ಯಲ್ಲಾಪುರ: ಗ್ರಾಮೀಣ ಭಾಗಗಳ ಸಮಗ್ರ ಅಭಿವೃದ್ಧಿಗೆ ನೀರಾವರಿ ಯೋಜನೆಗಳು ಅತ್ಯಂತ ಅಗತ್ಯವಾಗಿದ್ದು, ಇಂತಹ ಕಾಮಗಾರಿಗಳು ರೈತರ ಬದುಕಿಗೆ ನೇರ ನೆರವಾಗುತ್ತವೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ತಾಲೂಕಿನ ಹಾಸಣಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರಿಹೊಂಡ ಗ್ರಾಮದ ಕೆರೆಗೆ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಡ್ಯಾಮ್ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಯೋಜನೆಯಿಂದ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ದೊರೆಯುವುದಲ್ಲದೆ, ಭೂಗರ್ಭ ಜಲಮಟ್ಟವೂ ಹೆಚ್ಚಳವಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಇಂತಹ ಶಾಶ್ವತ ಯೋಜನೆಗಳು ಸಹಕಾರಿಯಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ಬೋರಿಹೊಂಡ ಗ್ರಾಮದ ಕೆರೆಗೆ ಡ್ಯಾಮ್ ನಿರ್ಮಾಣದಿಂದ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗಲಿದ್ದು, ನೀರಾವರಿ ವ್ಯವಸ್ಥೆ ಬಲಗೊಳ್ಳಲಿದೆ ಎಂಬ ವಿಶ್ವಾಸವನ್ನು ಸ್ಥಳೀಯರು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಸುಜಾತಾ ಸಿದ್ಧಿ, ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ಮೊಗೇರ, ಪ್ರಮುಖರಾದ ನವೀನ್ ಹೆಗಡೆ, ಸದಾನಂದ ಮೊಗೇರ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.