Monday, September 7, 2026
Join WhatsApp Group
HomeHealthಮಂಡಿನೋವಿಗೆ ಗಿಡಮೂಲಿಕೆಗಳಲ್ಲಿದೆ ಪರಿಹಾರ

ಮಂಡಿನೋವಿಗೆ ಗಿಡಮೂಲಿಕೆಗಳಲ್ಲಿದೆ ಪರಿಹಾರ

ಮೊದಲೆಲ್ಲಾ50-60 ವರ್ಷ ದಾಟಿದ ನಂತರವೇ ಮಂಡಿನೋವು ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. 35-40 ವರ್ಷದಲ್ಲೇ ಮಂಡಿ ಚರಚರ ಎನ್ನುತ್ತಿದೆ. ಮೆಟ್ಟಿಲು ಏರಲು ಕಷ್ಟ, ನೆಲದ ಮೇಲೆ ಕುಳಿತುಕೊಳ್ಳಲು ಭಯ, ಬೆಳಗ್ಗೆ ಎದ್ದಾಗ ಮಂಡಿ ಬಿಗಿಯಾದ ಅನುಭವ ಇವೆಲ್ಲ ಇಂದಿನ ಮಧ್ಯವಯಸ್ಕರಲ್ಲಿಯೂ ಕೇಳಿಬರುವ ಸಾಮಾನ್ಯ ದೂರುಗಳು.

 ವೈದ್ಯಕೀಯ ವಿಜ್ಞಾನ ಇದಕ್ಕೆ ಹಲವು ಕಾರಣಗಳನ್ನು ಹೇಳುತ್ತದೆ. ದೈಹಿಕ ಚಟುವಟಿಕೆಗಳ ಕೊರತೆ, ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದು, ಅಧಿಕ ತೂಕ, ಪೌಷ್ಟಿಕಾಂಶದ ಕೊರತೆ, ಸಂಸ್ಕರಿತ ಆಹಾರಗಳ ಅತಿಯಾದ ಸೇವನೆ ಮತ್ತು ವಯೋಸಹಜ ಬದಲಾವಣೆಗಳು ಮಂಡಿನೋವಿನ ಪ್ರಮುಖ ಕಾರಣಗಳು.

ಮಂಡಿನೋವು ಬಂದ ತಕ್ಷಣ ಬಹುತೇಕರು ನೋವು ನಿವಾರಕ ಮಾತ್ರೆಗಳ ಮೊರೆ ಹೋಗುತ್ತಾರೆ. ಅವು ತಾತ್ಕಾಲಿಕವಾಗಿ ನೋವನ್ನು ಕಡಿಮೆ ಮಾಡಬಹುದು. ಆದರೆ ಮೂಲ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸುವುದಿಲ್ಲ.

ಇದಕ್ಕಾಗಿಯೇ ನಮ್ಮ ಹಿರಿಯರು ಪ್ರಕೃತಿಯತ್ತ ಮುಖ ಮಾಡುತ್ತಿದ್ದರು. ಮನೆಯ ಸುತ್ತಮುತ್ತ ಬೆಳೆಯುವ ಕೆಲವು ಔಷಧೀಯ ಸಸ್ಯಗಳನ್ನು ಬಳಸಿ ನೋವನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿದ್ದರು. ಇವುಗಳು ಅದ್ಭುತ ಔಷಧಿ ಎಂದು ಹೇಳಲಾಗದಿದ್ದರೂ, ಆಯುರ್ವೇದ ಮತ್ತು ಜನಪದ ವೈದ್ಯ ಪದ್ಧತಿಗಳಲ್ಲಿ ಶತಮಾನಗಳಿಂದ ಬಳಕೆಯಲ್ಲಿವೆ.

ಮಂಡಿನೋವಿನ ವಿಚಾರ ಬಂದಾಗ ಮೊದಲಿಗೆ ನೆನಪಾಗುವುದು ನಿರ್ಗುಂಡಿ (Vitex negundo). ಈ ಗಿಡದ ಎಲೆಗಳನ್ನು ಬಿಸಿ ಮಾಡಿ ಮಂಡಿಯ ಮೇಲೆ ಕಟ್ಟು ಹಾಕುವ ಪದ್ಧತಿ ಇಂದಿಗೂ ಇದೆ. ಆಯುರ್ವೇದದಲ್ಲಿ ಇದನ್ನು ಉರಿಯೂತ ಮತ್ತು ನೋವು ಕಡಿಮೆ ಮಾಡುವ ಸಸ್ಯವೆಂದು ಪರಿಗಣಿಸಲಾಗಿದೆ. ಎಲೆಗಳನ್ನು ಎಣ್ಣೆಯಲ್ಲಿ ಕುದಿಸಿ ಮಸಾಜ್ ಮಾಡಿದರೂ ಉಪಯುಕ್ತವೆಂದು ಹೇಳಲಾಗುತ್ತದೆ.

ಇನ್ನೊಂದು ಪ್ರಸಿದ್ಧ ಔಷಧೀಯ ಸಸ್ಯ ಹರಳೆ(Castor). ಇದರ ಎಲೆಗಳನ್ನು ಬಿಸಿ ಮಾಡಿ ಮಂಡಿಗೆ ಹೊದಿಸುವ ಪದ್ಧತಿ ಗ್ರಾಮೀಣ ಭಾಗಗಳಲ್ಲಿ ಕಂಡುಬರುತ್ತದೆ. ಹರಳೆಣ್ಣೆಯನ್ನು ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಮಂಡಿಗೆ ಹಚ್ಚಿದರೆ ರಕ್ತಸಂಚಾರ ಸುಧಾರಿಸಿ ಬಿಗಿತ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ.

ಅಡಿಗೆ ಮನೆಯಲ್ಲೇ ಇರುವ ಅರಿಶಿನ ಕೂಡ ಮಂಡಿನೋವಿಗೆ ಸಹಾಯಕವೆಂದು ಹಲವು ಅಧ್ಯಯನಗಳು ಸೂಚಿಸಿವೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಎಂಬ ಅಂಶ ಉರಿಯೂತ ಕಡಿಮೆ ಮಾಡುವ ಗುಣ ಹೊಂದಿದೆ. ಹಾಲಿನೊಂದಿಗೆ ಅರಿಶಿನ ಸೇವಿಸುವುದು ಅಥವಾ ಅರಿಶಿನ-ಎಳ್ಳೆಣ್ಣೆ ಮಿಶ್ರಣವನ್ನು ಹೊರಗಿನಿಂದ ಹಚ್ಚುವುದು ಜನಪ್ರಿಯ ಮನೆಮದ್ದು.

ಶುಂಠಿ ಕೂಡ ಇದೇ ಸಾಲಿಗೆ ಸೇರುತ್ತದೆ. ಶುಂಠಿಯಲ್ಲಿರುವ ಜಿಂಜರಾಲ್ ಎಂಬ ಅಂಶವು ಉರಿಯೂತ ಕಡಿಮೆ ಮಾಡಲು ನೆರವಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಶುಂಠಿ ಕಷಾಯ ಅಥವಾ ಆಹಾರದಲ್ಲಿ ನಿಯಮಿತ ಬಳಕೆ ಕೆಲವರಿಗೆ ಅನುಕೂಲ ನೀಡಬಹುದು.

ಅಲೋವೆರಾ (ಲೋಳೆಸರ) ಕೂಡ ಕೆಲವು ಮನೆಮದ್ದುಗಳಲ್ಲಿ ಸ್ಥಾನ ಪಡೆದಿದೆ. ಲೋಳೆಸರದ ತಿರುಳನ್ನು ಹೊರಗಿನಿಂದ ಹಚ್ಚುವುದು ಅಥವಾ ವೈದ್ಯರ ಸಲಹೆಯಂತೆ ಸೇವಿಸುವುದು ಕೆಲವರಿಗೆ ಉರಿಯೂತ ಕಡಿಮೆ ಮಾಡಲು ಸಹಕಾರಿಯಾಗಬಹುದು.

ಆದರೆ, ಮಂಡಿನೋವು ಕೇವಲ ಔಷಧಿ ಅಥವಾ ಗಿಡಮೂಲಿಕೆಗಳಿಂದಲೇ ನಿವಾರಣೆಯಾಗುವುದಿಲ್ಲ. ದೇಹದ ತೂಕ ನಿಯಂತ್ರಣ, ನಿಯಮಿತ ವ್ಯಾಯಾಮ, ಕಾಲ್ನಡಿಗೆ, ಸೂರ್ಯನ ಬೆಳಕಿನಲ್ಲಿ ಸ್ವಲ್ಪ ಸಮಯ ಕಳೆಯುವುದು, ಕ್ಯಾಲ್ಸಿಯಂ ಮತ್ತು ವಿಟಮಿನ್-ಡಿ ಯುಕ್ತ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವುದು ಇವೆಲ್ಲವೂ ಮುಖ್ಯ. ಮಂಡಿನೋವಿಗೆ ಕಾರಣ ಸಂಧಿವಾತ, ಲೀಗಮೆಂಟ್ ಹಾನಿ ಅಥವಾ ಮೂಳೆಯ ಸವೆತವಾಗಿದ್ದರೆ ವೈದ್ಯಕೀಯ ಪರೀಕ್ಷೆಯೂ ಅಗತ್ಯ.

ಹೀಗಾಗಿ, ಮಂಡಿನೋವು ಶುರುವಾದ ತಕ್ಷಣ ಮಾತ್ರೆಗಳತ್ತ ಓಡುವ ಬದಲು, ಪ್ರಕೃತಿಯ ಈ ಹಳೆಯ ಗೆಳೆಯರತ್ತಲೂ ಒಮ್ಮೆ ಕಣ್ಣು ಹಾಯಿಸುವುದು ತಪ್ಪೇನಲ್ಲ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share