Saturday, June 13, 2026
HomeLifestyleಹರೆಯ ಬಂದ ಸಮಯ; ಮಕ್ಕಳ ಮೇಲೆ ಗಮನವಿರಲಿ!

ಹರೆಯ ಬಂದ ಸಮಯ; ಮಕ್ಕಳ ಮೇಲೆ ಗಮನವಿರಲಿ!

ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್, ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಹೊಸ ಹೊಸ ಆವಿಷ್ಕಾರಗಳು, ಆಧುನಿಕ ಸೌಲಭ್ಯಗಳು ಮತ್ತು ಕ್ಷಣಾರ್ಧದಲ್ಲಿ ಸಿಗುವ ಮಾಹಿತಿಯ ಬಗ್ಗೆ ನಾವು ಹೆಮ್ಮೆಪಡುತ್ತೇವೆ.

ಕೆಲಸ ಮುಗಿದ ತಕ್ಷಣವಾಗಲಿ, ಕೆಲವೊಮ್ಮೆ ಕೆಲಸ ಬದಿಗಿಟ್ಟು ಆಗಲಿ, ಮೊಬೈಲ್ ಪರದೆಯತ್ತ ಕಣ್ಣು ನೆಟ್ಟಿರುವುದು ಈಗ ಸಾಮಾನ್ಯವಾಗಿದೆ. ಹೊಸ ಮಾದರಿಯ ಮೊಬೈಲ್ ಖರೀದಿಸುವುದರಿಂದ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುವವರೆಗೆ ಎಲ್ಲವೂ ನಮ್ಮ ದಿನಚರಿಯ ಭಾಗವಾಗಿದೆ. ಆದರೆ ಈ ತಂತ್ರಜ್ಞಾನದ ಇನ್ನೊಂದು ಮುಖದ ಬಗ್ಗೆ ನಾವು ಗಮನ ಹರಿಸುತ್ತಿಲ್ಲ ನೋಡಿ!

ಆ ಕತ್ತಲೆ ಮುಖವೇ ಹರೆಯದ ಮಕ್ಕಳಲ್ಲಿ ಹೆಚ್ಚುತ್ತಿರುವ ಅಶ್ಲೀಲ ವಿಷಯಗಳ ವೀಕ್ಷಣೆ. ಕೆಲ ವರ್ಷಗಳ ಹಿಂದೆ ಕಾರ್ಟೂನ್‌ಗಳು, ಮಕ್ಕಳ ಕಾರ್ಯಕ್ರಮಗಳು ಮತ್ತು ಆಟಗಳು ಅವರ ಆಸಕ್ತಿಯ ಕೇಂದ್ರವಾಗಿದ್ದರೆ, ಇಂದು ಕೆಲವು ಮಕ್ಕಳು ಅತಿ ಚಿಕ್ಕ ವಯಸ್ಸಿನಲ್ಲೇ ವಯಸ್ಕರಿಗೆ ಮೀಸಲಾದ ಅಶ್ಲೀಲ ವಿಷಯಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದು ಕೇವಲ ಊಹೆಯಲ್ಲ. ವಿವಿಧ ಅಧ್ಯಯನಗಳು ಮತ್ತು ವರದಿಗಳು ಈ ಆತಂಕಕಾರಿ ಬೆಳವಣಿಗೆಯನ್ನು ಬಹಿರಂಗಪಡಿಸಿವೆ.

ಅಧ್ಯಯನಗಳ ಪ್ರಕಾರ, ಭಾರತದಲ್ಲಿ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲೂ ಅಶ್ಲೀಲ ವಿಡಿಯೋಗಳ ವೀಕ್ಷಣೆ ಹೆಚ್ಚುತ್ತಿದೆ. ಸರ್ಕಾರ ಅನೇಕ ಅಶ್ಲೀಲ ವೆಬ್‌ಸೈಟ್‌ಗಳಿಗೆ ನಿರ್ಬಂಧ ಹೇರಿದ್ದರೂ ಸಮಸ್ಯೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ತಂತ್ರಜ್ಞಾನದ ವಿವಿಧ ಮಾರ್ಗಗಳ ಮೂಲಕ ಇಂತಹ ವಿಷಯಗಳು ಮಕ್ಕಳ ಕೈಗೆ ತಲುಪುತ್ತಿವೆ. ಪರಿಣಾಮವಾಗಿ ಕುತೂಹಲದಿಂದ ಆರಂಭವಾಗುವ ಈ ಚಾಳಿ ಮುಂದೆ ವ್ಯಸನದ ಸ್ವರೂಪ ಪಡೆಯುತ್ತಿದೆ.

ಇದು ಕೇವಲ ಮನರಂಜನೆ ಅಥವಾ ಕುತೂಹಲದ ವಿಷಯವಲ್ಲ. ಮಕ್ಕಳ ಮಾನಸಿಕ ಬೆಳವಣಿಗೆ, ನಡವಳಿಕೆ ಮತ್ತು ಭವಿಷ್ಯದ ವ್ಯಕ್ತಿತ್ವದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಬೆಂಗಳೂರಿನ ಏಳು ವರ್ಷದ ಬಾಲಕಿಯೊಬ್ಬಳು ಕುಟುಂಬದ ಸಮಸ್ಯೆಗಳಿಂದ ಉಂಟಾದ ಮಾನಸಿಕ ಒತ್ತಡವನ್ನು ಮರೆಸಿಕೊಳ್ಳಲು ಅಶ್ಲೀಲ ವಿಡಿಯೋಗಳ ವ್ಯಸನಕ್ಕೆ ಒಳಗಾಗಿದ್ದಾಳೆ ಎಂಬ ವರದಿ ಕಳೆದ ವರ್ಷ ಚರ್ಚೆಗೆ ಕಾರಣವಾಗಿತ್ತು. ಇಂತಹ ಉದಾಹರಣೆಗಳು ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತವೆ.

ಮೊದಮೊದಲು ಕುತೂಹಲಕ್ಕಾಗಿ ನೋಡುವ ವಿಷಯಗಳು ಕ್ರಮೇಣ ಅಭ್ಯಾಸವಾಗಿ, ನಂತರ ವ್ಯಸನವಾಗಬಹುದು. ಈ ವಯಸ್ಸಿನಲ್ಲಿ ಮಕ್ಕಳು ನೋಡುವ ವಿಷಯಗಳು ಅವರ ಚಿಂತನೆ ಮತ್ತು ವರ್ತನೆ ಮೇಲೆ ನೇರ ಪರಿಣಾಮ ಬೀರುತ್ತವೆ. ಹೀಗಾಗಿ ಇದು ಕೇವಲ ವೈಯಕ್ತಿಕ ಸಮಸ್ಯೆಯಲ್ಲ. ಸಾಮಾಜಿಕ ಕಾಳಜಿಯ ವಿಷಯವೂ ಹೌದು.

ಭಾರತದಂತಹ ಸಂಪ್ರದಾಯ ಮತ್ತು ಕುಟುಂಬ ಮೌಲ್ಯಗಳಿಗೆ ಮಹತ್ವ ನೀಡುವ ದೇಶದಲ್ಲಿ ಈ ಬೆಳವಣಿಗೆ ಇನ್ನಷ್ಟು ಆತಂಕ ಹುಟ್ಟಿಸುತ್ತದೆ. ಬಾಲ್ಯ ಮತ್ತು ಹರೆಯ ಎನ್ನುವುದು ಶಿಕ್ಷಣ, ವ್ಯಕ್ತಿತ್ವ ವಿಕಾಸ ಮತ್ತು ಕನಸುಗಳ ನಿರ್ಮಾಣದ ಕಾಲ. ಆ ವಯಸ್ಸಿನಲ್ಲೇ ಮಕ್ಕಳು ಅಸಮರ್ಪಕ ವಿಷಯಗಳಿಗೆ ಒಳಗಾದರೆ ಅವರ ಬೆಳವಣಿಗೆಯ ದಿಕ್ಕೇ ಬದಲಾಗುವ ಅಪಾಯವಿದೆ.

ಹಾಗಾದರೆ ಪರಿಹಾರವೇನು? ಮೊದಲನೆಯದಾಗಿ, 13 ವರ್ಷದೊಳಗಿನ ಮಕ್ಕಳಿಗೆ ವೈಯಕ್ತಿಕ ಬಳಕೆಗೆ ಮೊಬೈಲ್ ನೀಡುವುದು ಎಷ್ಟು ಅಗತ್ಯ ಎಂಬುದನ್ನು ಪಾಲಕರು ಮರುಪರಿಶೀಲಿಸಬೇಕು. ಓದು ಅಥವಾ ಶಿಕ್ಷಣಕ್ಕಾಗಿ ಮೊಬೈಲ್ ನೀಡಬೇಕಾದ ಸಂದರ್ಭ ಬಂದರೆ ಅದರ ಬಳಕೆಯ ಮೇಲೆ ನಿಗಾ ಇರಬೇಕು. ಮಕ್ಕಳಿಗೆ ಮೊಬೈಲ್ ಕೊಟ್ಟು ನಂತರ ಸಂಪೂರ್ಣ ಸ್ವಾತಂತ್ರ್ಯ ನೀಡುವುದಕ್ಕಿಂತ, ಅವರು ಏನು ನೋಡುತ್ತಿದ್ದಾರೆ ಎಂಬುದರ ಬಗ್ಗೆ ಗಮನ ಹರಿಸುವುದು ಮುಖ್ಯ.

ಅಶ್ಲೀಲ ವಿಷಯಗಳ ದುಷ್ಪರಿಣಾಮಗಳು, ಆನ್‌ಲೈನ್ ಮೋಸಗಳು ಹಾಗೂ ಸಾಮಾಜಿಕ ಜಾಲತಾಣಗಳ ಅಪಾಯಗಳ ಬಗ್ಗೆ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಬೇಕು. ಹರೆಯಕ್ಕೆ ಕಾಲಿಡುವ ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ವಿಷಯವನ್ನು ಮುಚ್ಚಿಡುವುದಕ್ಕಿಂತ ವೈಜ್ಞಾನಿಕವಾಗಿ ವಿವರಿಸುವುದು ಹೆಚ್ಚು ಪರಿಣಾಮಕಾರಿ.

ಮಕ್ಕಳು ಮೊಬೈಲ್ ಬಳಸಬೇಕಾದರೆ ಪಾಲಕರ ಸಮ್ಮುಖದಲ್ಲೇ ಬಳಸುವಂತೆ ನೋಡಿಕೊಳ್ಳಬಹುದು. ಓದು, ಕ್ರೀಡೆ, ಪುಸ್ತಕ ವಾಚನ ಮತ್ತು ಸೃಜನಾತ್ಮಕ ಚಟುವಟಿಕೆಗಳತ್ತ ಅವರನ್ನು ಪ್ರೋತ್ಸಾಹಿಸಬಹುದು. ಮಕ್ಕಳೊಂದಿಗೆ ಸಮಯ ಕಳೆಯುವುದು, ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಸ್ನೇಹಪೂರ್ವಕ ಸಂವಹನ ನಡೆಸುವುದು ಕೂಡ ಸಮಸ್ಯೆ ತಡೆಯುವ ಪರಿಣಾಮಕಾರಿ ಮಾರ್ಗಗಳು.

ಎಲ್ಲ ಜವಾಬ್ದಾರಿಯನ್ನೂ ಸರ್ಕಾರ ಅಥವಾ ಕಾನೂನಿನ ಮೇಲೆ ಹಾಕಿ ಕೈತೊಳೆಯುವುದಕ್ಕಿಂತ, ಮೊದಲು ಪಾಲಕರಾಗಿ ನಮ್ಮ ಪಾತ್ರವನ್ನು ನಾವು ನಿಭಾಯಿಸಬೇಕು. ಎಚ್ಚರಿಕೆ, ಮಾರ್ಗದರ್ಶನ ಮತ್ತು ಕಾಳಜಿಗಳೇ ಮಕ್ಕಳನ್ನು ಸುರಕ್ಷಿತ ಭವಿಷ್ಯದತ್ತ ಕೊಂಡೊಯ್ಯಬಲ್ಲವು.

— ಅಲೆಮಾರಿ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share