ಮಳೆಗಾಲ ಶುರುವಾದರೆ ಹೊಲದ ಅಂಚುಗಳಲ್ಲಿ, ತೋಟದ ಪಕ್ಕದಲ್ಲಿ, ಮನೆ ಸುತ್ತಮುತ್ತ ತನ್ನಷ್ಟಕ್ಕೆ ತಾನೇ ಬೆಳೆಯುವ ಒಂದು ಪುಟ್ಟ ಗಿಡ ಎಲ್ಲರ ಗಮನ ಸೆಳೆಯದೇ ಹೋಗಬಹುದು. ಆದರೆ ಆಯುರ್ವೇದ ವೈದ್ಯರ ದೃಷ್ಟಿಯಲ್ಲಿ ಅದು ಅಸಾಮಾನ್ಯ ಗಿಡ. ಯಾವುದೆಂದಿರಾ? ಅದೇ ನೆಲನೆಲ್ಲಿ.
ಗ್ರಾಮೀಣ ಬದುಕಿನಲ್ಲಿ ಕಾಮಾಲೆ ಬಂದರೆ ಮೊದಲು ನೆನಪಾಗುವ ಔಷಧಿ, ಮೂತ್ರಪಿಂಡದ ಕಲ್ಲು ಸಮಸ್ಯೆ ಇದ್ದರೆ ಹಿರಿಯರು ಹೇಳುವ ಮನೆಮದ್ದು, ದೇಹದ ಉರಿ-ಜ್ವರ ಬಂದರೆ ಕಷಾಯವಾಗಿ ಬಳಸುವ ಸಸ್ಯ ನೆಲನೆಲ್ಲಿ.
ಸಣ್ಣ ಗಿಡವಾದರೂ ಅದರ ಔಷಧೀಯ ಮಹತ್ವ ಮಾತ್ರ ಅಪಾರ. ವೈಜ್ಞಾನಿಕವಾಗಿ Phyllanthus niruri ಎಂದು ಕರೆಯಲಾಗುವ ಈ ಸಸ್ಯವನ್ನು ಕನ್ನಡದಲ್ಲಿ ನೆಲನೆಲ್ಲಿ ಅಥವಾ ಭೂನೆಲ್ಲಿ ಎನ್ನುತ್ತಾರೆ. ಇಂಗ್ಲಿಷ್‌ನಲ್ಲಿ “Stone Breaker” ಅಥವಾ “Seed-under-leaf” ಎಂಬ ಹೆಸರೂ ಇದೆ.
ಇದರ ಎಲೆಗಳ ಕೆಳಭಾಗದಲ್ಲಿ ಚಿಕ್ಕ ಚಿಕ್ಕ ಬೀಜಗಳು ಸಾಲಾಗಿ ಇರುವುದೇ ಇದರ ವಿಶೇಷ ಗುರುತು. ಭಾರತ ಮಾತ್ರವಲ್ಲದೆ ಶ್ರೀಲಂಕಾ, ಬ್ರೆಜಿಲ್, ಪೆರು, ಥೈಲ್ಯಾಂಡ್, ಚೀನಾ, ಆಫ್ರಿಕಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಇದು ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಬಳಕೆಯಲ್ಲಿದೆ.
ಬ್ರೆಜಿಲ್‌ನಲ್ಲಿ ಹರ್ಬಲ್ ಟೀ ರೂಪದಲ್ಲಿ, ಪೆರುದಲ್ಲಿ ಲಿವರ್ ಔಷಧಿಯಾಗಿ, ಚೀನಾದಲ್ಲಿ ಸಾಂಪ್ರದಾಯಿಕ ಚಿಕಿತ್ಸೆಗಳಲ್ಲಿ ಇದರ ಬಳಕೆ ಕಂಡುಬರುತ್ತದೆ. ನೆಲನೆಲ್ಲಿಯ ಪ್ರಮುಖ ಖ್ಯಾತಿಯೇ ಯಕೃತ್ತಿನ ಆರೋಗ್ಯದಲ್ಲಿ. ಕಾಮಾಲೆ ಅಥವಾ ಲಿವರ್ ಸಮಸ್ಯೆ ಇದ್ದಾಗ ಗ್ರಾಮೀಣ ಭಾಗಗಳಲ್ಲಿ ಇದರ ರಸ ಸೇವಿಸುವ ಪದ್ಧತಿ ಇಂದಿಗೂ ಜೀವಂತವಾಗಿದೆ.
ಕೆಲ ಅಧ್ಯಯನಗಳು ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ವೈರಲ್ ಗುಣಗಳು ಲಿವರ್ ಕಾರ್ಯಕ್ಷಮತೆಯನ್ನು ಬೆಂಬಲಿಸಬಹುದು ಎಂದು ಸೂಚಿಸಿವೆ. ಇದೇ ಕಾರಣಕ್ಕೆ ಅನೇಕ ಆಯುರ್ವೇದ ಲಿವರ್ ಟಾನಿಕ್‌ಗಳಲ್ಲಿ ನೆಲನೆಲ್ಲಿ ಅಂಶ ಸೇರಿಸಲಾಗುತ್ತಿದೆ. ಇದನ್ನು “ಸ್ಟೋನ್ ಬ್ರೇಕರ್” ಎಂದು ಕರೆಯುವುದಕ್ಕೂ ಕಾರಣವಿದೆ. ಮೂತ್ರಪಿಂಡದ ಕಲ್ಲು ಸಮಸ್ಯೆಯಲ್ಲಿ ಇದು ಸಹಕಾರಿ ಎನ್ನುವ ನಂಬಿಕೆ ವರ್ಷಗಳಿಂದ ಇದೆ.
ಕೆಲವು ಸಂಶೋಧನೆಗಳಲ್ಲೂ ಇದರ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಮಧುಮೇಹ ನಿಯಂತ್ರಣ, ಜೀರ್ಣಕ್ರಿಯೆ ಸುಧಾರಣೆ, ಹೊಟ್ಟೆ ಉರಿ ಕಡಿಮೆ ಮಾಡುವುದು, ಚರ್ಮದ ಉರಿ ಮತ್ತು ಗಾಯಗಳಿಗೆ ಲೇಪನವಾಗಿ ಬಳಸುವುದು, ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಸೇರಿದಂತೆ ಹಲವು ಉಪಯೋಗಗಳನ್ನು ಜನಪದ ವೈದ್ಯ ಪದ್ಧತಿ ಹೇಳುತ್ತದೆ.
ಸಾಮಾನ್ಯವಾಗಿ ಇದರ ರಸ, ಕಷಾಯ, ಪುಡಿ, ಮಾತ್ರೆ, ಹರ್ಬಲ್ ಟೀ ರೂಪದಲ್ಲಿ ಬಳಸಲಾಗುತ್ತದೆ. ಆದರೆ ಯಾವುದೇ ಸಸ್ಯದಂತೆ ಇದನ್ನೂ ಮಿತಿಯಲ್ಲಿ ಹಾಗೂ ವೈದ್ಯರ ಸಲಹೆಯೊಂದಿಗೆ ಬಳಸುವುದು ಉತ್ತಮ. ವಿಶೇಷವಾಗಿ ಗರ್ಭಿಣಿಯರು ಮತ್ತು ಈಗಾಗಲೇ ಇತರ ಔಷಧ ಸೇವಿಸುತ್ತಿರುವವರು ಎಚ್ಚರಿಕೆ ವಹಿಸಬೇಕು.
ಇತ್ತೀಚೆಗೆ ಹರ್ಬಲ್ ಮತ್ತು ನೈಸರ್ಗಿಕ ಉತ್ಪನ್ನಗಳ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿರುವುದರಿಂದ ನೆಲನೆಲ್ಲಿಗೂ ಬೇಡಿಕೆ ಹೆಚ್ಚುತ್ತಿದೆ. ಆಯುರ್ವೇದ ಕಂಪನಿಗಳು ಒಣಗಿಸಿದ ನೆಲನೆಲ್ಲಿ, ಪುಡಿ, ಕಷಾಯ ಮಿಶ್ರಣ, ಕ್ಯಾಪ್ಸುಲ್ ಮತ್ತು ಲಿವರ್ ಟಾನಿಕ್‌ಗಳಲ್ಲಿ ಇದನ್ನು ಬಳಸುತ್ತಿವೆ. ಕೆಲವು ಕಡೆ ರೈತರು ವಾಣಿಜ್ಯ ಮಟ್ಟದಲ್ಲೂ ಈ ಸಸ್ಯ ಬೆಳೆದು ಮಾರಾಟ ಮಾಡಲು ಆರಂಭಿಸಿದ್ದಾರೆ. ಆರ್ಗಾನಿಕ್ ಮತ್ತು ಹರ್ಬಲ್ ಮಾರುಕಟ್ಟೆಯ ವಿಸ್ತರಣೆಯೊಂದಿಗೆ ಭವಿಷ್ಯದಲ್ಲಿ ನೆಲನೆಲ್ಲಿ ಕೃಷಿಗೂ ಅವಕಾಶ ಇದೆ ಎನ್ನಲಾಗುತ್ತಿದೆ. ಹಿಂದೆ ಕಳೆ ಗಿಡವೆಂದೇ ಗುರುತಿಸುತ್ತಿದ್ದ ಈ ಸಸ್ಯ, ಇಂದು ಔಷಧೀಯ ಮೌಲ್ಯದ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಪ್ರಕೃತಿ ನಮ್ಮ ಸುತ್ತಲೇ ಎಷ್ಟೋ ಔಷಧಿಗಳನ್ನು ಕೊಡುಗೆಯಾಗಿ ಕೊಟ್ಟಿದೆ ಎಂಬುದಕ್ಕೆ ನೆಲನೆಲ್ಲಿ ಜೀವಂತ ಉದಾಹರಣೆ.