಸಾಧ್ವಿ ತಿಳಿಸಿದ್ದಾರೆ. ಗ್ರಾಮೀಣ ಸಮುದಾಯಗಳ ಬದುಕು, ಹೋರಾಟ ಮತ್ತು ಕಥೆಗಳು ಹೆಚ್ಚು ಜನರಿಗೆ ತಲುಪಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಅವರ ಆಸಕ್ತಿಗಳಲ್ಲಿ ಮಣ್ಣಿನ ಕಲಾಕೃತಿ, ಜೇನು ಸಾಕಣೆ, ಛಾಯಾಗ್ರಹಣ, ಚಿತ್ರಕಲೆ, ಬ್ಯಾಡ್ಮಿಂಟನ್ ಸೇರಿದಂತೆ ಹಲವಾರು ಸೃಜನಾತ್ಮಕ ಚಟುವಟಿಕೆಗಳು ಸೇರಿವೆ.

ಸ್ಪರ್ಧೆಗೆ ಮುನ್ನ ನೀಡಿದ ಸಂದರ್ಶನದಲ್ಲಿ, ತಮ್ಮನ್ನು ‘ಆಯ್ದವರೊಂದಿಗೆ ಮಾತ್ರ ಬೆರೆಯುವ ವ್ಯಕ್ತಿ’ ಎಂದು ಹೇಳಿಕೊಂಡಿದ್ದಾರೆ. ವಿಶ್ವವಿದ್ಯಾಲಯದ ಬಳಿಕ ಜನರೊಂದಿಗೆ ಬೆರೆಯುವ ಗುಣ ಹೆಚ್ಚಾಯಿತು ಎಂದಿದ್ದಾರೆ. ಬಾಲ್ಯದಲ್ಲಿ ತಾವು ಹಠಮಾರಿ ಹಾಗೂ ಆತ್ಮವಿಶ್ವಾಸಿ ಮಗು ಆಗಿದ್ದೆ ಎಂದು ತಿಳಿಸಿದ್ದಾರೆ.

ಭವಿಷ್ಯದಲ್ಲಿ ಸ್ವಂತ ವಿಶ್ವವಿದ್ಯಾಲಯ ಆರಂಭಿಸುವ ಕನಸನ್ನೂ ಸಾಧ್ವಿ ಹಂಚಿಕೊಂಡಿದ್ದಾರೆ. ವಿದೇಶದಲ್ಲಿ ಓದುತ್ತಿದ್ದಾಗ ಹಣಕಾಸು ನಿರ್ವಹಣೆ, ತೆರಿಗೆ ಸಲ್ಲಿಕೆ ಹಾಗೂ ದೈನಂದಿನ ಜೀವನ ಕೌಶಲ್ಯಗಳ ಬಗ್ಗೆ ಶಿಕ್ಷಣ ವ್ಯವಸ್ಥೆಯಲ್ಲಿ ಕೊರತೆ ಇದೆ ಎಂಬುದು ಅವರಿಗೆ ತಿಳಿಯಿತು.

ಆದ್ದರಿಂದ ವಿದ್ಯಾರ್ಥಿಗಳಿಗೆ ಹಣಕಾಸಿನ ಅರಿವು, ಜೀವನ ಕೌಶಲ್ಯ, ಸೃಜನಶೀಲತೆ, ಆಧ್ಯಾತ್ಮ ಮತ್ತು ಪ್ರಾಯೋಗಿಕ ಜ್ಞಾನ ಕಲಿಸುವ ಶಿಕ್ಷಣ ಸಂಸ್ಥೆ ಆರಂಭಿಸುವ ಆಸೆ ಹೊಂದಿದ್ದಾರೆ. ಮಹಿಳೆಯರು ತಮ್ಮ ಹಣಕಾಸನ್ನು ಸ್ವತಃ ನಿರ್ವಹಿಸಲು ಕಲಿತರೆ ಅದು ದೇಶಕ್ಕೆ ದೊಡ್ಡ ಬದಲಾವಣೆಯಾಗುತ್ತದೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share