ಭಟ್ಕಳ: ನಗರದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-66ರ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಮ್ಮನವರ ಹೊರೆಯನ್ನಿಡುವ ಮುರುವಿನಕಟ್ಟೆಯನ್ನು NHAI ವತಿಯಿಂದ ROW ವ್ಯಾಪ್ತಿಯ ಸರ್ಕಾರಿ ಜಮೀನಿನಲ್ಲಿ ಮೇ 24ರಂದು ಕೆಂಪುಕಲ್ಲಿನಿಂದ ನಿರ್ಮಿಸಲಾಗುತ್ತಿತ್ತು.
ಆದರೆ, ಈ ಸಂರಚನೆಯನ್ನು ಕೆಲ ಕಿಡಿಗೇಡಿಗಳು ಹಾನಿಗೊಳಪಡಿಸಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಡಳಿತ ಈಗಾಗಲೇ ಪ್ರಕಟಣೆ ಮೂಲಕ ತಿಳಿಸಿತ್ತು.
ಇದರ ಜೊತೆಗೆ, ಸಾಂಪ್ರದಾಯಿಕವಾಗಿ ಅಮ್ಮನವರ ಹೊರೆಯನ್ನಿಡಲಾಗುತ್ತಿರುವ ಮೂಲ ಮುರುವಿನಕಟ್ಟೆ ಸ್ಥಳ ಯಥಾಸ್ಥಿತಿಯಲ್ಲಿಯೇ ಇರುವುದಾಗಿ ಸಹ ಜಿಲ್ಲಾಡಳಿತ ಸ್ಪಷ್ಟಪಡಿಸಿತ್ತು.
ಆದರೂ, ಕೆಲವು ಸಮಾಜಘಾತುಕ ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಹಾಗೂ ಸುಳ್ಳು ಮಾಹಿತಿಯನ್ನು ಹರಿಬಿಟ್ಟು, ಮೂಲ ಮುರುವಿನಕಟ್ಟೆಗೆ ಧಕ್ಕೆಯಾಗಿದೆ ಎಂಬ ರೀತಿಯಲ್ಲಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಮನವಿ ಮಾಡಲಾಗಿದೆ. ಸಾಂಪ್ರದಾಯಿಕವಾಗಿ ಅಮ್ಮನವರ ಹೊರೆಯನ್ನಿಡುವ ಮೂಲ ಮುರುವಿನಕಟ್ಟೆ ಯಥಾಸ್ಥಿತಿಯಲ್ಲಿಯೇ ಮುಂದುವರಿಯಲಿದೆ ಎಂದು ಜಿಲ್ಲಾಡಳಿತ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಇನ್ನೂ ಮುಂದುವರೆದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ತಪ್ಪು ಮಾಹಿತಿಯನ್ನು ಪೋಸ್ಟ್ ಮಾಡುವವರ ವಿರುದ್ಧ ಕಾನೂನಿನಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.