Ad
Home Information ಸಹಕಾರಿ ಬ್ಯಾಂಕ್‌ಗಳಲ್ಲಿ ಕುರ್ಚಿ ಶಾಶ್ವತವಲ್ಲ!

ಸಹಕಾರಿ ಬ್ಯಾಂಕ್‌ಗಳಲ್ಲಿ ಕುರ್ಚಿ ಶಾಶ್ವತವಲ್ಲ!

0
6

ಆರ್‌ಬಿಐ ಹೊಸ ನಿಯಮದಿಂದ ದಶಕಗಳ ಅಧಿಕಾರಕ್ಕೆ ಬ್ರೇಕ್?

ಸಹಕಾರಿ ಬ್ಯಾಂಕ್‌ಗಳ ಆಡಳಿತ ಮಂಡಳಿಗಳೆಂದರೆ ಕೆಲವೊಮ್ಮೆ ಒಂದು ವಿಚಿತ್ರ ಪ್ರಪಂಚ. ಚುನಾವಣೆಗಳು ನಡೆಯುತ್ತವೆ, ಅವಧಿಗಳು ಬದಲಾಗುತ್ತವೆ. ಆದರೆ ಕೆಲ ಮುಖಗಳು ಮಾತ್ರ ವರ್ಷಾನುಗಟ್ಟಲೆ ಅದೇ ಕುರ್ಚಿಯಲ್ಲಿ ಕಾಣಿಸುತ್ತಿರುತ್ತವೆ. ಕೆಲವರು ರಾಜೀನಾಮೆ ನೀಡಿ ಮತ್ತೆ ಬರುತ್ತಾರೆ, ಮತ್ತೆ ಚುನಾಯಿತರಾಗುತ್ತಾರೆ, ಮತ್ತೆ ಅಧಿಕಾರದ ಕೇಂದ್ರದಲ್ಲೇ ಉಳಿಯುತ್ತಾರೆ.

ಹೀಗಾಗಿ, ಬ್ಯಾಂಕ್ ಬದಲಾಗಬಹುದು, ಆದರೆ ನಿರ್ದೇಶಕರು ಬದಲಾಗುವುದಿಲ್ಲ ಎಂಬ ಟೀಕೆಗಳು ಸಹಕಾರಿ ವಲಯದಲ್ಲಿ ಆಗಾಗ ಕೇಳಿಬರುತ್ತವೆ. ಇದೀಗ ಇಂತಹ ದೀರ್ಘಕಾಲದ ‘ಕುರ್ಚಿ ರಾಜಕಾರಣ’ಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಹತ್ವದ ನಿಯಮವನ್ನು ಜಾರಿಗೆ ತಂದಿದ್ದು, ಕರ್ನಾಟಕದ ಅನೇಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳ (ಡಿಸಿಸಿ ಬ್ಯಾಂಕ್) ನಿರ್ದೇಶಕರ ಭವಿಷ್ಯದ ಲೆಕ್ಕಾಚಾರವೇ ಬದಲಾಗುವ ಸಾಧ್ಯತೆ ಕಾಣಿಸಿದೆ.

ಆರ್‌ಬಿಐನ ಹೊಸ ನಿಯಮದ ಪ್ರಕಾರ, ನಿರ್ದೇಶಕರೊಬ್ಬರು ತಮ್ಮ ಅಧಿಕಾರಾವಧಿಯ ನಡುವೆ ರಾಜೀನಾಮೆ ನೀಡಿ, ಮೂರು ವರ್ಷಗಳು ಪೂರ್ಣಗೊಳ್ಳುವ ಮುನ್ನವೇ ಮತ್ತೆ ಆಡಳಿತ ಮಂಡಳಿಗೆ ಮರಳಿದರೆ, ಅವರ ಹಿಂದಿನ ಅಧಿಕಾರಾವಧಿಯನ್ನು ಹೊಸ ಅವಧಿಯೊಂದಿಗೆ ಸೇರಿಸಿ ಲೆಕ್ಕ ಹಾಕಲಾಗುತ್ತದೆ. ಅಂದರೆ, ರಾಜೀನಾಮೆ ಕೊಟ್ಟು ಕೆಲಕಾಲ ಹೊರಗಿದ್ದು ಮತ್ತೆ ಬರುವುದರಿಂದ ಅಧಿಕಾರಾವಧಿಯ ಲೆಕ್ಕ ಶೂನ್ಯದಿಂದ ಆರಂಭವಾಗುವುದಿಲ್ಲ.

ನಿರ್ದೇಶಕರೊಬ್ಬರ ಅಧಿಕಾರಾವಧಿಯ ‘ಗಡಿಯಾರ’ ಮತ್ತೆ ಮೊದಲಿನಿಂದ ಆರಂಭವಾಗಬೇಕಾದರೆ, ಅವರು ಕಡ್ಡಾಯವಾಗಿ ಮೂರು ವರ್ಷಗಳ ಕಾಲ ಬ್ಯಾಂಕಿನ ಆಡಳಿತ ಮಂಡಳಿಯಿಂದ ಸಂಪೂರ್ಣ ದೂರ ಉಳಿದಿರಬೇಕು. ಈ ಮೂರು ವರ್ಷದ ವಿರಾಮ ಪೂರ್ಣಗೊಂಡ ಬಳಿಕ ಮಾತ್ರ ಹೊಸ ಅವಧಿಯನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ.

ಈ ನಿಯಮ ನಗರ ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕುಗಳ ಜೊತೆಗೆ ಕೇಂದ್ರ ಸಹಕಾರಿ ಬ್ಯಾಂಕುಗಳಿಗೂ ಅನ್ವಯವಾಗಲಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಸಿಸಿ ಬ್ಯಾಂಕುಗಳಲ್ಲಿ ಹಲವು ನಿರ್ದೇಶಕರು ಸತತವಾಗಿ ಒಂದೇ ಸ್ಥಾನಕ್ಕೆ ಮರು ಆಯ್ಕೆಯಾಗುತ್ತಾ ಬ್ಯಾಂಕಿನ ಆಡಳಿತದ ಮೇಲೆ ದೀರ್ಘಕಾಲದ ಹಿಡಿತ ಸಾಧಿಸಿದ್ದಾರೆ. ಕೆಲವೆಡೆ ಇದೇ ವ್ಯಕ್ತಿಗಳು ವರ್ಷಗಳಿಂದ ಅಧಿಕಾರದ ಕೇಂದ್ರಬಿಂದುವಾಗಿರುವ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು.

ಹೊಸ ನಿಯಮದ ಪರಿಣಾಮವಾಗಿ, ನಿರಂತರವಾಗಿ ಅಧಿಕಾರದಲ್ಲಿರುವ ಅಥವಾ ಮಧ್ಯದಲ್ಲಿ ರಾಜೀನಾಮೆ ನೀಡಿ ಮತ್ತೆ ಮಂಡಳಿಗೆ ಮರಳಿರುವ ನಿರ್ದೇಶಕರ ಅಧಿಕಾರಾವಧಿಯನ್ನು ಮರುಪರಿಶೀಲಿಸುವ ಪರಿಸ್ಥಿತಿ ಎದುರಾಗಬಹುದು. ನಿಯಮದ ಮಿತಿಯನ್ನು ಮೀರಿ ಮುಂದುವರಿದಿರುವವರು ಹುದ್ದೆ ತ್ಯಜಿಸುವ ಅನಿವಾರ್ಯತೆಯೂ ಉಂಟಾಗುವ ಸಾಧ್ಯತೆ ಇದೆ.

ಸಹಕಾರಿ ಬ್ಯಾಂಕುಗಳ ಆಡಳಿತದಲ್ಲಿ ಪಾರದರ್ಶಕತೆ, ಹೊಸ ನಾಯಕತ್ವಕ್ಕೆ ಅವಕಾಶ ಹಾಗೂ ಅಧಿಕಾರದ ಕೇಂದ್ರೀಕರಣಕ್ಕೆ ತಡೆ ಒಡ್ಡುವ ಉದ್ದೇಶದಿಂದ ರೂಪುಗೊಂಡಿರುವ ಈ ನಿಯಮ, ಮುಂದಿನ ದಿನಗಳಲ್ಲಿ ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ಮಹತ್ವದ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ. ಕೆಲವರಿಗೆ ಇದು ಆಡಳಿತ ಸುಧಾರಣೆಯ ಹೆಜ್ಜೆಯಾದರೆ, ಇನ್ನೂ ಕೆಲವರಿಗೆ ತಮ್ಮ ಬಹುಕಾಲದ ಅಧಿಕಾರದ ಮೇಲೆ ಬಿದ್ದ ಎಚ್ಚರಿಕೆಯ ಗಂಟೆಯಾಗಿದೆ.

Previous articleಮಂಡಿನೋವಿಗೆ ಗಿಡಮೂಲಿಕೆಗಳಲ್ಲಿದೆ ಪರಿಹಾರ
Next articleಎಸ್‌ಐಆರ್ ಪ್ರಕ್ರಿಯೆ ಯಶಸ್ವಿಗೆ ಕಾರ್ಯಕರ್ತರು ಮುಂದಾಗಿ
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!