Ad
Home Information ಶ್ರೀಗಂಧ ನೆಡುತ್ತೀರಾ? ವಿಷಯಗಳು ಗಮನಕ್ಕಿರಲಿ

ಶ್ರೀಗಂಧ ನೆಡುತ್ತೀರಾ? ವಿಷಯಗಳು ಗಮನಕ್ಕಿರಲಿ

0
6

 ಮಳೆಗಾಲ ಬಂತೆಂದರೆ ಸಾಕು, ರೈತರ ಕಣ್ಣ ಮುಂದೆ ಹಸಿರು ಕನಸುಗಳು ಮೊಳಕೆಯೊಡೆಯುತ್ತವೆ. ಹೊಲದ ಬದಿಯಲ್ಲಿ ಒಂದೆರಡು ಶ್ರೀಗಂಧದ ಗಿಡಗಳನ್ನು ನೆಟ್ಟರೆ ಭವಿಷ್ಯದಲ್ಲಿ ಲಕ್ಷಾಂತರ ರೂಪಾಯಿ ಆದಾಯ ಸಿಗಬಹುದು ಎಂಬ ಲೆಕ್ಕಾಚಾರವೂ ಶುರುವಾಗುತ್ತದೆ.

 ಅದರಲ್ಲೂ ಕರ್ನಾಟಕ ಅರಣ್ಯ ಇಲಾಖೆ ವಿವಿಧ ಸಸಿಗಳೊಂದಿಗೆ ಶ್ರೀಗಂಧದ ಸಸಿಗಳನ್ನೂ ವಿತರಿಸುತ್ತಿರುವುದರಿಂದ ಹಲವರು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಶ್ರೀಗಂಧ ಎಂದಾಕ್ಷಣ ಜನರ ಮನಸ್ಸಿನಲ್ಲಿ ಒಂದು ಪ್ರಶ್ನೆ ಅನಿವಾರ್ಯವಾಗಿ ಮೂಡುತ್ತದೆ. ಇದನ್ನು ನೆಡಲು ಅರಣ್ಯ ಇಲಾಖೆಯ ಅನುಮತಿ ಬೇಕಾ? ಬೆಳೆದ ಮೇಲೆ ಕಡಿಯಲು ಮತ್ತೆ ಇಲಾಖೆಯ ಬಾಗಿಲು ತಟ್ಟಬೇಕಾ? ಶ್ರೀಗಂಧದ ಸುತ್ತಲೂ ವರ್ಷಗಳಿಂದ ಬೆಳೆದಿರುವ ಗೊಂದಲಗಳ ನಡುವೆ, ನಿಜವಾಗಿ ಕಾನೂನು ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.

ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಶ್ರೀಗಂಧದ ಮರಗಳ ಮೇಲೆ ಸರ್ಕಾರದ ಕಟ್ಟುನಿಟ್ಟಿನ ನಿಯಂತ್ರಣ ಇತ್ತು. ಶ್ರೀಗಂಧ ಬೆಳೆಸಲು ರೈತರು ಹಿಂದೇಟು ಹಾಕುತ್ತಿದ್ದರು. ಆದರೆ 2002ರಲ್ಲಿ ಕರ್ನಾಟಕ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದ ನಂತರ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಪ್ರಸ್ತುತ ಖಾಸಗಿ ಜಮೀನಿನ ಮಾಲೀಕರು ಅಥವಾ ಕೃಷಿಕರು ತಮ್ಮ ಜಮೀನಿನಲ್ಲಿ ಶ್ರೀಗಂಧವನ್ನು ನೆಡಬಹುದು. ಅದಕ್ಕಾಗಿ ಪ್ರತ್ಯೇಕವಾಗಿ ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ. ಕೆಲ ಸಂದರ್ಭದಲ್ಲಿ ಪಹಣಿಯಲ್ಲಿ ನಮೂದಿಸಬೇಕಾಗಬಹುದು. ಖಾಸಗಿ ಭೂಮಿಯಲ್ಲಿ ಬೆಳೆದ ಶ್ರೀಗಂಧದ ಮರದ ಮಾಲೀಕತ್ವವೂ ಭೂಮಿಯ ಮಾಲೀಕರಿಗೇ ಸೇರಿದೆ ಎಂದು ಕಾನೂನು ಸ್ಪಷ್ಟಪಡಿಸಿದೆ.

ಆದರೆ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಶ್ರೀಗಂಧ ನೆಡುವುದು ಸುಲಭವಾದರೂ, ಅದು ಬೆಳೆದು ದೊಡ್ಡ ಮರವಾದ ಬಳಿಕ ಅದರ ಕಟಾವು, ಸಾಗಣೆ ಮತ್ತು ಮಾರಾಟದ ವಿಷಯದಲ್ಲಿ ಕೆಲವು ನಿಯಮಗಳು ಇನ್ನೂ ಜಾರಿಯಲ್ಲಿವೆ. ಏಕೆಂದರೆ ಶ್ರೀಗಂಧವು ಅತ್ಯಂತ ಬೆಲೆಬಾಳುವ ಮರವಾಗಿದ್ದು, ಕಳ್ಳತನ ಮತ್ತು ಅಕ್ರಮ ಸಾಗಾಟದ ಅಪಾಯ ಹೆಚ್ಚಾಗಿದೆ. ಇದೇ ಕಾರಣಕ್ಕೆ ಸರ್ಕಾರವು ಸಂಪೂರ್ಣ ಸ್ವಾತಂತ್ರ್ಯ ನೀಡದೇ, ನಿಯಂತ್ರಿತ ವ್ಯವಸ್ಥೆಯನ್ನು ಮುಂದುವರಿಸಿದೆ.

ಹಾಗಾದರೆ ರೈತರು ಏನು ಮಾಡಬೇಕು? ತಮ್ಮ ಜಮೀನಿನಲ್ಲಿ ಬೆಳೆದ ಶ್ರೀಗಂಧದ ಮರ ಕಟಾವಿಗೆ ಯೋಗ್ಯವಾದಾಗ ಸಂಬಂಧಿತ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮರವನ್ನು ಕಡಿದು ಸಾಗಿಸುವುದು ಮತ್ತು ಮಾರಾಟ ಮಾಡುವ ಪ್ರಕ್ರಿಯೆ ನಿಯಮಾನುಸಾರ ನಡೆಯಬೇಕು. ಅರಣ್ಯ ಇಲಾಖೆಯ ದಾಖಲೆ ಮತ್ತು ಅನುಮತಿ ಇಲ್ಲದೆ ಶ್ರೀಗಂಧವನ್ನು ಸಾಗಿಸಲು ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ. ಕಾನೂನಿನ ಪ್ರಕಾರ ಶ್ರೀಗಂಧದ ಕಟಾವು, ಸಾಗಣೆ ಮತ್ತು ಮಾರಾಟವು ನಿಯಮಗಳಿಗೆ ಒಳಪಟ್ಟಿರುತ್ತದೆ.

ಇತ್ತೀಚಿನ ವರ್ಷಗಳಲ್ಲಿ ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ ನಿಯಮಗಳನ್ನು ಮತ್ತಷ್ಟು ಸರಳಗೊಳಿಸಲು ಮುಂದಾಗಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಶ್ರೀಗಂಧದ ಕೃಷಿ, ಕಟಾವು ಮತ್ತು ಸಾಗಣೆಗೆ ಸಂಬಂಧಿಸಿದ ನಿಯಮಗಳನ್ನು ಇನ್ನಷ್ಟು ಸರಳಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದರು. 2022ರಿಂದ ಬೆಳೆಗಾರರಿಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ ನೀಡುವ ನೀತಿಯೂ ಜಾರಿಯಲ್ಲಿದೆ ಎಂದು ವರದಿಗಳು ತಿಳಿಸಿವೆ.

ಆದರೆ ಇನ್ನೊಂದು ವಾಸ್ತವವನ್ನೂ ಮರೆಯುವಂತಿಲ್ಲ. ಶ್ರೀಗಂಧದ ಬೆಲೆ ಹೆಚ್ಚಿದಂತೆ ಕಳ್ಳರ ಕಣ್ಣು ಕೂಡ ಅದರ ಮೇಲೆಯೇ ಇರುತ್ತದೆ. ಕರ್ನಾಟಕದಲ್ಲಿ ಶ್ರೀಗಂಧ ಕಳ್ಳತನ ಪ್ರಕರಣಗಳು ಇನ್ನೂ ಸವಾಲಾಗಿ ಉಳಿದಿವೆ. ಇದೇ ಕಾರಣಕ್ಕೆ ರೈತರು ಶ್ರೀಗಂಧ ನೆಟ್ಟರೆ ಅದರ ಭದ್ರತೆಯ ಬಗ್ಗೆ ಮುಂಚಿತವಾಗಿಯೇ ಯೋಚಿಸಬೇಕಾಗುತ್ತದೆ. ಕಾವಲು ವ್ಯವಸ್ಥೆ, ಬೇಲಿ ಮತ್ತು ಸ್ಥಳೀಯ ನಿಗಾ ವ್ಯವಸ್ಥೆ ಇಲ್ಲದಿದ್ದರೆ ಹಲವು ವರ್ಷಗಳ ಶ್ರಮ ಕ್ಷಣಾರ್ಧದಲ್ಲಿ ಕಳ್ಳರ ಪಾಲಾಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಶ್ರೀಗಂಧ ಮರಗಳ ರಕ್ಷಣೆಗೆ ಹೊಸ ತಂತ್ರಜ್ಞಾನಗಳನ್ನು ಬಳಸುವ ಬಗ್ಗೆ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಕೂಡ ಆಸಕ್ತಿ ತೋರಿದೆ. 

ಶ್ರೀಗಂಧದ ಕೃಷಿಯಲ್ಲಿ ಮತ್ತೊಂದು ಪ್ರಮುಖ ಸಂಗತಿ ಎಂದರೆ ಇದು ಸಾಮಾನ್ಯ ಮರವಲ್ಲ. ಇದು ಅರೆ-ಪರಾವಲಂಬಿ (Semi-parasitic) ಸಸ್ಯ. ಬೆಳವಣಿಗೆಗೆ ಇತರೆ ಸಸ್ಯಗಳ ಬೇರುಗಳಿಂದ ಪೋಷಕಾಂಶಗಳನ್ನು ಪಡೆಯುತ್ತದೆ. ಹೀಗಾಗಿ ಶ್ರೀಗಂಧದ ಜೊತೆಗೆ ಸೂಕ್ತ ಹೋಸ್ಟ್ ಸಸ್ಯಗಳನ್ನು ಬೆಳೆಸಬೇಕಾಗುತ್ತದೆ. ಸರಿಯಾದ ನಿರ್ವಹಣೆ ಮಾಡಿದರೆ ಉತ್ತಮ ಗುಣಮಟ್ಟದ ತಿರುಳು ಹೊಂದಿದ ಮರ (Heartwood) ರೂಪುಗೊಳ್ಳುತ್ತದೆ. ಆಗಲೇ ಅದರ ನಿಜವಾದ ಆರ್ಥಿಕ ಮೌಲ್ಯ ಹೊರಹೊಮ್ಮುತ್ತದೆ.

ಒಟ್ಟಿನಲ್ಲಿ, ಶ್ರೀಗಂಧ ನೆಡಲು ಇಂದು ಸರ್ಕಾರದ ವಿಶೇಷ ಅನುಮತಿ ಬೇಕಿಲ್ಲ. ಆದರೆ “ನನ್ನ ಜಮೀನಿನ ಮರ, ನಾನು ಬೇಕಾದಾಗ ಕಡೀತೀನಿ” ಎಂಬ ಸ್ವಾತಂತ್ರ್ಯವೂ ಇಲ್ಲ. ಕಟಾವು, ಸಾಗಣೆ ಮತ್ತು ಮಾರಾಟದ ವೇಳೆ ಅರಣ್ಯ ಇಲಾಖೆಯ ನಿಯಮಗಳನ್ನು ಪಾಲಿಸಲೇಬೇಕು. ಹೀಗಾಗಿ ಶ್ರೀಗಂಧವನ್ನು ಕೇವಲ ಮರವಾಗಿ ನೋಡದೇ, ದೀರ್ಘಾವಧಿಯ ಹೂಡಿಕೆ ಮತ್ತು ಜವಾಬ್ದಾರಿಯುತ ಆಸ್ತಿಯಂತೆ ಪರಿಗಣಿಸಬಹುದು.

ಸರಿಯಾದ ಮಾಹಿತಿ, ಸೂಕ್ತ ಭದ್ರತೆ ಮತ್ತು ಕಾನೂನು ಪಾಲನೆಯೊಂದಿಗೆ ಬೆಳೆದರೆ, ಮನೆಯ ಮುಂಭಾಗದ ಪುಟ್ಟ ಶ್ರೀಗಂಧದ ಗಿಡವೇ ಮುಂದೊಂದು ದಿನ ರೈತನ ಆರ್ಥಿಕ ಭದ್ರತೆಯ ಸಂಕೇತವಾಗಬಹುದು.

Previous articleಮಕ್ಕಳ ಕೈಲಿ ಮೊಬೈಲ್;‌ ಅವರೇನು ನೋಡುತ್ತಾರೆ ಕಣ್ಣಿಡಿ!
Next article‘ಹಲೋ’ ಎಂದ ತಕ್ಷಣ ಕಾಲ್ ಕಟ್ ಆಯ್ತಾ? ಜಾಗ್ರತೆ…!
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!