ದಯವಿಟ್ಟು ಹೀಗೆ ಮಾಡಬೇಡಿ! | ಸೈಬರ್ ಕ್ರೈಂನ ಹೊಸ ಜಾಲಕ್ಕೆ ಬೀಳದಿರಿ
ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತ ಹೋದಂತೆ, ಅದರಿಂದ ಮೋಸಕ್ಕೊಳಗಾಗುವವರ, ಅನಾನುಕೂಲ ಎದುರಿಸುವವರ ಸಂಖ್ಯೆಯೂ ಹೆಚ್ಚುತ್ತಲೇ ಹೋಗುತ್ತಿದೆ. ಈ ಬಗ್ಗೆ ಎಷ್ಟೇ ಎಚ್ಚರಿಕೆಯಿಂದಿದ್ದರೂ ಕಡಿಮೆಯೇ. ಕೈಲಿ ಸ್ಮಾರ್ಟ್ಫೋನ್ ಹಿಡಿದುಕೊಂಡು `ಮೊಬೈಲಲ್ಲಿ ದುಡ್ಡು ಕಳಿಸೋದು ಹೇಗೆ ಅನ್ನೋದು ನನಗೆ ಗೊತ್ತೇ ಇಲ್ವಲ್ಲ ಸಾರ್’ ಅನ್ನುವಂತಿಲ್ಲ. ನೀವಿನ್ನೂ ಓಬೀರಾಯನ ಕಾಲದಲ್ಲೇ ಇದ್ದೀರಿ ಎಂಬ ಮಾತನ್ನೂ ಕೇಳಬೇಕಾಗುತ್ತದೆ.
ಈ ಪರಿಯಾಗಿ, ತಂತ್ರಜ್ಞಾನದ ಪ್ರಗತಿ ಪ್ರತಿಯೊಬ್ಬರ ಜೀವನವನ್ನೂ ಸುಗಮಗೊಳಿಸುತ್ತ ಸಾಗುತ್ತಿದೆ. ಆದರೆ, ಇದನ್ನೇ ಬಂಡವಾಳವಾಗಿಸಿಕೊಂಡ ಕೆಲ ವಂಚಕರು ಹೆಜ್ಜೆ-ಹೆಜ್ಜೆಗೂ ಕಾಡುತ್ತಲೇ ಹೋಗುತ್ತಾರೆ. ಪರಿಣಾಮವಾಗಿ, ಅಮಾಯಕರ ಬ್ಯಾಂಕ್ ಖಾತೆಯಲ್ಲಿರುವ ಹಣ ಅನಾಯಾಸವಾಗಿ ಸೈಬರ್ ಕಳ್ಳರ ಕೈಸೇರಿಬಿಡುತ್ತದೆ.
ಸುಳ್ಳೇ ಸುಳ್ಳು ಲಿಂಕ್ಗಳ ಮೂಲಕ ಬ್ಯಾಂಕ್ ಖಾತೆಯ ಮಾಹಿತಿ ಪಡೆದು ದುಡ್ಡು ದೋಚುವುದು, ಡೆಬಿಟ್ ಕಾರ್ಡ್ ಅನ್ಬ್ಲಾಕ್ ಮಾಡಿಕೊಡುತ್ತೇವೆಂದು ಮೋಸ ಮಾಡುವುದು ಇತ್ಯಾದಿಗಳ ಮುಂದುವರೆದ ಭಾಗವಾಗಿ, ಪಾರ್ಟ್ಟೈಂ ಕೆಲಸ ಕೊಡುತ್ತೇವೆಂದು ವಂಚಿಸುವ ಹಲವು ಪ್ರಕರಣಗಳೂ ನಡೆದಿವೆ.
ಮನೆಯಲ್ಲೇ ಕುಳಿತು ಅತೀ ಸುಲಭದ ಕೆಲಸ ಮಾಡಿ ದಿನಕ್ಕೆ ಸಾವಿರಾರು ರೂಪಾಯಿ ಗಳಿಸುವ ಆಮಿಷವೊಡ್ಡಿ ಮೋಸ ಮಾಡಲು ಪ್ರಯತ್ನಿಸುತ್ತಿರುವ ಪ್ರಕರಣಗಳೂ ನಡೆಯುತ್ತವೆ. ಹೆಚ್ಚಾಗಿ ಗೃಹಿಣಿಯರು, ನಿರುದ್ಯೋಗಿಗಳೇ ಬಲಿಯಾಗುತ್ತಿರುವ ಈ ಜಾಲದ ವ್ಯಾಪ್ತಿ ಚಿಕ್ಕದಾಗಿದ್ದರೂ, ಪರಿಣಾ ದೊಡ್ಡದಾಗಿದೆ.
ಸಾಮಾನ್ಯವಾಗಿ ಮನೆಗೆಲಸಗಳಿಗಷ್ಟೇ ಸೀಮಿತವಾಗಿರುವ ಗೃಹಿಣಿಯರು, ಯಾವುದಾದರೊಂದು ಉದ್ಯೋಗ ಹಿಡಿದು ಆದಾಯ ಗಳಿಸಬೇಕೆಂದು ಹಂಬಲಿಸುತ್ತಿರುವವರು ಖಂಡಿತ ಬಲೆಯಲ್ಲಿ ಸಿಲುಕಿಕೊಳ್ಳುತ್ತಾರೆಂಬುದು ಇವರಿಗೆ ಗೊತ್ತು. ಮತ್ತು, ಬೀಳದೇ ಇರುವರಿಗೂ ಗಾಳ ಹಾಕುವುದು ಅವರ ಕರ್ತವ್ಯ!
ಇದೀಗ ಸೈಬರ್ ಕಳ್ಳರು ಯುಟ್ಯೂಬ್ ಹೆಸರು ಹೇಳಿಕೊಂಡು ಬಲೆ ಬೀಸತೊಡಗಿದ್ದಾರೆ. ಪಾರ್ಟ್ ಟೈಮ್ ಕೆಲಸದ ಆಮಿಷವೊಡ್ಡುವ ಈ ಸೈಬರ್ ವಂಚಕರು ಅತೀ ಸರಳವಾಗಿ ತಾವು ತಿಳಿಸುವ ಯುಟ್ಯೂಬ್ ವಿಡಿಯೋಗಳನ್ನು ಲೈಕ್ ಹಾಗೂ ಸಬ್ಸ್ಕ್ರೈಬ್ ಮಾಡುವಂತೆ ತಿಳಿಸುತ್ತಾರೆ.
ಮುಂದುವರೆದು, ತಾವು ಕಳಿಸುವ ಯುಟ್ಯೂಬ್ ಚಾನೆಲ್ನ ವಿಡಿಯೋಗಳನ್ನು ಲೈಕ್/ಶೇರ್ ಮಾಡಿ, ಸಬ್ಸ್ಕ್ರೈಬ್ ಮಾಡುವಂತೆಯೂ ತಿಳಿಸುತ್ತಾರೆ. ಇದೇ ಸೀತಿಯ ಸುಲಭದ ಟಾಸ್ಕ್ಗಳನ್ನು ನಿರ್ವಹಿಸುತ್ತ, ವಾರಕ್ಕೆ 5 ಸಾವಿರ ರೂ.ಗಳವರೆಗೂ ಸಂಪಾದಿಸಬಹುದು ಎಂಬ ಆಸೆಯನ್ನೂ ಹುಟ್ಟಿಸಿ, ಈ ಆಫರನ್ನು ಸ್ವೀಕರಿಸುವಂತೆಯೂ ದುಂಬಾಲು ಬೀಳುತ್ತಾರೆ. ಒಪ್ಪಿ ಮುಂದುವರೆದರೆ, ಕೆಲಸ ಅತೀ ಸುಲಭದ್ದು ನೋಡಿ! ಯುಟ್ಯೂಬ್ ವಿಡಿಯೋಗೆ ಲೈಕ್ ಒತ್ತುವುದು ಮತ್ತು, ಪ್ರತೀ ಬಾರಿ ಲೈಕ್ ಒತ್ತಿದ ಸ್ಕ್ರೀನ್ಶಾಟ್ನ್ನು ಸೂಚಿಸಿದ ಮ್ಯಾನೇಜರ್ಗೆ ಕಳಿಸಿದರೆ ಮುಗಿದೇ ಹೋಯ್ತು ಕೆಲಸ!
ಆದರೆ, ವಂಚಕರ ಅಸಲೀ ಆಟ ಶುರುವಾಗುವುದೇ ಇಲ್ಲಿಂದ. ಹೀಗೆ ಯುಟ್ಯೂಬ್ ವಿಡಿಯೋಗಳನ್ನು ಲೈಕ್ ಮಾಡಿ, ಸ್ಕ್ರೀನ್ಶಾಟ್ ಕಳಿಸುತ್ತಿದ್ದಂತೆಯೇ, ತಾವು ತಿಳಿಸಿದ ಕಂಪನಿಯ ಜಾಬ್ ಅಪ್ಲಿಕೇಶನ್ನಲ್ಲಿ ಖಾತೆ ತೆರೆದು ಲಾಗಿನ್ ಆಗುವಂತೆ ತಿಳಿಸುತ್ತಾರೆ. ಈ ಅಪ್ಲಿಕೇಶನ್ ಮೂಲಕವೇ ನಮ್ಮ ವಾರದ ಗಳಿಕೆ ಹಾಗೂ ಮುಂದಿನ ಎಲ್ಲ ವ್ಯವಹಾರಗಳನ್ನು ನಡೆಸುವಂತೆಯೂ ಸೂಚಿಸುತ್ತಾರೆ.
ಅಲ್ಲಿನ ಸ್ಕೋರ್ಬೋರ್ಡ್ ಹಾಗೂ ಗಳಿಕೆಯ ಹಣವನ್ನು ನೋಡಿ ಖುಷಿ ಪಟ್ಟಿದ್ದಷ್ಟೇ ಬಂತು. ಯಾಕೆಂದರೆ, ಹೀಗೆ ಪರದೆಯ ಮೇಲೆ ತೋರಿಸುವ ಮೊತ್ತ ಕೇವಲ ತೋರಿಕೆಗೆ ಮಾತ್ರ. ವಂಚಕರು ಬಳಕೆದಾರರಿಗೆ ಕಳಿಸಿರುವ ಅಥವಾ ಅವರ ಖಾತೆಗೆ ಜಮಾ ಆಗಿರುವ ಹಣವಲ್ಲ! ಮುಂದುವರೆದು, ನೀವು ಗಳಿಸಿರುವ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸಬೇಕೆಂದರರೆ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಲು ಕೇಳುತ್ತಾರೆ.
ಹಣ ವರ್ಗಾವಣೆಯಾದ ತಕ್ಷಣ ವಂಚಕರು ನಿಮ್ಮನ್ನು ವಾಟ್ಸಪ್ ಮತ್ತು ಟೆಲಿಗ್ರಾಂನಿಂದ ಬ್ಲಾಕ್ ಮಾಡಿಬಿಡುತ್ತಾರೆ. ಅತ್ತಲಿನ ಎಲ್ಲಾ ರೀತಿಯ ಸಂಪರ್ಕವೂ ಅಲ್ಲಿಗೇ ನಿಂತಿತು ಮತ್ತು, ನಿಮ್ಮ ಹಣ ಹಾಗೂ ಗಳಿಕೆಯ ಆಸೆಯಲ್ಲಿ ವ್ಯಯಿಸಿದ ಒಂದಿಷ್ಟು ಸಮಯ ಹೋಯಿತೆಂದುಕೊಳ್ಳಬಹುದು.
ಹೀಗೆ ವಿವಿಧ ಆಫರ್ಗಳನ್ನು ನೀಡುವ ಲಿಂಕ್ ಓಪನ್ ಮಾಡುವ ಮುನ್ನ ಎಚ್ಚರವಾಗಿರಿ. ಇಲ್ಲೂ ಕೂಡ ಗಮನಿಸಲೇಬೇಕಾದ ಸಂಗತಿಯೆಂದರೆ, ಯಾವುದೇ ಉದ್ಯೋಗದಾತ ಸಂಸ್ಥೆ ತನ್ನ ನೌಕರರಲ್ಲಿಯೇ ಹಣ ಕೇಳುವುದಿಲ್ಲ! ಇಂತಹ ಸಂದರ್ಭದಲ್ಲಿ ಜಾಗರೂಕರಾಗಿರಿ.
ಯಾವ ಕಾರಣಕ್ಕೂ ಸಣ್ಣ ಮೊತ್ತವನ್ನೂ ಇಂಥವರಿಗೆ ಕಳಿಸಲು ಮುಂದಾಗಬೇಡಿ. ಅವರು ಯಾರು, ಇದಕ್ಕೆಲ್ಲ ಈಪರಿಯ ಹಣವನ್ನು ಹೇಗೆ ಕೊಡುತ್ತಿದ್ದಾರೆ ಎಂದು ನಿಮಗೆ ಕಲ್ಪನೆ ಇಲ್ಲದಿದ್ದರೂ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇಟ್ಟಿದ್ದೀರಿ ಎಂಬುದು ಅವರಿಗೆ ಗೊತ್ತು! ಅರಿಯದೆ ವಂಚಕರ ಗಾಳಕ್ಕೆ ಸಿಲುಕಿಬಿಟ್ಟಿದ್ದರೆ, 1930ಗೆ ಕರೆ ಮಾಡಿ ಅಥವಾ ಸೈಬರ್ ಕ್ರೈಮ್ ಪೋರ್ಟಲ್ ಮೂಲಕ ತಕ್ಷಣ ದೂರು ದಾಖಲಿಸಿ.