ಉತ್ತರ ಕನ್ನಡದಲ್ಲಿ ಅಪಾರ ಅವಕಾಶದ ಅಡಕೆ ಹಾಳೆ ತಟ್ಟೆ ಉದ್ಯಮ
ಒಮ್ಮೆ ಅಡಕೆ ತೋಟಗಳಲ್ಲಿ ಬಿದ್ದ ಒಣ ಹಾಳೆಗಳನ್ನು ಸುಟ್ಟುಹಾಕುವುದು ಅಥವಾ ಕಸದಂತೆ ಬದಿಗಿಡುವುದು ಸಾಮಾನ್ಯವಾಗಿತ್ತು. ಆದರೆ ಈಗ ಇದೇ ಅಡಕೆ ಹಾಳೆಗಳು ಗ್ರಾಮೀಣ ಯುವಕರು, ಮಹಿಳಾ ಸಂಘಗಳು ಮತ್ತು ಸಣ್ಣ ಉದ್ಯಮಿಗಳ ಪಾಲಿಗೆ “ಹಸಿರು ಚಿನ್ನ”ವಾಗಿವೆ.
ಪ್ಲಾಸ್ಟಿಕ್ ನಿಷೇಧ, ಪರಿಸರ ಜಾಗೃತಿ ಮತ್ತು ನೈಸರ್ಗಿಕ ಉತ್ಪನ್ನಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಕೆ ಹಾಳೆ ತಟ್ಟೆ ತಯಾರಿಕಾ ಉದ್ಯಮ ನಿಧಾನವಾಗಿ ದೊಡ್ಡ ಮಾರುಕಟ್ಟೆ ರೂಪಿಸಿಕೊಳ್ಳುತ್ತಿದೆ.
ಯಲ್ಲಾಪುರ, ಸಿದ್ದಾಪುರ, ಶಿರಸಿ, ಸೊರಬ, ಸಾಗರ ಭಾಗಗಳಲ್ಲಿ ಅಡಕೆ ತೋಟಗಳು ಅಪಾರ ಪ್ರಮಾಣದಲ್ಲಿರುವುದರಿಂದ ಕಚ್ಚಾ ವಸ್ತು ಸುಲಭವಾಗಿ ಸಿಗುತ್ತದೆ. ಇದುವೇ ಈ ಉದ್ಯಮದ ದೊಡ್ಡ ಶಕ್ತಿ. ತೋಟದಲ್ಲಿ ಸಹಜವಾಗಿ ಉದುರುವ ಅಡಕೆ ಹಾಳೆಗಳನ್ನು ಸಂಗ್ರಹಿಸಿ, ತೊಳೆಯಿಸಿ, ಯಂತ್ರದ ಮೂಲಕ ಬಿಸಿ ಪ್ರೆಸ್ ಮಾಡಿ ವಿವಿಧ ಗಾತ್ರದ ತಟ್ಟೆ, ಬೌಲ್, ಕಪ್ ರೂಪದಲ್ಲಿ ತಯಾರಿಸಲಾಗುತ್ತದೆ.
ಈ ಉದ್ಯಮದ ಅತ್ಯಂತ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಕಚ್ಚಾ ವಸ್ತುವಿಗೆ ದೊಡ್ಡ ವೆಚ್ಚವಿಲ್ಲ.ಹಲವರು ತೋಟಗಳಿಂದ ಉಚಿತವಾಗಿಯೇ ಹಾಳೆಗಳನ್ನು ತರುತ್ತಾರೆ. ಕೆಲವರು ಕೆ.ಜಿ ಅಥವಾ ನೂರರ ಲೆಕ್ಕದಲ್ಲಿ ಖರೀದಿಸುತ್ತಾರೆ. ಪ್ಲಾಸ್ಟಿಕ್ ಮತ್ತು ಥರ್ಮಕೋಲ್ ತಟ್ಟೆಗಳಿಗಿಂತ ಪರಿಸರ ಸ್ನೇಹಿಯಾಗಿರುವುದರಿಂದ ದೇವಸ್ಥಾನ, ಹೋಟೆಲ್, ರೆಸಾರ್ಟ್, ಹೋಂಸ್ಟೇ, ಕ್ಯಾಟರಿಂಗ್, ಜಾತ್ರೆಗಳಲ್ಲಿ ಇದರ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಎಷ್ಟು ಬಂಡವಾಳ ಬೇಕು?
ಸಣ್ಣ ಮಟ್ಟದಲ್ಲಿ ಆರಂಭಿಸಲು ಸುಮಾರು 1.5 ಲಕ್ಷದಿಂದ 3 ಲಕ್ಷ ರೂಪಾಯಿವರೆಗೆ ಹೂಡಿಕೆ ಬೇಕಾಗಬಹುದು. ಇದರಲ್ಲಿ ಹೈಡ್ರಾಲಿಕ್ ಪ್ರೆಸ್ ಯಂತ್ರ, ಡೈ ಸೆಟ್‌ಗಳು (ವಿವಿಧ ಗಾತ್ರದ ತಟ್ಟೆಗಾಗಿ), ಕಟಿಂಗ್ ಉಪಕರಣ, ವಿದ್ಯುತ್ ವ್ಯವಸ್ಥೆ, ಒಣಗಿಸುವ ಜಾಗ, ಪ್ಯಾಕಿಂಗ್ ಉಪಕರಣಗಳು ಸೇರಿರುತ್ತವೆ.
ಹಸ್ತಚಾಲಿತ ಯಂತ್ರಗಳು ಕಡಿಮೆ ಬೆಲೆಗೆ ಸಿಗುತ್ತವೆ. ಆದರೆ ಸೆಮಿ ಆಟೋಮ್ಯಾಟಿಕ್ ಅಥವಾ ಆಟೋಮ್ಯಾಟಿಕ್ ಯಂತ್ರಗಳು ದುಬಾರಿಯಾದರೂ ಉತ್ಪಾದನೆಯೂ ಹೆಚ್ಚು.
ಆದಾಯದ ನಿರೀಕ್ಷೆ
ಇದರ ಆದಾಯ ಸಂಪೂರ್ಣವಾಗಿ ಮಾರುಕಟ್ಟೆ ಮತ್ತು ಉತ್ಪಾದನೆ ಮೇಲೆ ಅವಲಂಬಿತ. ಸಾಮಾನ್ಯವಾಗಿ ದಿನಕ್ಕೆ 1000–3000 ತಟ್ಟೆ ತಯಾರಿಸುವ ಸಣ್ಣ ಘಟಕವೂ ತಿಂಗಳಿಗೆ 40 ಸಾವಿರದಿಂದ 1 ಲಕ್ಷ ರೂ.ವರೆಗೆ ವಹಿವಾಟು ನಡೆಸಬಹುದು.
ಒಂದು ತಟ್ಟೆ ತಯಾರಿಕೆಗೆ ಸರಾಸರಿ 1.50ರಿಂದ 3 ರೂ. ವೆಚ್ಚ ಬರುತ್ತದೆ. ಆದರೆ ಮಾರುಕಟ್ಟೆಯಲ್ಲಿ 4 ರೂ.ನಿಂದ 15 ರೂ.ವರೆಗೆ ಮಾರಾಟವಾಗುತ್ತದೆ. ವಿಶೇಷವಾಗಿ ದಪ್ಪ ಗುಣಮಟ್ಟದ ಮತ್ತು ಡಿಸೈನ್ ತಟ್ಟೆಗಳಿಗೆ ದೊಡ್ಡ ಹೋಟೆಲ್, ರೆಸಾರ್ಟ್, ಆರ್ಗಾನಿಕ್ ಅಂಗಡಿಗಳಲ್ಲಿ ಹೆಚ್ಚು ಬೇಡಿಕೆ ಇದೆ.
ಮಾರುಕಟ್ಟೆ ಹುಡುಕುವುದು ಹೇಗೆ?
ಇದೇ ಹೆಚ್ಚಿನವರ ಪ್ರಶ್ನೆ. ಈಗ ಕಾಲ ಬದಲಾಗಿದೆ. ಕೇವಲ ಅಂಗಡಿಗಳಿಗಷ್ಟೇ ಅಲ್ಲದೆ ನೇರವಾಗಿ ಉತ್ಪಾದಕರೇ ವಾಟ್ಸಾಪ್ ಬಿಸಿನೆಸ್, ಇನ್‌ಸ್ಟಾಗ್ರಾಂ ಪೇಜ್, ಫೇಸ್‌ಬುಕ್ ಮಾರ್ಕೆಟಿಂಗ್, ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಸ್ಥಳೀಯ ಹೋಟೆಲ್, ಕ್ಯಾಟರರ್ಸ್, ರೆಸಾರ್ಟ್‌ಗಳು ದೊಡ್ಡ ಮಾರುಕಟ್ಟೆ ಒದಗಿಸಬಲ್ಲವು.
ವಿಶೇಷವಾಗಿ ಗೋವಾ, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಭಾಗಗಳಲ್ಲಿ “ಇಕೊ ಫ್ರೆಂಡ್ಲಿ” ಉತ್ಪನ್ನಗಳಿಗೆ ಬೇಡಿಕೆ ಜಾಸ್ತಿ. ಉತ್ತರ ಕನ್ನಡದವರಿಗೆ ಸಾರಿಗೆ ಸೌಲಭ್ಯವೂ ಹತ್ತಿರದಲ್ಲಿರುವುದರಿಂದ ಇದು ಹೆಚ್ಚುವರಿ ಲಾಭ.
ಸವಾಲುಗಳು
ಈ ಉದ್ಯಮಕ್ಕೂ ಕೆಲವು ದೊಡ್ಡ ಸವಾಲುಗಳಿವೆ.
ಮಳೆಗಾಲ ದೊಡ್ಡ ಸಮಸ್ಯೆ: ಅಡಕೆ ಹಾಳೆ ತೇವವಾದರೆ ಗುಣಮಟ್ಟ ಕಡಿಮೆಯಾಗುತ್ತದೆ. ಸರಿಯಾದ ಒಣಗಿಸುವ ವ್ಯವಸ್ಥೆ ಬೇಕು.
ವಿದ್ಯುತ್ ವೆಚ್ಚ: ಯಂತ್ರಗಳು ನಿರಂತರ ಬಳಕೆಯಾಗುವುದರಿಂದ ಕರೆಂಟ್ ಬಿಲ್ ಹೆಚ್ಚಾಗಬಹುದು.
ಗುಣಮಟ್ಟ: ಸರಿಯಾಗಿ ಕ್ಲೀನ್ ಮಾಡದ ಹಾಳೆ, ಸರಿಯಾದ ಫಿನಿಷಿಂಗ್ ಇಲ್ಲದ ತಟ್ಟೆಗಳು ಗ್ರಾಹಕರನ್ನು ಕಳೆದುಕೊಳ್ಳುವಂತೆ ಮಾಡುತ್ತವೆ.
ಸರ್ಕಾರದ ನೆರವು
ಗ್ರಾಮೀಣ ಕೈಗಾರಿಕೆ, ಮಹಿಳಾ ಸ್ವಸಹಾಯ ಸಂಘಗಳು, ಖಾದಿ ಗ್ರಾಮೋದ್ಯೋಗ, ಜಿಲ್ಲಾ ಕೈಗಾರಿಕಾ ಕೇಂದ್ರ, ಬ್ಯಾಂಕ್ ಸಾಲ ಯೋಜನೆಗಳ ಮೂಲಕ ಸಹಾಯ ಸಿಗುವ ಸಾಧ್ಯತೆ ಇದೆ. ಕೆಲವೊಮ್ಮೆ ಸಬ್ಸಿಡಿಯಲ್ಲಿ ಯಂತ್ರಗಳೂ ಲಭ್ಯವಾಗುತ್ತವೆ.
ಭವಿಷ್ಯ
ಪ್ಲಾಸ್ಟಿಕ್ ವಿರೋಧಿ ಜಾಗೃತಿ ಹೆಚ್ಚಾಗುತ್ತಿರುವಂತೆ ಈ ಉದ್ಯಮಕ್ಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅವಕಾಶಗಳಿವೆ. ವಿದೇಶಗಳಲ್ಲಿಯೂ ನೈಸರ್ಗಿಕ ಡಿಸ್ಪೋಸಬಲ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಸರಿಯಾದ ಬ್ರ್ಯಾಂಡಿಂಗ್, ಗುಣಮಟ್ಟ ಮತ್ತು ಮಾರ್ಕೆಟಿಂಗ್ ಮಾಡಿದರೆ ಉತ್ತರ ಕನ್ನಡದ ಅಡಕೆ ಹಾಳೆ ತಟ್ಟೆಗಳು ದೇಶದಾಚೆಗೂ ಮಾರುಕಟ್ಟೆಯನ್ನು ಆಳುವ ಅವಕಾಶ ಇದೆ. ಆದರೆ ನೆನಪಿಡಿ, ಮಾಡುವ ಕೆಲಸದಲ್ಲಿ ಶ್ರದ್ಧೆ, ಸತತ ಶ್ರಮ ಮುಖ್ಯ!