ಅಂಕೋಲಾ: ಬಳ್ಳಾರಿಯಿಂದ ಗೋವಾಕ್ಕೆ ತೆರಳುತ್ತಿದ್ದ ಸೀಬರ್ಡ್ ಸಂಸ್ಥೆಯ ಖಾಸಗಿ ಸ್ಲೀಪರ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಓರ್ವ ಪ್ರಯಾಣಿಕ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಡ್ಲೂರು ಕಂಚಿನ ಬಾಗಿಲು ಸಮೀಪ ರಾಷ್ಟ್ರೀಯ ಹೆದ್ದಾರಿ-52ರಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.
ಅಪಘಾತ ಸಂಭವಿಸಿದ ವೇಳೆ ಬಸ್ನಲ್ಲಿ ಒಟ್ಟು 36 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಬಸ್ ರಸ್ತೆ ಬದಿಗೆ ಉರುಳಿ ಬಿದ್ದಿದ್ದು, ಒಳಗಿದ್ದ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಓರ್ವ ಪ್ರಯಾಣಿಕರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ಬಳಿಕ ಸ್ಥಳೀಯರು, ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ಆರಂಭಿಸಿದರು. ಬಸ್ನ ಕಿಟಕಿ ಗಾಜುಗಳನ್ನು ಒಡೆದು ಒಳಗಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದರು. ಗಾಯಗೊಂಡ 21 ಮಂದಿಯನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಆರು ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ 15 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ರಭಸಕ್ಕೆ ಬಸ್ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದ್ದರಿಂದ ಯಲ್ಲಾಪುರ–ಅಂಕೋಲಾ ಮಾರ್ಗದಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಘಟನಾ ಸ್ಥಳಕ್ಕೆ ಧಾವಿಸಿದ ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ರೇನ್ ಸಹಾಯದಿಂದ ಬಸ್ ತೆರವುಗೊಳಿಸಿ ಸಂಚಾರ ಸುಗಮಗೊಳಿಸಲು ಹರಸಾಹಸ ಪಟ್ಟರು.
ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಚಾಲಕನ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಈ ಕುರಿತು ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಪ್ರಯಾಣಿಕರ ಬಂಧುಗಳು ಆಸ್ಪತ್ರೆಗಳತ್ತ ಧಾವಿಸಿದ್ದು, ಗಾಯಾಳುಗಳ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಬಳಿಕ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.