ಜನ್‌ಧನ್ ಖಾತೆದಾರರಿಗೆಹತ್ತಾರು ಸೌಲಭ್ಯ | ಝೀರೋ ಬ್ಯಾಲೆನ್ಸ್ ಇದ್ದರೂ ಇಲ್ಲಿ ದಂಡವಿಲ್ಲ
ಸಾಮಾನ್ಯ ಜನರಿಗೆ ಬ್ಯಾಂಕಿಂಗ್ ಸೇವೆಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿರುವ ಪ್ರಧಾನಮಂತ್ರಿ ಜನ್‌ಧನ್ ಯೋಜನೆ (PMJDY) ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಭದ್ರತೆಯ ಆಧಾರವಾಗುತ್ತಿದೆ.
ಜೀರೋ ಬ್ಯಾಲೆನ್ಸ್ ಖಾತೆಯ ಜೊತೆಗೆ ಹಲವು ಹೆಚ್ಚುವರಿ ಸೌಲಭ್ಯಗಳ ಕಾರಣದಿಂದ ಈ ಯೋಜನೆ ದೇಶಾದ್ಯಂತ ಜನಪ್ರಿಯತೆ ಪಡೆದುಕೊಂಡಿದೆ.
ಈ ಯೋಜನೆಯ ಪ್ರಮುಖ ಆಕರ್ಷಣೆ ಓವರ್‌ಡ್ರಾಫ್ಟ್ ಸೌಲಭ್ಯ. ನಿಮ್ಮ ಖಾತೆಯಲ್ಲಿ ಹಣ ಇಲ್ಲದಿದ್ದರೂ ತುರ್ತು ಸಂದರ್ಭಗಳಲ್ಲಿ 10 ಸಾವಿರದವರೆಗೆ ಬ್ಯಾಂಕ್‌ನಿಂದ ಹಣವನ್ನು ಪಡೆಯುವ ಅವಕಾಶ ಇದೆ. ಆರಂಭದಲ್ಲಿ 2 ಸಾವಿರದವರೆಗೆ ಸುಲಭವಾಗಿ ದೊರೆಯುವ ಈ ಸೌಲಭ್ಯ, ಖಾತೆಯನ್ನು ಆರು ತಿಂಗಳು ಸರಿಯಾಗಿ ಬಳಸಿದ ಬಳಿಕ 10 ಸಾವಿರ ರೂ.ವರೆಗೆ ವಿಸ್ತರಿಸಲಾಗುತ್ತದೆ.
ಜನ್‌ಧನ್ ಖಾತೆದಾರರಿಗೆ ಉಚಿತ ವಿಮೆ ಸೌಲಭ್ಯವೂ ಲಭ್ಯವಿದೆ. ಖಾತೆಯೊಂದಿಗೆ ನೀಡಲಾಗುವ ರೂಪೇ ಡೆಬಿಟ್ ಕಾರ್ಡ್ ಮೂಲಕ 2 ಲಕ್ಷದವರೆಗೆ ಅಪಘಾತ ವಿಮೆ ಸಿಗುತ್ತದೆ. ಅಲ್ಲದೆ ಅರ್ಹ ಫಲಾನುಭವಿಗಳಿಗೆ 30 ಸಾವಿ ರೂ.ವರೆಗೆ ಜೀವ ವಿಮೆ ರಕ್ಷಣೆಯೂ ದೊರೆಯುತ್ತದೆ.
ಸಾಮಾನ್ಯ ಸೇವಿಂಗ್ಸ್ ಖಾತೆಗಳಲ್ಲಿ ಕನಿಷ್ಠ ಮೊತ್ತ ಇರದಿದ್ದರೆ ಬ್ಯಾಂಕ್‌ಗಳು ದಂಡ ವಿಧಿಸುತ್ತವೆ. ಆದರೆ ಜನ್‌ಧನ್ ಖಾತೆಯಲ್ಲಿ ಜೀರೋ ಬ್ಯಾಲೆನ್ಸ್ ಇದ್ದರೂ ಯಾವುದೇ ದಂಡ ವಿಧಿಸಲಾಗುವುದಿಲ್ಲ. ಇದರಿಂದ ಕಡಿಮೆ ಆದಾಯದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ.
ಗ್ಯಾಸ್ ಸಬ್ಸಿಡಿ, ರೈತ ಸಹಾಯಧನ, ಪಿಂಚಣಿ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಹಣ ನೇರವಾಗಿ ಖಾತೆಗೆ ಜಮೆಯಾಗುತ್ತದೆ. ಇದರಿಂದ ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗಿದ್ದು, ಹಣ ಸುರಕ್ಷಿತವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ.
ದೇಶದ ಎಲ್ಲೆಡೆಯಿಂದ ಹಣ ವರ್ಗಾವಣೆ, ಮೊಬೈಲ್ ಬ್ಯಾಂಕಿಂಗ್, ಉಚಿತ ರೂಪೇ ಕಾರ್ಡ್ ಸೇರಿದಂತೆ ಹಲವು ಸೌಲಭ್ಯಗಳು ಈ ಯೋಜನೆಯಲ್ಲಿವೆ. 10 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ನಾಗರಿಕರು ಆಧಾರ್ ಕಾರ್ಡ್ ಅಥವಾ ಸರ್ಕಾರ ಮಾನ್ಯತೆ ನೀಡಿರುವ ದಾಖಲೆಗಳ ಮೂಲಕ ಜನ್‌ಧನ್ ಖಾತೆ ತೆರೆಯಬಹುದು.