ವಿಷಯವನ್ನು ಪ್ರಾರಂಭಿಸುವ ಮೊದಲು ನಾಲ್ಕಾರು ವರ್ಷಗಳಿಂದೀಚೆ ನಡೆದ ಒಂದೆರಡು ಘಟನೆಗಳನ್ನು ಸೂಕ್ಷ್ಮವಾಗಿ ವಿವರಿಸಿದರೆ, ವಿಷಯದ ಗಂಭೀರತೆ ಹೇಗಿದೆಯೆಂಬುದು ಥಟ್ಟನೆ ಅರ್ಥವಾಗಿಬಿಡಬಹುದು.
22 ವರ್ಷದ, ಇನ್ನೇನು ಮೀಸೆ ಚಿಗುರುತ್ತಿರುವ ಯುವಕನೊಬ್ಬ ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುವ ಗೀಳು ಅಂಟಿಸಿಕೊಂಡುಬಿಟ್ಟಿದ್ದ. ಹೀಗೆಯೇ ಮುಂದುವರಿದು ಮಾನಸಿಕ ಸ್ಥಿಮಿತ, ಮಾನವೀಯತೆಯನ್ನೇ ಕಳೆದುಕೊಂಡ ಆತ, ಎಂಟು ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿ, ಹತ್ತಿರವೇ ಇದ್ದ ಕಬ್ಬಿನ ಗದ್ದೆಯೊಂದರಲ್ಲಿ ಹೂತು ಹಾಕಿದ್ದ!
ಇನ್ನೊಂದು ಪ್ರಕರಣದಲ್ಲಿ, ಉತ್ತರ ಪ್ರದೇಶದಲ್ಲಿ 12 ವರ್ಷದ ಬಾಲಕನೊಬ್ಬ ಯಾರೋ ಸಂಬಂಧಿಕರ ಮೊಬೈಲಿನಲ್ಲಿದ್ದ ಅಶ್ಲೀಲ ವಿಡಿಯೋಗಳನ್ನು ಯಾರಿಗೂ ಗೊತ್ತಾಗದಂತೆ ನೋಡಿಬಿಟ್ಟಿದ್ದ. ಕೆಲ ದಿನಗಳಲ್ಲಿ ಆತ ಮಾಡಿದ್ದೇನು? ಪಕ್ಕದ ಮನೆಯ ಏಳು ವರ್ಷದ ಬಾಲಕಿಯೊಬ್ಬಳ ಮೇಲೆ ಆಕೆ ಒಬ್ಬಳೇ ಮನೆಯಲ್ಲಿರುವ ಸಮಯ ಸಾಧಿಸಿ ಲೈಂಗಿಕ ದೌರ್ಜನ್ಯವೆಸಗಿಬಿಟ್ಟಿದ್ದ.
ವಿಷಯ ಪಾಲಕರ ಗಮನಕ್ಕೆ ಬಂದಾಗ ಪೊಲೀಸರಿಗೆ ದೂರು ನೀಡಿದರು. ಪ್ರಕರಣವನ್ನು ಬೇಧಿಸಿದ ಪೊಲೀಸರು ಈ 12ರ ಬಾಕಲನನ್ನು ಬಂಧಿಸಿ ವಿಚಾರಣೆ ನಡೆಸಿದರು. ಹುಡುಗ ಎಲ್ಲಾ ವಿಷಯವನ್ನೂ ಅಮಾಯಕವಾಗಿ ಬಾಯಿಬಿಟ್ಟ. ಮೊಬೈಲಿನಲ್ಲಿ ನೋಡಿದ ದೃಶ್ಯ 12ರ ಬಾಲಕನಲ್ಲಿ ಅದೇನೋ ಕುತೂಹಲ ಮೂಡಿಸಿಬಿಟ್ಟಿತ್ತು. ಅದನ್ನೇ ಪಾಪದ ಹುಡುಗಿಯ ಮೇಲೆ ಕಾರ್ಯರೂಪಕ್ಕೆ ತಂದುಬಿಟ್ಟಿದ್ದ! ವಯಸ್ಸೆಷ್ಟು, ಹನ್ನೆರಡೇ ವರ್ಷ!
ಈಗೇನು, ಹೈಸ್ಕೂಲು ಓದುವ ಮಕ್ಕಳ ಕೈಯಲ್ಲೂ ಅವರದೇ ಆದ ಪ್ರತ್ಯೇಕ ಮೊಬೈಲ್. ಅಲ್ಲಿಯವರೆಗೂ ಹಾಗೂ ಹೀಗೂ ತಾಳಿಕೊಂಡಿದ್ದ ಮಕ್ಕಳೂ ಆನ್ಲೈನ್ ಕ್ಲಾಸ್ಗಳು ಪ್ರಾರಂಭವಾದಾಗ ದಿನದ ಬಹುತೇಕ ಸಮಯ ಮೊಬೈಲ್ ಹಿಡಿಯತೊಡಗಿದರು. ಅದು ಮೂಲ ಉದ್ದೇಶಕ್ಕಷ್ಟೇ ಸೀಮಿತವಾಗಿದ್ದರೆ, ಅದರ ಅರಿವಿದ್ದರೆ ಸಮಸ್ಯೆಗಳು ಹೆಚ್ಚುತ್ತಿರಲಿಲ್ಲವೇನೋ…ಆದರೆ, ಹಾಗಾಗಲಿಲ್ಲ.
ಸಧ್ಯದ ತಂತ್ರಜ್ಞಾನದ ವೇಗ ಮೊದಲಿನಂತಲ್ಲ. ಹಿಂದಿನಂತೆ ಅಲ್ಲೆಲ್ಲೋ ಓಣಿಯ ಮೂಲೆಯಲ್ಲಿ, ಗೊತ್ತಿರುವವರಿಗಷ್ಟೇ ಪ್ರವೇಶವಿರುವ, ಪೊಲೀಸರ ಕಣ್ತಪ್ಪಿಸಿ ಅಪಾಪೋಲಿ `ಎ’ ಗ್ರೇಡ್ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳು ಠಿಕಾಣಿ ತೆಗೆದು ಬಹಳೇ ವರ್ಷಗಳು ಕಳೆದವು.
ಇನ್ನು, ಅಂಥದೇ ಚಿತ್ರಗಳನ್ನು ನಾಲ್ಕು ಕೋಣೆಗಳ ನಡುವೆ ಒಬ್ಬನೇ ಕುಳಿತು ಟಿವಿಗೆ ಡಿವಿಡಿ ಪ್ಲೇಯರ್ ಸಂಪರ್ಕಿಸಿ ನೋಡುವ ಕಾಲ ದಶಕದ ಹಿಂದೆಯೇ ಮುಗಿದುಹೋಯಿತು. ಅಲ್ಲೆಲ್ಲೋ ಮೊಬೈಲ್ ಶಾಪ್ಗಳಲ್ಲಿ ಐವತ್ತು-ನೂರು ರೂ. ಕೊಟ್ಟು ನೀಲಿ ಚಿತ್ರಗಳನ್ನು ಮೊಬೈಲಲ್ಲಿ ತುಂಬಿಸಿಕೊಳ್ಳುವದೂ ನಿಂತುಹೋಯಿತು.
ಈಗೇನಿದ್ದರೂ ಸ್ಮಾರ್ಟ್ ಯುಗ. ಇದಕ್ಕೆಂದೇ ಇರುವ ಸಾವಿರಾರು ವೆಬ್ಸೈಟ್ಗಳು ಈ ಎಲ್ಲ ಕೊರತೆಗಳನ್ನು ನೀಗಿಸಿ, ಅರಿಯದ ಮಕ್ಕಳನ್ನು ಕ್ರಿಮಿನಲ್ಗಳನ್ನಾಗಿ ಪರಿವರ್ತಿಸುವತ್ತ ಅರಿವಿದ್ದೂ ತಮ್ಮ ಕೊಡುಗೆ ನೀಡುತ್ತಲೇ ಇವೆ.
ಶಾಕ್ ಆಗುವಂಥದ್ದೇನಿಲ್ಲ. ಇಂಥ ಕೃತ್ಯಗಳಲ್ಲಿ ಮಕ್ಕಳು ಪಾಲ್ಗೊಳ್ಳಲು ಮೂಲತಃ ಪಾಲಕರಾದ ನಮ್ಮ ಕೊಡುಗೆಯೇ ಹೆಚ್ಚಾಗಿದೆಯೆಂದರೆ ಸಿಟ್ಟಾಗಬೇಡಿ. ಮಕ್ಕಳು ಶಾಲೆಯಿಂದ ಮನೆಗೆ ಮರಳಿದ ಮೇಲೆಯೂ ನಾವು ನಮ್ಮದೇ ಗಡಿಬಿಡಿಯಿಂದ ಹೊರಬಂದಿರುವುದಿಲ್ಲ. ಇಡೀ ದಿನದ ಕೆಲಸಗಳು, ಪಟ್ಟಣದ ಓಡಾಟದ ಕಿರಿಕಿರಿ, ಆಗಾಗ ಸತಾಯಿಸುತ್ತಲೇ ಇರುವ ಸಂಸಾರದ ತಾಪತ್ರಯಗಳ ನಡುವೆ ನಾವು ನಿಜವಾಗಿಯೂ ನಮ್ಮ ಮಕ್ಕಳ ಮೇಲೆ ಗಮನವಿರಿಸಿದ್ದೇವಾ?
ನಾವು ನಮ್ಮದೇ ಲೋಕದಲ್ಲಿದ್ದಾಗ, ಮಕ್ಕಳು ಅವರ ವಯೋಮಾನಕ್ಕೆ ತಕ್ಕ ಹಾಗೆ ಹೊಸ ಲೋಕಕ್ಕೆ ತೆರೆದುಕೊಳ್ಳುವುದೂ ಸಾಮಾನ್ಯವೆನಿಸುತ್ತದೆ. ಮುಖ್ಯ ಬೇಕಾಗಿರುವುದು ಮಕ್ಕಳ ವಿಷಯದಲ್ಲಿ ನಮ್ಮ ಕರ್ತವ್ಯಗಳನ್ನು ಪೂರೈಸುವುದಷ್ಟೇ ಅಲ್ಲ, ಕಾಳಜಿಯನ್ನೂ ಅರ್ಥ ಮಾಡಿಸಬೇಕಿದೆ.
ಹರೆಯ ಬರುವವರೆಗೂ ಮೊಬೈಲ್ ಗೇಮ್ಗಳ ಆಕರ್ಷಣೆಗೆ ಬೀಳುವ ಮಕ್ಕಳು ಸಮಯ ಕಳೆಯಲು ಇರುವುದು ಅದೊಂದೇ ಅಂದುಕೊಂಡಿದ್ದಾರೆ. ಅದರ ಹೊರತಾಗಿ, ನಮ್ಮ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಿಕೊಳ್ಳಬೇಕೆಂದು ಅವರ ಕೈಗೆ ಮೊಬೈಲ್ ಕೊಟ್ಟು ಕೂರಿಸಿದರೆ, ಚಿಗುರು ಈಗಿನಿಂದಲೇ ಚಿರುಟತೊಡಗುತ್ತದೆ, ಆದರೆ ಪರಿಣಾಮ ತಕ್ಷಣ ತಿಳಿಯಲಾರದು.
ಇನ್ನು, ಹರೆಯಕ್ಕೆ ಕಾಲಿಡುತ್ತಿದ್ದಂತೆ ಅವರ ದೈಹಿಕ, ಮಾನಸಿಕ ಬದಲಾವಣೆಗಳಿಂದ ಅವರದೇ ಹೊಸ ಕಲ್ಪನಾ ಪ್ರಪಂಚಕ್ಕೆ ಕಾಲಿಡುತ್ತಾರೆ. ನೆನಪಿಡಿ, ಮೊದಲಿನಂತೆ ಹದಿ-ಹರೆಯ ಈಗ ಹದಿಮೂರಕ್ಕೇ ಬರುತ್ತಿಲ್ಲ. ಅದು ಈಗೀಗ ಹತ್ತರಿಂದಲೇ ಪ್ರಾರಂಭವಾಗುತ್ತಿದೆ. ಕಾರಣಗಳು ಹಲವಿದ್ದರೂ, ಆಹಾರ ಪದ್ಧತಿ, ಜೀವನ ಕ್ರಮ, ಸಾಮಾಜಿಕ ಬದಲಾವಣೆಗಳು ಮುಖ್ಯವಾಗಿರುತ್ತವೆ.
ಖಂಡಿತವಾಗಿಯೂ ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ದಿಗಿಲಾಗುತ್ತದೆ. ಅವರ ಗ್ರಹಿಸುವಿಕೆಯ ವೇಗ, ಅನ್ಯ ವಿಷಯಗಳಲ್ಲಿ ಅವರು ತೋರುವ ಆಸಕ್ತಿ, ಅವರ ಕುತೂಹಲಗಳನ್ನು ಆಗಿಂದಾಗ್ಗೆ ತಣಿಸಿಬಿಡುವ ಇಂಟರ್ನೆಟ್, ಹೆಚ್ಚಿನ ವಿಷಯಗಳ ತಿಳಿವಿಗೆ ಶಿಕ್ಷಕರಿಗಿಂತ ಗೂಗಲ್ ಇತ್ಯಾದಿ ಸರ್ಚ್ ಎಂಜಿನ್ಗಳನ್ನೇ ಅವಲಂಬಿಸುವುದು, ತಾಳ-ತಂತಿಯಿಲ್ಲದ ಮೊಬೈಲ್ ಗೇಮ್ಗಳು… ನೆನೆದರೆ ಕರಿಛಾಯೆಯೇ ಎದ್ದು ಕಾಣುತ್ತದೆ. ಸಂಪೂರ್ಣ ಅವರದಲ್ಲ ತಪ್ಪಿಗೆ ಅವರನ್ನು ಮಾತ್ರವೇ ಬಲಿಪಶುಗಳನ್ನಾಗಿಸಹೊರಟಿದ್ದೇವಾ ಎಂಬುದು ಕೊನೆಗೂ ಕಾಡುವ ಪ್ರಶ್ನೆ.
– ಸತೀಶ್ ಮಾಗೋಡ್.