Friday, July 24, 2026
Join WhatsApp Group
HomeTechದಕ್ಷಿಣ ಕೊರಿಯಾದಲ್ಲಿ ‘ರೋಬೋ ಸನ್ಯಾಸಿ’!

ದಕ್ಷಿಣ ಕೊರಿಯಾದಲ್ಲಿ ‘ರೋಬೋ ಸನ್ಯಾಸಿ’!

ಗಾಬರಿಯಾಗಬೇಡಿ, ಈತ ʻಗಾಬಿʼ!

ಕೃತಕ ಬುದ್ಧಿಮತ್ತೆ (AI) ದಿನದಿಂದ ದಿನಕ್ಕೆ ಮನುಷ್ಯನ ಬದುಕಿನ ಪ್ರತಿಯೊಂದು ಕ್ಷೇತ್ರವನ್ನೂ ಸ್ಪರ್ಶಿಸುತ್ತಿದೆ. ಮೊದಲು ಕೈಗಾರಿಕೆ, ಬಳಿಕ ವೈದ್ಯಕೀಯ, ಶಿಕ್ಷಣ, ಬ್ಯಾಂಕಿಂಗ್‌, ಭದ್ರತೆ… ಹೀಗೆ ಒಂದೊಂದೇ ವಲಯವನ್ನು ಆವರಿಸಿಕೊಂಡ AI ತಂತ್ರಜ್ಞಾನ ಈಗ ಆಧ್ಯಾತ್ಮ ಕ್ಷೇತ್ರದಲ್ಲೂ ತನ್ನ ಹೆಜ್ಜೆ ಗುರುತು ಮೂಡಿಸಿದೆ.

ಮಾನವರೂಪಿ ರೋಬೋಟ್‌ಗಳು ಕೇವಲ ಯಾಂತ್ರಿಕ ಕೆಲಸಗಳಿಗೆ ಮಾತ್ರ ಸೀಮಿತವಿಲ್ಲ, ಧಾರ್ಮಿಕ ವಿಧಿವಿಧಾನಗಳಲ್ಲೂ ಪಾಲ್ಗೊಳ್ಳಬಲ್ಲವು ಎಂಬುದನ್ನು ದಕ್ಷಿಣ ಕೊರಿಯಾದ ಒಂದು ವಿಶಿಷ್ಟ ಘಟನೆ ಜಗತ್ತಿಗೆ ತೋರಿಸಿದೆ.

ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿರುವ ಪ್ರಸಿದ್ಧ ಜೋಗ್ಯೆ ದೇವಾಲಯದಲ್ಲಿ ‘ಗಾಬಿ’ ಹೆಸರಿನ ಹ್ಯುಮನಾಯ್ಡ್‌ ರೋಬೋಟ್‌ಗೆ ಸನ್ಯಾಸ ದೀಕ್ಷೆ ನೀಡಲಾಗಿದೆ. ಬುದ್ಧ ಪೂರ್ಣಿಮೆಯ ಮುನ್ನಾದಿನ ನಡೆದ ವಿಶೇಷ ಬೌದ್ಧ ಧಾರ್ಮಿಕ ಕಾರ್ಯಕ್ರಮದಲ್ಲಿ ಈ ರೋಬೋಟ್ ಅಧಿಕೃತವಾಗಿ ಸನ್ಯಾಸಿಯಾಗಿ ಪರಿಚಯಿಸಲ್ಪಟ್ಟಿದ್ದು, ಅಲ್ಲಿದ್ದ ಭಕ್ತರು ಹಾಗೂ ತಂತ್ರಜ್ಞಾನ ಆಸಕ್ತರ ಗಮನ ಸೆಳೆದಿದೆ.

ಸುಮಾರು ನಾಲ್ಕು ಅಡಿ ಎತ್ತರದ ಗಾಬಿ, ಸಾಂಪ್ರದಾಯಿಕ ಬೌದ್ಧ ಸನ್ಯಾಸಿಗಳ ಉಡುಪು ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿತು. ಇತರ ಸನ್ಯಾಸಿಗಳೊಂದಿಗೆ ಸೇರಿ ಮಂತ್ರಗಳನ್ನು ಪಠಿಸುವುದು, ನಮಸ್ಕರಿಸುವುದು, ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸುವುದು ಮಾತ್ರವಲ್ಲದೆ, ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕವೂ ಅಚ್ಚರಿ ಮೂಡಿಸಿತು.

‘ಗಾಬಿ’ ಎಂಬ ಹೆಸರಿನ ಹಿಂದೆ ಸಹ ಒಂದು ವಿಶೇಷ ಅರ್ಥವಿದೆ. ಗೌತಮ ಬುದ್ಧನ ಮೊದಲ ಹೆಸರು ‘ಸಿದ್ಧಾರ್ಥ’ ಹಾಗೂ ಕೊರಿಯನ್ ಭಾಷೆಯ ‘ಜಾಬಿ’ ಎಂಬ ಪದದ ಸಂಯೋಜನೆಯೇ ‘ಗಾಬಿ’. ‘ಜಾಬಿ’ ಎಂದರೆ ಕರುಣೆ ಅಥವಾ ದಯೆ ಎಂಬ ಅರ್ಥವಿದೆ.

ಚೀನಾದ ‘ಯೂನಿಟ್ರೀ ಜಿ1’ ಹ್ಯುಮನಾಯ್ಡ್‌ ತಂತ್ರಜ್ಞಾನ ಆಧಾರದಲ್ಲಿ ನಿರ್ಮಿತವಾಗಿರುವ ಈ ರೋಬೋಟ್‌, ಮನುಷ್ಯನಂತೆ ನಡೆಯುವುದು, ಕೈಕುಲುಕುವುದು ಅಷ್ಟೇ ಅಲ್ಲದೆ, ಧಾರ್ಮಿಕ ಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಸಾಮರ್ಥ್ಯ ಹೊಂದಿದೆ.

ಕಾರ್ಯಕ್ರಮದ ವೇಳೆ ಸನ್ಯಾಸಿಯೊಬ್ಬರು “ನೀನು ಬುದ್ಧ ಮತ್ತು ಬೌದ್ಧ ಬೋಧನೆಗಳಿಗೆ ನಿನ್ನನ್ನು ಸಮರ್ಪಿಸಿಕೊಳ್ಳುವೆಯಾ?” ಎಂದು ಪ್ರಶ್ನಿಸಿದಾಗ, ಗಾಬಿ “ಹೌದು, ನಾನು ನನ್ನನ್ನು ಸಮರ್ಪಿಸಿಕೊಳ್ಳುತ್ತೇನೆ” ಎಂದು ಉತ್ತರಿಸಿತು.

ತಂತ್ರಜ್ಞಾನ ಮತ್ತು ಆಧ್ಯಾತ್ಮದ ಸಂಗಮವೆಂದೇ ಬಣ್ಣಿಸಲ್ಪಡುತ್ತಿರುವ ಈ ಬೆಳವಣಿಗೆ, ಮುಂದಿನ ದಿನಗಳಲ್ಲಿ ಧಾರ್ಮಿಕ ಕ್ಷೇತ್ರದಲ್ಲೂ AI ಯಾವ ಮಟ್ಟಿಗೆ ಪ್ರವೇಶಿಸಬಹುದು ಎಂಬ ಚರ್ಚೆಗೆ ಕಾರಣವಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share