Friday, May 29, 2026
HomeStateಮೂತ್ರ ವಿಸರ್ಜನೆ ತಡೆಗೆ ‘ಕನ್ನಡಿ’ ಗೋಡೆ!; ಹೀಗೊಂದು ಕ್ರಿಯೇಟಿವ್ ಐಡಿಯಾ

ಮೂತ್ರ ವಿಸರ್ಜನೆ ತಡೆಗೆ ‘ಕನ್ನಡಿ’ ಗೋಡೆ!; ಹೀಗೊಂದು ಕ್ರಿಯೇಟಿವ್ ಐಡಿಯಾ

ಮೈಸೂರು: ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಇಂದಿನ ಸಮಸ್ಯೆಯೇನಲ್ಲ. ಆದರೆ, ಈ ಸಮಸ್ಯೆಗೆ ಹೊಸದಾಗಿ ಹಾಗೂ ಸೃಜನಾತ್ಮಕವಾಗಿ ಪರಿಹಾರ ಕಂಡುಕೊಂಡಿರುವುದು ಸಾಂಸ್ಕೃತಿಕ ನಗರಿ ಮೈಸೂರು. ಉಪನಗರ ಬಸ್ ನಿಲ್ದಾಣದ ಸಮೀಪದ ರಸ್ತೆಯ ಗೋಡೆಗಳ ಮೇಲೆ ಕನ್ನಡಿಗಳನ್ನು ಅಳವಡಿಸುವ ಮೂಲಕ ಈ ಸಮಸ್ಯೆಗೆ ಕಡಿವಾಣ ಹಾಕುವ ಪ್ರಯತ್ನ ಮಾಡಲಾಗಿದೆ.

ಇಲ್ಲಿನ ಸಬ್‌ಅರ್ಬನ್‌ ಬಸ್‌ ನಿಲ್ದಾಣದ ಪ್ರದೇಶ ಪ್ರಮುಖ ಸಂಚಾರ ಪ್ರದೇಶವಾಗಿರುವುದರಿಂದ, ಬಸ್ ಪ್ರಯಾಣಿಕರು ಮತ್ತು ದಾರಿಹೋಕರು ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿತ್ತು.

ಇದನ್ನು ತಡೆಯಲು ಪಾಲಿಕೆ ಗೋಡೆಗಳ ಮೇಲೆ ಪ್ರತಿಫಲಿತ ಸ್ಟೀಲ್ ಶೀಟ್‌ಗಳು ಅಥವಾ ಕನ್ನಡಿಗಳನ್ನು ಅಳವಡಿಸಿದೆ. ಇದರಿಂದ ಅಲ್ಲಿ ಮೂತ್ರ ವಿಸರ್ಜನೆ ಮಾಡಲು ಯತ್ನಿಸುವವರು ತಮ್ಮ ಪ್ರತಿಬಿಂಬವನ್ನು ಮಾತ್ರವಲ್ಲದೆ, ಹಾದು ಹೋಗುವ ಎಲ್ಲರಿಗೂ ಕಾಣುವ ಪರಿಸ್ಥಿತಿ ಉಂಟಾಗುತ್ತದೆ. ಇದರಿಂದ ಮುಜುಗರ ಉಂಟಾಗಿ ಈ ಕೆಟ್ಟ ಅಭ್ಯಾಸವನ್ನು ತಡೆಯಬಹುದು ಎಂಬುದು ಪಾಲಿಕೆಯ ಲೆಕ್ಕಾಚಾರ.

ಗ್ರಾಮಾಂತರ ಬಸ್ ನಿಲ್ದಾಣದ ಎದುರಿನ ಮೋರಿ ಬಳಿ ಹಾಗೂ ಸರ್ಕಾರಿ ಅತಿಥಿಗೃಹದ ಕಾಂಪೌಂಡ್ ಗೋಡೆ ಬಳಿ ಈ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಈ ಕ್ರಮದಿಂದ ಅಲ್ಲಿನ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ.

ಕೆನರಾ ನೆಕ್ಸ್ಟ್‌ ಜಾಹೀರಾತು

ರಾತ್ರಿ ವೇಳೆಯಲ್ಲೂ ಈ ಕೃತ್ಯ ನಡೆಯದಂತೆ ಮಾಡಲು ಕನ್ನಡಿಗಳ ಕೆಳಭಾಗದಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಯಾರಾದರೂ ಅಲ್ಲಿಗೆ ಬಂದರೆ ಬೆಳಕಿನ ಕಾರಣದಿಂದ ಎಲ್ಲರಿಗೂ ಸ್ಪಷ್ಟವಾಗಿ ಕಾಣುವಂತಾಗುತ್ತದೆ.

ಮೈಸೂರಿನ ಈ ವಿಭಿನ್ನ ಪ್ರಯೋಗದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಎಚ್ಚರಿಕೆ ಫಲಕಗಳಿಗಿಂತ ಜನರ ವರ್ತನೆಯನ್ನು ಬದಲಿಸುವ ಈ ಕ್ರಮ ಪರಿಣಾಮಕಾರಿ ಎಂಬ ಅಭಿಪ್ರಾಯವೂ ಕೇಳಿಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Share