ಒಂದು ದಿನ ನಾರದಮುನಿ ಎಂದಿನಂತೆ ತ್ರಿಲೋಕ ಸಂಚಾರ ಮುಗಿಸಿ ವೈಕುಂಠಕ್ಕೆ ಬಂದು ನಾರಾಯಣನ ಪಾದಾರವಿಂದಗಳಿಗೆ ನಮಸ್ಕರಿಸಿದ.
“ನಾರಾಯಣ… ನಾರಾಯಣ…!”
“ಏನಾಯ್ತು ನಾರದಾ? ಇವತ್ತು ನಿನ್ನ ಮುಖದಲ್ಲಿ ವಿಚಿತ್ರ ಕಳವಳ ಕಾಣುತ್ತಿದೆ. ಎಲ್ಲಾದರೂ ಚುನಾವಣೆ ಘೋಷಣೆಯಾಗಿದೆಯೇ?” ಎಂದು ಶ್ರೀಹರಿ ನಗುತ್ತ ಕೇಳಿದ.
“ಅದಕ್ಕಿಂತ ವಿಚಿತ್ರವಾದ ಸಂಗತಿ ಪ್ರಭು! ಈ ವಿಷಯವನ್ನು ಕೇಳಿ ತಿಳಿದಾಗಿನಿಂದ ನಾನು ನಿಂತಲ್ಲಿ ನಿಲ್ಲಲಾಗುತ್ತಿಲ್ಲ. ಕುಂತಲ್ಲಿ ಕೂರಲಾಗುತ್ತಿಲ್ಲ. ಆ ಪತ್ರಿಕಾ ವರದಿಗಾರ ಈ ಸ್ತ್ರೀ ಲೋಲುಪನ ಕಥೆ ಹೇಳಿ ಮುಗಿಸುತ್ತಿದ್ದಂತೆಯೇ ನನ್ನ ಮನದಲ್ಲಿ ತಲ್ಲಣ ಶುರುವಾಯ್ತು. ಆತ, ತುಸು ನಿಲ್ಲು ನಾರದಾ…, ಭೂಲೋಕದಲ್ಲಿ ಇನ್ನೂ ಚಿತ್ರಾನುವಿಚಿತ್ರ ಕಥೆಗಳಿವೆ. ಎರಡು ಕಾಲಿನ ಕರಡಿಯ ಕಥೆಯನ್ನು ಹೇಳುತ್ತೇನೆ ಕೇಳು ಎನ್ನುತ್ತಿದ್ದರೂ ತಡೆಯಲಾರದೇ ಈ ಕಪಟಿ ಪ್ರೇತಾತ್ಮದ ಕಥೆ ಹೇಳಬೇಕೆಂದು ಓಡೋಡಿ ಬಂದೆ”
ನಾರದರ ಈ ಮಾತು ಕೇಳುತ್ತಿದ್ದಂತೆ ಶ್ರೀಹರಿ ಎದ್ದು ಕುಳಿತ. “ಅದೇನು ಕಥೆ ಹೇಳು ನಾರದಾ, ಭೂಲೋಕ ಈ ಹಂತಕ್ಕೆ ಖರಾಬು ಹಿಡಿದಿದೆಯೆಂದರೆ ಮೈಯೆಲ್ಲ ಉರಿಯುತ್ತಿದೆ. ಅದೇನು ಕಥೆಯೋ ಹೇಳು…”
“ಪ್ರಭೂ, ಭೂಲೋಕದ ಉತ್ತರ ಕಾಣದ ಜಿಲ್ಲೆಯಲ್ಲಿ ಇಲ್ಲಾಪುರ ಎಂಬ ಪಟ್ಟಣವಿದೆ. ತಾನಾಯಿತು, ತನ್ನ ಕೆಲಸವಾಯಿತು ಎಂಬಂತೆ ಇರುವ ಆ ಪಟ್ಟಣದಲ್ಲಿ ಆಗಾಗ ಘಾತುಕ ಪ್ರಕರಣಗಳೂ, ಅದನ್ನು ಮುಚ್ಚಿಹಾಕುವ ಒಂದಿಷ್ಟು ಪ್ರಯತ್ನಗಳೂ ನಡೆಯುತ್ತಲೇ ಇರುತ್ತವೆ ಪ್ರಭೂ. ಆಡಳಿತ ಕೇಂದ್ರದ ಬಳಿ ಒಂದು ಆಧುನಿಕ ಗಣಕ ವಿದ್ಯಾ ಕೇಂದ್ರವಿದೆಯಂತೆ.”
“ಅದು ಒಳ್ಳೆಯ ವಿಷಯವಲ್ಲವೇ? ಮಕ್ಕಳು ವಿದ್ಯೆ ಕಲಿಯಲಿ. ಈಗಿನ ಕಾಲಕ್ಕೆ ಗಣಕಯಂತ್ರ ಜ್ಞಾನ ಅತ್ಯವಶ್ಯ ಎಂಬುದನ್ನು ನಿನ್ನಿಂದಲೇ ಕೇಳ್ಪಟ್ಟಿದ್ದೇನೆ.”
“ಅದೇ ಸಮಸ್ಯೆ ಪ್ರಭು! ಅಲ್ಲಿ ಗಣಕಯಂತ್ರಕ್ಕಿಂತ ಬೇರೆಯದೇ ಪಾಠಗಳಿಗೆ ಹೆಚ್ಚು ಮಹತ್ವ ಸಿಗುತ್ತಿದೆ ಎನ್ನುವದು ಆತಂಕ ಹುಟ್ಟಿಸಿದೆ.”
“ಹೇಗೆ? ಅದು ಹೇಗೆ ನಾರದಾ? ಆಗಿದ್ದಾದರೂ ಏನು, ಯಾರಾ ಪ್ರೇತಾತ್ಮ?” ಶ್ರೀಮನ್ನಾರಾಯಣನಿಗೆ ಕುತೂಹಲ ತಡೆಯಲಾಗದೆ ಪುಂಖಾನುಪುಂಖವಾಗಿ ಪ್ರಶ್ನೆ ಸುರಿಸಿದ.
“ಸಾವಧಾನ ಶ್ರೀಹರೀ. ಕಂಪ್ಯೂಟರ್ ಕಲಿಯಲು ಹೋದವರಿಗೆ ಅದೊಂದನ್ನೇ ಕಲಿಸಬೇಕಲ್ಲವೇ? ಉಳಿದಿದ್ದನ್ನು ಕಲಿಯಲು ಆಸಕ್ತರು ಬೇರೆಯದೇ ಕೇಂದ್ರಗಳಿಗೆ ತೆರಳಬೇಕು. ಆದರೆ… ಗಣಕಯಂತ್ರದ ಮೌಸ್ ಹೇಗೆ ಹಿಡಿಯಬೇಕು ಎಂಬುದನ್ನೂ ಕೈಹಿಡಿದೇ ಕಲಿಸಬೇಕೇ? ಕೀಬೋರ್ಡ್ ಕಲಿಸುವ ಬದಲು ಕಣ್ಣುಗಳಿಂದಲೇ ಪರೀಕ್ಷೆ ಮಾಡಬೇಕೇ? ಸಾಫ್ಟ್‌ವೇರ್ ಬೋಧಿಸುವ ಬದಲು ಸಾಫ್ಟ್ ಮಾತುಗಳ ಮಳೆ ಸುರಿಸಬೇಕೇ?”
ಭಗವಾನ್ ನಾರಾಯಣ ಕಣ್ಣು ಮುಚ್ಚಿ ಕ್ಷಣಕಾಲ ಧ್ಯಾನಿಸಿದ.“ಹೇಳುವುದನ್ನು ನೇರವಾಗಿ ಹೇಳಲು ನಿನಗೇನು ತೊಂದರೆ ನಾರದಾ?”
“ಹೌದು ಪ್ರಭು! ಪರರ ಮನೆಯ ದೀಪ ಬೆಳಗಬೇಕಿದ್ದ ಈ ಪ್ರೇತಾತ್ಮ ಗೋಮುಖ ಹೊತ್ತ ವ್ಯಾಘ್ರನಂತೆ ಕಾಣುತ್ತಿದ್ದಾನೆ ನನಗೆ. ಆತನೋ, ಹಗಲು ಸಮಾಜಸೇವಕ. ಸಂಜೆ ರಾಜಕಾರಣಿ. ರಾತ್ರಿ ಗಣಕಗುಹೆಯ ಅಧಿಪತಿ. ಆದರೆ ಅವನ ಚಿತ್ತ ಮಾತ್ರ ಯಾವಾಗಲೂ ಬೇರೆ ಲೆಕ್ಕಾಚಾರದಲ್ಲೇ ಇರುತ್ತದೆ.”
“ಅಹುದೇ? ವಿಚಿತ್ರವಾಗಿದೆಯಲ್ಲ! ಆಗಿದ್ದಾದರೂ ಏನು?”
“ಸರಿ ಶ್ರೀಹರಿ. ಭೂತಕಾಲದ ನೆನಪುಗಳೊಂದಿಗೆ ಸಂವತ್ಸರದ ಹಿಂದೆ ನಡೆದ ಈ ಬಹುಮುಖ ಪ್ರತಿಭಾ ದೀಪದ ಸಂಪೂರ್ಣ ವಿವರ ಹೇಳುತ್ತೇನೆ ಪ್ರಭೂ.”
“ಹತ್ತಾರು ವರ್ಷಗಳ ಹಿಂದೆ ಪಟ್ಟಣದ ಬಸ್ ತಂಗುದಾಣದ ಬಳಿ ಸ್ಥಾಪಿತವಾದ ಈತನ ಆಧುನಿಕ ಗಣಕಯಂತ್ರ ಕೇಂದ್ರದ ಗರ್ಭದೊಳಗೆ ಇಂತಹ ಕಥೆಗಳು ಹುಟ್ಟಿಕೊಳ್ಳುತ್ತವೆ. ಅದಾಗಷ್ಟೇ ಶಿಕ್ಷಣ ಮುಗಿಸಿದ ತಮ್ಮ ಕುಲಪುತ್ರ ಅಲ್ಲೆಲ್ಲೋ ಯಾರದೋ ಕೈಕೆಳಗೆ ಕೆಲಸ ಮಾಡುತ್ತ ಕಳೆಯುವುದನ್ನು ಇಷ್ಟಪಡದ ಆ ಮರಿ ಪುಢಾರಿ ದಂಪತಿಗಳು ಮಗನಿಗಾಗಿ ಗಣಕ ತರಬೇತಿ ಕೇಂದ್ರವೊಂದನ್ನು ಸ್ಥಾಪಿಸಿಕೊಡಲು ಮುಂದಾದರು. ಅದರೊಂದಿಗೇ ನಿಧಾನವಾಗಿ ರಾಜಕೀಯ ರಂಗಕ್ಕೂ ಕರೆತಂದರೆ ತಮ್ಮ ಕುಲದ ಹೆಸರು ಬೆಳಗಿಯಾನು ಎಂಬ ಉದ್ದೇಶವೂ ಇತ್ತು ಪ್ರಭು…”
“ಸರಿ. ಗಣಕ ಕೇಂದ್ರದ ಆರಂಭೋತ್ಸವ ನಾಳೆ ನಡೆಯಲಿದೆ ಎಂದಾದರೆ ಹಿಂದಿನ ದಿನ ಈ ಪರರ ಮನೆಯ ದೀಪವಾರಿಸುವವ ತನ್ನ ಸ್ನೇಹಿತರ ಠೋಳಿಯೊಂದಿಗೆ ಖುಷಿಯ ಕೂಟ ನಡೆಸಲು ಲೋಕ ಸಂಚಾರ ಹೊರಟ. ವಾಹನದಲ್ಲಿ ಅಬ್ಬರದ ಸಂಗೀತ, ಎಲ್ಲರ ಕೈಯಲ್ಲೂ ಒಂದೊಂದು ಮದಿರೆಯ ಬಾಟಲಿ. ಹಾಗೆಯೇ ಸಂಚರಿಸುತ್ತ ಮುಂದೋಡು ಜಲಪಾತದ ಕಡೆಗೆ ಸವಾರಿ ಸಾಗುತ್ತಿತ್ತು. ಸಂಜೆ 4-5ರ ಸಮಯ ಪ್ರಭೂ. ಸಣ್ಣಗೆ ಸುರಿಯುವ ಸೋನೆ ಮಳೆ ಬೇರೆ. ತಣ್ಣನೆಯ ವಾತಾವರಣ. ಒಳಗಿರುವ ಮದಿರೆ ಕೆಲಸ ಮಾಡಲು ಪ್ರಾರಂಭಿಸಿತ್ತು. ರಥದ ಒಳಗೆ ಕುಳಿತವರ ಮನಸ್ಸು ಮರ್ಕಟವಾಗಿ ಕುಣಿಯತೊಡಗಿತ್ತು.”
“ಶಾಲಾ ತರಗತಿಗಳನ್ನು ಮುಗಿಸಿ ಸಾರ್ವಜನಿಕ ಬಂಡಿಯೇರಿ, ತನ್ನ ನಿಲ್ದಾಣದಲ್ಲಿ ಇಳಿದು ಮನೆಯತ್ತ ಸಾಗುತ್ತಿದ್ದ ಪ್ರೌಢ ಹಂತದ ವಿದ್ಯಾರ್ಥಿನಿಯೊಬ್ಬಳು ಇವರ ಕಣ್ಣಿಗೆ ಬಿದ್ದಿದ್ದೇ ತಡ. ಹೇಗೂ ಒಂಟಿಯಾಗಿದ್ದಾಳೆ, ತುಸು ತಮಾಷೆ ತೆಗೆದುಕೊಳ್ಳೋಣವೆಂದು ವಾಹನವನ್ನು ಅವಳ ಪಕ್ಕದಲ್ಲಿಯೇ ನಿಲ್ಲಿಸಿ ತಮ್ಮ ಧೂರ್ತ ವರ್ತನೆ ತೋರಿಸತೊಡಗಿದ್ದರು ಪ್ರಭೂ…”
“ಛೆಛೆ…. ವಿದ್ಯಾವಂತರಾಗಿ ಇಂತಹ ಕೃತ್ಯ ಮಾಡಬಹುದೇ ನಾರದಾ? ಇದು ತಪ್ಪಲ್ಲವೇ? ಮುಂದೇನಾಯ್ತು?”
“ಹೇಳುವೆ ಪ್ರಭೂ. ಆ ಮಗುವಾದರೂ ಕಂಗಾಲಾಗಿ ದೊಡ್ಡದಾಗಿ ಬೊಬ್ಬಿರಿಯತೊಡಗಿದ್ದಳು. ಕಗ್ಗಾಡಿನ ರಸ್ತೆ ಬೇರೆ. ಆಕೆಯ ಅದೃಷ್ಟಕ್ಕೆ ಅದೇ ಸಮಯಕ್ಕೆ ಬಂದ ದಾರಿಹೋಕರೊಬ್ಬರು ರಕ್ಷಣೆಗೆ ನಿಂತಿದ್ದರು. ಈ ಯುವಕರ್ಯಾರೋ ಪರವೂರಿನವರು, ಮುಂದೋಡು ಜಲಪಾತಕ್ಕೆ ಬಂದು ಇಂತಹ ಮಣ್ಣು ತಿನ್ನುವ ಕೆಲಸಕ್ಕೆ ಕೈಹಾಕಿದ್ದಾರೆಂದು ಎಣಿಸುತ್ತಿದ್ದಾಗ ಈ ಪರರ ಮನೆಯ ದೀಪವಾರಿಸುವ ಕಮಂಗಿಯ ಗುರುತು ಪತ್ತೆಯಾಗಿತ್ತು.”
“ವಾಹನದಲ್ಲಿದ್ದವರಿಗೆ ತಲೆಗೇರಿದ್ದ ನಶೆ ನಿಧಾನವಾಗಿ ಇಳಿಯತೊಡಗಿತ್ತು, ಕ್ಷಣವೂ ಅಲ್ಲಿ ನಿಲ್ಲದೆ ಪೇರಿಕಿತ್ತಿದ್ದರು. ಮರುದಿನ ವಿಷಯ ಪಾಲಕರ ಬಳಿಗೂ ತಲುಪಿತ್ತು. ಅವರಾದರೋ, ದೂರು ತಂದವರ ಕೈಕಾಲು ಹಿಡಿದು, ನಾಳೆಯೇ ಕುಲಪುತ್ರನ ಗಣಕ ತರಬೇತಿ ಕೇಂದ್ರ ಆರಂಭವಾಗಲಿದೆ. ಇದು ಆತನ ಭವಿಷ್ಯದ ಪ್ರಶ್ನೆ, ಈ ವಿಷಯ ಇಲ್ಲಾಪುರದ ತುಂಬ ಗುಲ್ಲಾದರೆ ಮಗನ ಭವಿಷ್ಯವೇನು, ಇಲ್ಲಿಗೇ ಬಿಟ್ಟುಬಿಡಿ ಎಂದು ಗೋಳಾಡಿದರು. ಆ ಗ್ರಾಮಸ್ಥರಾದರೋ, ಮಂದಗಾಮಿಗಳು. ಇವರ ಕಣ್ಣೀರಿಗೆ ಕರಗಿದರು. ಪರರ ಮನೆಯ ದೀಪವೂ ಕ್ಷಮೆ ಕೇಳಿತು. ಇನ್ನೆಂದೂ ಹೀಗೆ ಸಗಣಿ ತಿನ್ನುವ ಕೆಲಸ ಮಾಡಲಾರೆ ಎಂದು ನಾಟಕವಾಡಿತು ಪ್ರಭೂ. ಪ್ರಕರಣ ಅಲ್ಲಿಗೇ ಮುಕ್ತಾಯವೂ ಆಯಿತು.”
“ಆಯ್ತಲ್ಲ. ಇಷ್ಟಾದ ಮೇಲೆ? ಆಧುನಿಕ ಗಣಕ ಕೇಂದ್ರ ಮುಂದುವರೆಯಿತು. ಮುಂದೆನಿದೆ ನಾರದಾ? ಈಗೇಕೆ ಭೂತಕಾಲದ ನೆನಪಾಯ್ತು?” ಶ್ರೀಹರಿಯ ಮೊಗದಲ್ಲಿ ಪ್ರಶ್ನೆಯಿತ್ತು.
“ಮುಗಿಯಿತು ಎಂಬುದೇನೋ ನಿಜವೇ ಪ್ರಭೂ. ಆದರೆ, ಕಣ್ಣೀರು ಸುರಿಸಿದಂತೆ ಪರರ ಮನೆಯ ದೀಪ ಬದಲಾಗಲಿಲ್ಲ. ಒಳಗೊಳಗೇ ಆತನ ಗೋಮುಖದ ಹಿಂದಿರುವ ವ್ಯಾಘ್ರ ಕೆಲಸ ಮಾಡುತ್ತಲೇ ಇತ್ತು. ತರುವಾಯ ನೂರಾರು ವಿದ್ಯಾರ್ಥಿಗಳು ಗಣಕ ಶಿಕ್ಷಣ ಪಡೆಯಲು ಬರುತ್ತಾರೆ. ಈತನೋ, ವಿದ್ಯಾರ್ಥಿಗಳಿಗಿಂತ ಹೆಚ್ಚಾಗಿ ವಿದ್ಯಾರ್ಥಿನಿಯರಿಗೆ ಪಾಠ ಮಾಡುವುದರಲ್ಲಿಯೇ ಆಸಕ್ತ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೂಡ ಇಲ್ಲಿ ಶಿಕ್ಷಣ ಪಡೆವರು. ಮುಂದೆ, ವರ್ಷದ ಹಿಂದೆ, ಅದರಲ್ಲೊಬ್ಬಳು ಯುವತಿಯ ಜೀವನದ ದೀಪವನ್ನೇ ಆರಿಸಲು ಹೊರಟಿದ್ದ ಈ ಪ್ರೇತಾತ್ಮ!”
“ನೋಡಲು ಪಕ್ಕಾ ಮುಗ್ಧನಂತೆ ಕಾಣುವ ಈ ಪರರ ಮನೆಯ ದೀಪ ಸಾಮಾನ್ಯದವನಲ್ಲ ಶ್ರೀಹರಿ. ಬಾಯಲ್ಲಿ ಬೆಣ್ಣೆಯ ಮಾತುಗಳನ್ನಾಡುತ್ತ ತನ್ನ ಗಣಕ ತರಬೇತಿ ಕೇಂದ್ರಕ್ಕೆ ಬರುವ ಪ್ರಾಯದ ಯುವತಿಯರನ್ನು ಆತ ನೋಡುವ ದೃಷ್ಟಿಯೇ ಬೇರೆಯಿತ್ತು ಪ್ರಭೂ. ಕಾಮಾತುರಾಣಾಂ ಭಯವೆಲ್ಲಿ, ಲಜ್ಜೆಯೆಲ್ಲಿ ಪ್ರಭೂ”
“ಇಂತಿಪ್ಪ ಸಂದರ್ಭದಲ್ಲಿ ಕಾಮಾಲೆ ಎಂಬ ಗ್ರಾಮದ ಕಾಲೇಜು ಕನ್ಯೆಯೊಬ್ಬಳ ಮೇಲೆ ಈತನ ಕಾಮುಕ ದೃಷ್ಟಿ ಹರಿದಿತ್ತು. ತನ್ನ ಗಣಕ ಕೇಂದ್ರದಲ್ಲಿ ಆಕೆಯನ್ನು ನೋಡಿದಾಗಲೆಲ್ಲಾ ಈ ಪರರ ಮನೆಯ ದೀಪವಾರಿಸುವ ಕಾಮಾಂಧನಿಗೆ ಮನಸ್ಸು ಮರ್ಕಟವಾಗಿಬಿಡುತ್ತಿತ್ತು. ಸುಮ್ಮ ಸುಮ್ಮನೇ ಮೈಮುಟ್ಟುವುದು, ಅಸಹ್ಯಕರವಾದ ಸನ್ನೆ ಮಾಡುವುದು ಇತ್ಯಾದಿ ಇತ್ಯಾದಿ ಕೀಟಲೆಗಳು…”
“ಆತ ಈಗ ರಾಜಕಾರಣಿಯೂ ಹೌದು ಪ್ರಭೂ! ಹೇಳಿಕೊಳ್ಳಲು ಸನಾತನ ಧರ್ಮ ಉಳಿದಿರುವುದೇ ತಮ್ಮಿಂದ ಎನ್ನುತ್ತ ತಿರುಗಾಡುವ ರಾಜಕೀಯ ಪಕ್ಷದಲ್ಲಿ ಈತನೂ ಓರ್ವ ಪದಾಧಿಕಾರಿ! ಪಾಪ, ಈ ಗ್ರಾಮೀಣ ಪ್ರದೇಶದ ಹೆಣ್ಮಕ್ಕಳ ಪಾಲಕರೋ, ಆತ ಸನಾತನ ಪಕ್ಷದವ ಎಂಬ ನಂಬುಗೆಯಿಂದ ತಮ್ಮ ಮನೆಯ ದೀಪಗಳನ್ನು ಇವನಲ್ಲಿಗೆ ಕಳಿಸುತ್ತಲಿದ್ದರು. ಆದರೆ ಈತ ಮಾತ್ರ ಮಣ್ಣು ತಿನ್ನುವ ಕೆಲಸ ಮಾಡಿಬಿಟ್ಟನಲ್ಲ ಪ್ರಭೂ….”
“ಇಷ್ಟೆಲ್ಲ ಬಿರುದು ಬಾವಲಿಗಳ ನಡುವೆ ಅತ್ಯಾಚಾರಿಯೂ ಆದನೇ?” ಶ್ರೀಹರಿಯ ಕಣ್ಣು ಸಿಟ್ಟಿನಿಂದ ಅದಾಗಲೇ ಕೆಂಪಗಾಗತೊಡಗಿತ್ತು.
“ಇಲ್ಲ ಪ್ರಭೂ. ಆ ಹಂತಕ್ಕೆ ತಲುಪುವ ಮುನ್ನವೇ ಯುವತಿಗೆ ಅನುಮಾನ ಮೂಡಿತ್ತು. ಗಣಕ ಶಿಕ್ಷಣ ಕೊಡಬೇಕಾದ ಈತ ಹ್ಯೂಮನ್ ಅನಾಟಮಿಯ ಪಾಠವನ್ನೇಕೆ ಮಾಡುತ್ತೇನೆ ಎನ್ನುತ್ತಿದ್ದಾನೆ ಎಂದು ತನ್ನ ಮನೆಯಲ್ಲಿ ಪಾಲಕರಿಗೂ ವಿಷಯ ಮುಟ್ಟಿಸಿದಳು. ಪಾಪ, ಆ ಹೆಣ್ಣುಮಗಳಂತೂ ಹುಲಿಯನ್ನು ಕಂಡು ಹೆದರಿದ ಗೋವಿನಂತಾಗಿದ್ದಳು”
“ಅಲ್ಲಿಗೆ ಕಥೆ ಮುಗಿಯಿತೆನ್ನಿ. ಆರಕ್ಷಕ ಠಾಣೆಯಲ್ಲಿ ಕಂಬಿಗಳನ್ನು ಎಣಿಸುತ್ತಿದ್ದಾನೆಯೇ ಈಗ?”
“ಹಹ್ಹ! ಅದಕ್ಕಾಗಿಯೇ ನಾನು ಹೇಳುವುದು. ಆಗಾಗ ನನ್ನೊಂದಿಗೆ ಭೂಲೋಕ ಸಂಚಾರಕ್ಕೆ ತಾವೂ ಬನ್ನಿ ಎಂದು! ಕೇಳುವಿರಾ ನೀವು?! ಆರಕ್ಷಕ ಠಾಣೆಯಲ್ಲಿ ಪ್ರಕರಣವಾದರಲ್ಲವೇ ಶಿಕ್ಷೆಯಾಗುವುದು, ಕಂಬಿ ಎಣಿಸುವುದು, ಕಲಿಯುಗವಲ್ಲವೇ ಪ್ರಭೂ. ಭೂಲೋಕದಲ್ಲಿ ನ್ಯಾಯದ ಚಕ್ರ ತಿರುಗುತ್ತದೆ, ಆದರೆ ಕೆಲವೊಮ್ಮೆ ಅದರ ಅಚ್ಚಿಗೆ ಎಣ್ಣೆ ಹಚ್ಚುವವರು ಬೇರೆ ಇರುತ್ತಾರೆ. ಎಲ್ಲರೂ ಸೇರಿ ಸತ್ಯವನ್ನೇ ಹೆದರಿಸಿದರು…!”
ಮುಂದೆ…?
ಸದರಿ ಪುರಾಣ ಸರಣಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನಷ್ಟೇ ಹೊಂದಿದೆ. ಕಥೆ ಕಾಲ್ಪನಿಕವೇ ಆಗಿದ್ದರೂ, ಕೆಲ ಘಟನೆಗಳು, ವ್ಯಕ್ತಿಗಳ ಪರಿಚಯದೊಂದಿಗೆ ಹೋಲಿಕೆ ಕಂಡುಬಂದಲ್ಲಿ ಅದು ಕಾಕತಾಳೀಯ ಮಾತ್ರ. ಇಂತಹ ಹೋಲಿಕೆಗೆ ಲೇಖಕನಾಗಲೀ, ಕೆನರಾ ನೆಕ್ಸ್ಟ್ ವಾಹಿನಿಯಾಗಲೀ ಜವಾಬ್ದಾರಿಯಲ್ಲ.