ಯಲ್ಲಾಪುರ: ಹೆಬ್ಬಾರ್ ನಗರದಲ್ಲಿ ನಿರ್ಮಿಸಿರುವ ಜಿ+2 ಮನೆಗಳನ್ನು ತಕ್ಷಣ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು. ಮೊದಲಿಗೆ ₹50 ಸಾವಿರ ಮತ್ತು ನಂತರ ₹75 ಸಾವಿರ ಹಣವನ್ನು ಫಲಾನುಭವಿಗಳಿಂದ ವಸೂಲಿ ಮಾಡಲಾಗಿದ್ದು, ಇದರ ಬಗ್ಗೆ ಸಂಪೂರ್ಣ ವಿವರವನ್ನು ಶಾಸಕರು ಬಹಿರಂಗಪಡಿಸಬೇಕು ಎಂದು ಬಿಜೆಪಿ ಯಲ್ಲಾಪುರ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವನ್ನು ಖಂಡಿಸಿ ಯಲ್ಲಾಪುರ ಪಟ್ಟಣದ ತಹಸೀಲ್ದಾರ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ತ್ರೀರೋಗ ತಜ್ಞರನ್ನು ನೇಮಿಸಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯನ್ನು ನೀಗಿಸಬೇಕು ಎಂದು ಅವರು ಒತ್ತಾಯಿಸಿದರು.
ತಾಲೂಕಿನಲ್ಲಿ ಮಳೆ ಮಾಪನ ಕೇಂದ್ರಗಳ ಅವ್ಯವಸ್ಥೆಯನ್ನು ಸರಿಪಡಿಸಬೇಕು, ಕಾಡುಪ್ರಾಣಿಗಳ ದಾಳಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು ಮತ್ತು ಕಣ್ಣಿಗೇರಿ, ಕಿರವತ್ತಿ, ಮದನೂರು ಭಾಗಗಳ ಕೆರೆ ತುಂಬಿಸುವ ಯೋಜನೆಗಳ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು. ಜೊತೆಗೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಮನವಿ ಮಾಡಿದರು.
15ನೇ ಹಣಕಾಸು ಯೋಜನೆ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಸಂಬಂಧಿತ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಸದಸ್ಯರ ಆಕ್ರೋಶ
ಪ.ಪಂ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ ಮಾತನಾಡಿ, ರಾಜಕೀಯ ಹಸ್ತಕ್ಷೇಪ, ದಬ್ಬಾಳಿಕೆ ಮತ್ತು ದ್ವೇಷದ ರಾಜಕಾರಣದಿಂದ ಆಡಳಿತ ವ್ಯವಸ್ಥೆ ಹಳ್ಳ ಹಿಡಿದಿದೆ ಎಂದು ಆರೋಪಿಸಿದರಲ್ಲದೆ, ಇದಕ್ಕೆ ಸ್ಥಳೀಯ ಶಾಸಕರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ತಾಲೂಕಿನ ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ದೇಸಾಯಿಮನೆಕೊಡ್ಲುವಿನ ಯುವತಿ ತೇಜಾ ರಾಮಕೃಷ್ಣ ಭಟ್ಟ ನಾಪತ್ತೆಯಾಗಿ ವರ್ಷಗಳೇ ಕಳೆದರೂ ಆಕೆಯ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಮಾಹಿತಿಯೂ ಇಲ್ಲ. ಈ ಬಗ್ಗೆ ತನಿಖೆ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂದು ಗಮನ ಸೆಳೆದರು.
ಅಧಿಕಾರಿಗಳ ಸ್ಪಷ್ಟನೆ
ಪ್ರತಿಭಟನಾಕಾರರ ಅಹವಾಲುಗಳಿಗೆ ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ, ವೈದ್ಯರ ನೇಮಕಾತಿ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೇಶವ ಚೌಗಲೆ ಮಾತನಾಡಿ, ಸ್ಲಂ ಮನೆಗಳಿಗೆ ಸರ್ಕಾರದ ಆದೇಶದಂತೆ ಫಲಾನುಭವಿಗಳಿಂದ ₹1 ಲಕ್ಷ ವಸೂಲಿ ಮಾಡಲಾಗುತ್ತಿದೆ ಮತ್ತು ಇದೇ ತಿಂಗಳಲ್ಲಿ ಮನೆ ಹಸ್ತಾಂತರ ನಡೆಯಲಿದೆ ಎಂದರು.
ಆದರೆ ಹೆಚ್ಚುವರಿಯಾಗಿ ₹25 ಸಾವಿರ ವಸೂಲಿ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ಸಾಧ್ಯವಾಗದೆ ಪರದಾಡಿದರು.
ತಹಸೀಲ್ದಾರ ಎಂ.ಆರ್. ಕುಲಕರ್ಣಿ ಮಾತನಾಡಿ, ಮಳೆ ಮಾಪನ ಕೇಂದ್ರಗಳ ದುರಸ್ತಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜೂನ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಪ್ರತಿಭಟನಾಕಾರರು ಗಮನಕ್ಕೆ ತಂದ ಎಲ್ಲ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿಬಿಜೆಪಿ ಮುಖಂಡರಾದ ಎಲ್.ಟಿ. ಪಾಟೀಲ, ಉಮೇಶ ಭಾಗ್ವತ, ಗಣೇಶ ಪಾಟಣಕರ, ರಮೇಶ ನಾಯ್ಕ ಬನವಾಸಿ, ಶ್ಯಾಮಿಲಿ ಪಾಟಣಕರ್, ಅರ್ಜುನ ಬೆಂಗೇರಿ ಸೇರಿದಂತೆ ಹಲವರು ಮಾತನಾಡಿದರು.
ಪಕ್ಷದ ಪ್ರಮುಖರಾದ ರಾಮು ನಾಯ್ಕ, ಗಣೇಶ ಹೆಗಡೆ, ನಟರಾಜ ಗೌಡ, ರವಿ ಕೈಟ್ಕರ, ಸುಬ್ಬಣ್ಣ ಉದ್ದಾಬೈಲ್, ರಾಘು ಕುಂದರಗಿ, ಅಶೋಕ ಚಲವಾದಿ, ಬಾಬು ಬಾಂದೇಕರ್, ರಾಘವೇಂದ್ರ ಭಟ್ಟ ಹಾಸಣಗಿ, ರಮೇಶ ನಾಯ್ಕ ಬನವಾಸಿ ಸೇರಿದಂತೆ ಅನೇಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಬಿಜೆಪಿಯ ಪ್ರಮುಖ ಬೇಡಿಕೆಗಳು
* ಹೆಬ್ಬಾರ್ ನಗರ ಜಿ+2 ಮನೆಗಳನ್ನು ತಕ್ಷಣ ಹಸ್ತಾಂತರಿಸಬೇಕು.
* ವಸೂಲಿ ಮಾಡಿದ ಹಣದ ವಿವರಗಳನ್ನು ಸಾರ್ವಜನಿಕಗೊಳಿಸಬೇಕು.
* ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ತ್ರೀರೋಗ ತಜ್ಞರನ್ನು ನೇಮಿಸಬೇಕು.
* ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯನ್ನು ನೀಗಿಸಬೇಕು.
* ಮಳೆ ಮಾಪನ ಕೇಂದ್ರಗಳ ಅವ್ಯವಸ್ಥೆಯನ್ನು ಸರಿಪಡಿಸಬೇಕು.
* ಕಾಡುಪ್ರಾಣಿಗಳ ದಾಳಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು.
* ಕೆರೆ ತುಂಬಿಸುವ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು.
* ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.