Saturday, May 30, 2026
HomeLocal Newsಪೆಟ್ರೋಲ್ ಕೊರತೆಯಿಂದ ತೋಟ ನಿರ್ವಹಣೆಗೆ ತೊಂದರೆ: ರೈತರಿಂದ ತಹಸೀಲ್ದಾರರಿಗೆ ಮನವಿ

ಪೆಟ್ರೋಲ್ ಕೊರತೆಯಿಂದ ತೋಟ ನಿರ್ವಹಣೆಗೆ ತೊಂದರೆ: ರೈತರಿಂದ ತಹಸೀಲ್ದಾರರಿಗೆ ಮನವಿ

ಯಲ್ಲಾಪುರ: ತಾಲೂಕಿನಲ್ಲಿ ರೈತರು ಈ ತಿಂಗಳಿನಿಂದಲೇ ತಮ್ಮ ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ. ವಿಶೇಷವಾಗಿ ಕೃಷಿ ಭೂಮಿಯಲ್ಲಿ ಕಳೆ ನಿಯಂತ್ರಣ, ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕಿ ರೋಗ ನಿವಾರಣೆಗೆ ಔಷಧಿ ಸಿಂಪಡಣೆ ಮುಂತಾದ ಕಾರ್ಯಗಳನ್ನು ಆರಂಭಿಸಿದ್ದಾರೆ.

ಆದರೆ ಈ ನಡುವೆ ಕೃಷಿ ಯಂತ್ರೋಪಕರಣಗಳಿಗೆ ಅಗತ್ಯವಾದ ಪೆಟ್ರೋಲ್ ಸರಬರಾಜಿನಲ್ಲಿ ಉಂಟಾಗುತ್ತಿರುವ ಸಮಸ್ಯೆ ರೈತರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ.ವಾಹನಗಳಿಗೆ ಪೆಟ್ರೋಲ್ ದೊರೆಯುತ್ತಿದ್ದರೂ, ಕೃಷಿ ಯಂತ್ರೋಪಕರಣಗಳಿಗೆ ಕ್ಯಾನ್‌ಗಳಲ್ಲಿ ಕನಿಷ್ಠ 5 ಲೀಟರ್ ಪೆಟ್ರೋಲ್ ವಾರದಲ್ಲಿ ಎರಡು ಅಥವಾ ಮೂರು ದಿನಗಳ ಕಾಲ ಸಿಗದಿರುವುದು ತೋಟ ನಿರ್ವಹಣೆಯನ್ನು ಕಷ್ಟಕರವಾಗಿಸಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರೈತರ ಹಿತದೃಷ್ಟಿಯಿಂದ ಪೆಟ್ರೋಲ್ ಸರಬರಾಜು ಸುಗಮಗೊಳಿಸುವಂತೆ ತಾಲೂಕು ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ರೈತರ ಗುರುತಿನ ದೃಢೀಕರಣಕ್ಕಾಗಿ ಪಹಣಿ ಅಥವಾ ಸಂಬಂಧಿತ ದಾಖಲೆಗಳ ಆಧಾರದ ಮೇಲೆ ಪೆಟ್ರೋಲ್ ನೀಡುವ ವ್ಯವಸ್ಥೆ ಕಲ್ಪಿಸಬಹುದು. ಇದೇ ವೇಳೆ ರೈತರು ಪೆಟ್ರೋಲ್ ಪಡೆಯಲು ಕ್ಯಾನ್‌ಗಳನ್ನು ಬ್ಯಾಗ್‌ನಲ್ಲಿ ಇಟ್ಟು ತರಬೇಕೆಂಬ ನಿಯಮವನ್ನು ಜಾರಿಗೊಳಿಸುವಂತೆ ಹಾಗೂ ಪೆಟ್ರೋಲ್ ಪಂಪ್‌ಗಳಿಗೆ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಮಾಡಲು ತಹಸೀಲ್ದಾರ್ ಆದೇಶ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷರಾದ ನಾಗೇಶ್ ಹೆಗಡೆ ಪಣತಗೇರಿ, ಕೆ.ಟಿ. ಹೆಗಡೆ ಆನಗೋಡ್, ವೆಂಕಟ್ರಮಣ ಕಾರೇಮನೆ, ಗಣೇಶ್ ಹೆಗಡೆ ಸವಣಗೇರಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share