Tuesday, June 16, 2026
HomeLocal Newsಅಕ್ರಮ ಸಾರಾಯಿ-ಡ್ರಗ್ಸ್ ವಿರುದ್ಧ ಅನಂತಮೂರ್ತಿ ಸಮರ

ಅಕ್ರಮ ಸಾರಾಯಿ-ಡ್ರಗ್ಸ್ ವಿರುದ್ಧ ಅನಂತಮೂರ್ತಿ ಸಮರ

ಅಕ್ರಮ ಸಾರಾಯಿ, ಗಾಂಜಾ ಹಾವಳಿ ನಿಯಂತ್ರಿಸದಿದ್ದರೆ ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆ

ಶಿರಸಿ: ಸಿರ್ಸಿ-ಸಿದ್ದಾಪುರ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಹಾಗೂ ಗಾಂಜಾ ಸೇವನೆ ಮತ್ತು ಮಾರಾಟದ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇನ್ನೊಂದು ತಿಂಗಳೊಳಗೆ ಈ ಚಟುವಟಿಕೆಗಳನ್ನು ನಿಯಂತ್ರಿಸದಿದ್ದರೆ ಹಳ್ಳಿ ಹಳ್ಳಿಗಳಲ್ಲಿ ಜನರನ್ನು ಸಂಘಟಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಎಚ್ಚರಿಕೆ ನೀಡಿದರು.

ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಸಿರ್ಸಿ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸುಲಭವಾಗಿ ಸಿಗುತ್ತಿರುವ ಅಕ್ರಮ ಸಾರಾಯಿ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಅನೇಕರು ಕಿಡ್ನಿ ಮತ್ತು ಲಿವರ್ ಸಂಬಂಧಿತ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳ ಹಾವಳಿ ವಿದ್ಯಾರ್ಥಿಗಳು ಮತ್ತು ಯುವಜನತೆಯನ್ನು ಬಲಿ ಪಡೆಯುತ್ತಿದ್ದು, ದೇಶದ ಆಸ್ತಿಯಾಗಬೇಕಾದ ಯುವಕರು ದುಶ್ಚಟಗಳ ಕಡೆಗೆ ತಿರುಗುತ್ತಿದ್ದಾರೆ. ಸ್ಥಳೀಯ ಶಾಸಕರು ಮತ್ತು ಆಡಳಿತ ವ್ಯವಸ್ಥೆ ಈ ಬಗ್ಗೆ ಸಮರ್ಪಕ ಕ್ರಮ ಕೈಗೊಳ್ಳದಿರುವುದರಿಂದ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂದು ದೂರಿದರು.

ಇನ್ನೊಂದು ತಿಂಗಳೊಳಗೆ ಅಕ್ರಮ ಸಾರಾಯಿ, ಡ್ರಗ್ಸ್ ಮತ್ತು ಗಾಂಜಾ ಮಾರಾಟವನ್ನು ಹತೋಟಿಗೆ ತರದಿದ್ದರೆ ಹಳ್ಳಿ ಹಳ್ಳಿಗಳಿಂದ ಜನರು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.

ಸಿದ್ದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಎಂ.ಕೆ. ತಿಮ್ಮಪ್ಪ ಮಾತನಾಡಿ, ಅಕ್ರಮ ಸಾರಾಯಿ ಮಾರಾಟಗಾರರು ಕಾರು ಮತ್ತು ಖಾಸಗಿ ವಾಹನಗಳಲ್ಲಿ ಬಹಿರಂಗವಾಗಿ ಸಾರಾಯಿ ಸಾಗಾಟ ಹಾಗೂ ಮಾರಾಟ ನಡೆಸುತ್ತಿದ್ದಾರೆ. ಇದಕ್ಕೆ ತಕ್ಷಣ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಮಹಾಂತೇಶ ಹಾದಿಮನಿ ಮಾತನಾಡಿ, ವಿದ್ಯಾರ್ಥಿಗಳ ಕೈಗೆ ಚಾಕೊಲೇಟ್ ರೂಪದಲ್ಲಿಯೂ ಗಾಂಜಾ ತಲುಪುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರಲ್ಲದೆ, ಗಾಂಜಾ ಮಾರಾಟ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಸಾಂತ್ವನ ಮಹಿಳಾ ವೇದಿಕೆಯ ಜ್ಯೋತಿ ಭಟ್ ಮಾತನಾಡಿ, ಡ್ರಗ್ಸ್ ಹಾವಳಿಯಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಗಾಂಜಾ ಸೇವನೆ ಮಾಡುವವರ ಮೇಲೆ ಮಾತ್ರವಲ್ಲ, ಮಾರಾಟಗಾರರ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದರು.

ಸುರೇಶ್ ನಾಯ್ಕ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿರುವ ಅಕ್ರಮ ಸಾರಾಯಿ ದಂಧೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಗಾಂಜಾ ಎಲ್ಲಿಂದ ಬರುತ್ತದೆ ಎಂಬ ಮೂಲವನ್ನು ಪತ್ತೆಹಚ್ಚಿ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ವಿಶೇಷ ಆಹ್ವಾನಿತ ಸದಸ್ಯ ಮಾರುತಿ ನಾಯ್ಕ ಹೊಸೂರು ಮಾತನಾಡಿ, ಸಿದ್ದಾಪುರ ಭಾಗದಲ್ಲಿ ಅಕ್ರಮ ಸಾರಾಯಿ ಮಾರಾಟ ಮಿತಿ ಮೀರುತ್ತಿದ್ದು, ಅದನ್ನು ನಿಯಂತ್ರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗಣೇಶ ಕ್ಷತ್ರಿಯ ಮಾತನಾಡಿ, ಬನವಾಸಿ ಸೇರಿದಂತೆ ತಾಲೂಕಿನ ಹಲವು ಭಾಗಗಳಲ್ಲಿ ಗಾಂಜಾ ಮತ್ತು ಡ್ರಗ್ಸ್ ಸೇವನೆ ಹೆಚ್ಚುತ್ತಿದ್ದು, ನಿಯಂತ್ರಣವಾಗದಿದ್ದರೆ ಬೃಹತ್ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ವಿ.ಎಂ. ಭಟ್, ಅಣ್ಣಪ್ಪ ಹಸ್ಲರ್, ಶ್ರೀಕಾಂತ್ ಬಳ್ಳಾರಿ, ಹರೀಶ್ ಪಾಲೇಕರ್, ವಿನಾಯಕ ನಾಯ್ಕ, ಅನಸೂಯ ಹೆಗಡೆ, ಯುವರಾಜ ಗೌಡ ಸಂತೊಳ್ಳಿ, ಮಂಜುನಾಥ ನಾಯ್ಕ, ರಾಘವೇಂದ್ರ ನಾಯ್ಕ, ಶಂಕರ ಹೆಗಡೆ, ಕೃಷ್ಣಮೂರ್ತಿ ಐಸೂರು, ಗಣಪತಿ ಹೆಗಡೆ, ಶ್ರೀಪಾದ್ ಹೆಗಡೆ, ನಾರಾಯಣ ಹೆಗಡೆ, ಮಹೇಂದ್ರ ಭಟ್, ಜಿ.ಎಸ್. ಹೆಗಡೆ, ಮಂಜುನಾಥ ಪಾಟೀಲ್, ಪ್ರದೀಪ್ ಹೆಗಡೆ, ಉಪೇಂದ್ರ ಮೇಸ್ತ ಸೇರಿದಂತೆ ಹಲವರು ಭಾಗವಹಿಸಿದ್ದರು.

ಶಿರಸಿ ತಾಲೂಕು ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ ಸ್ವಾಗತಿಸಿದರು. ರಮೇಶ್ ಕುಪ್ಪಳ್ಳಿ ಮನವಿ ವಾಚಿಸಿದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share