Friday, July 24, 2026
Join WhatsApp Group
HomeCrimeಕ್ರಿಸ್ಟಲ್ ಮೆತ್ ಸಾಗಾಟ; ತಾಯಿ-ಮಗಳು ಅಂದರ್

ಕ್ರಿಸ್ಟಲ್ ಮೆತ್ ಸಾಗಾಟ; ತಾಯಿ-ಮಗಳು ಅಂದರ್

ಹೈದರಾಬಾದ್: ದೆಹಲಿಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ 11.4 ಕೆಜಿ ಕ್ರಿಸ್ಟಲ್ ಮೆತ್ (ಮೆಥಾಂಫೆಟಮೈನ್) ಸಾಗಾಟ ಮಾಡುತ್ತಿದ್ದ ತಾಯಿ ಮತ್ತು ಮಗಳನ್ನು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಅಧಿಕಾರಿಗಳು ಸೆಕೆಂದ್ರಾಬಾದ್ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ವಶಪಡಿಸಿಕೊಂಡ ಮಾದಕ ವಸ್ತುವಿನ ಅಂದಾಜು ಮೌಲ್ಯ ಸುಮಾರು 11.4 ಕೋಟಿ ರೂ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಆರ್‌ಐ ಹೈದರಾಬಾದ್ ವಲಯ ಘಟಕದ ಅಧಿಕಾರಿಗಳು ಖಚಿತ ಮಾಹಿತಿ ಆಧರಿಸಿ ಸೋಮವಾರ ಸಂಜೆ ಸೆಕೆಂದ್ರಾಬಾದ್ ರೈಲು ನಿಲ್ದಾಣದಲ್ಲಿ ದೆಹಲಿಯಿಂದ ಬಂದಿದ್ದ ಇಬ್ಬರು ಮಹಿಳೆಯರನ್ನು ತಡೆದು ತಪಾಸಣೆ ನಡೆಸಿದರು.

ಅವರ ಟ್ರಾಲಿ ಬ್ಯಾಗ್‌ಗಳನ್ನು ಪರಿಶೀಲಿಸಿದ ವೇಳೆ 10 ಪ್ಲಾಸ್ಟಿಕ್ ಪ್ಯಾಕೆಟ್‌ಗಳಲ್ಲಿ ಬಿಳಿ ಬಣ್ಣದ ಸ್ಫಟಿಕದಂತಹ ಪದಾರ್ಥ ಪತ್ತೆಯಾಯಿತು.

ಈ ಮಾದಕ ವಸ್ತುವನ್ನು ಪತ್ತೆಯಾಗದಂತೆ ವಿಶೇಷವಾಗಿ ಅಡಗಿಸಲಾಗಿತ್ತು. ಪ್ಯಾಕೆಟ್‌ಗಳನ್ನು ಕಪ್ಪು ಪಾಲಿಥಿನ್‌ನಲ್ಲಿ ಸುತ್ತಿ, ಮೇಲಿಂದ ಡಿಸೈನರ್ ಪೇಪರ್‌ನಿಂದ ಮುಚ್ಚಿ, ನಂತರ ಹಾಸಿಗೆ ಚಾದರಗಳ ನಡುವೆ ಟ್ರಾಲಿ ಬ್ಯಾಗ್‌ನಲ್ಲಿ ಅಡಗಿಸಲಾಗಿತ್ತು ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳದಲ್ಲೇ ಫೀಲ್ಡ್ ಡ್ರಗ್ ಡಿಟೆಕ್ಷನ್ ಕಿಟ್ ಬಳಸಿ ಪರೀಕ್ಷಿಸಿದಾಗ ಅದು ಆಂಫೆಟಮೈನ್ ವರ್ಗದ ‘ಕ್ರಿಸ್ಟಲ್ ಮೆತ್’ ಎಂದು ದೃಢಪಟ್ಟಿತು.

ಎನ್‌ಡಿಪಿಎಸ್ (Narcotic Drugs and Psychotropic Substances) ಕಾಯ್ದೆಯಡಿ ಮಾದಕ ವಸ್ತುವನ್ನು ವಶಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ಮಂಗಳವಾರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿತರಲ್ಲಿ 55 ವರ್ಷದ ಮಹಿಳೆ ಹಾಗೂ ಆಕೆಯ 26 ವರ್ಷದ ಮಗಳು ದೆಹಲಿಯವರಾಗಿದ್ದು, ಅಪರಿಚಿತ ವ್ಯಕ್ತಿಯಿಂದ ದೆಹಲಿಯಲ್ಲಿ ಈ ಮಾದಕ ವಸ್ತು ಪಡೆದು ಬೆಂಗಳೂರಿನಲ್ಲಿರುವ ಮತ್ತೊಬ್ಬರಿಗೆ ತಲುಪಿಸುವ ಕೆಲಸ ಅವರಿಗೆ ನೀಡಲಾಗಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಇದಕ್ಕೂ ಮೊದಲು ಸಹ ಅವರು ಡ್ರಗ್ ಸಾಗಾಟದ ‘ಕೂರಿಯರ್’ ಆಗಿ ಕೆಲಸ ಮಾಡಿರುವುದಾಗಿ ಡಿಆರ್‌ಐ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಈ ಜಾಲದ ಹಿಂದೆ ಇರುವ ಪ್ರಮುಖ ವ್ಯಕ್ತಿಗಳು ಯಾರು, ಮಾದಕ ವಸ್ತುವಿನ ಮೂಲ ಏನು ಎಂಬುದರ ಕುರಿತು ಡಿಆರ್‌ಐ ತಂಡ ತನಿಖೆ ಮುಂದುವರಿಸಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share