ಇತ್ತೀಚಿನ ದಿನಗಳಲ್ಲಿ “ತಲೆಬಿಸಿ ಆಗಿದೆ” ಎನ್ನುವುದು ಒಂದು ರೋಗದ ಹೆಸರೇ ಆಗಿಬಿಟ್ಟಿದೆ. ಕೆಲಸದ ಒತ್ತಡ, ಟ್ರಾಫಿಕ್ ಜಾಮ್, ಮೊಬೈಲ್‌ನಿಂದ ಬರುವ ನಿಲ್ಲದ ನೋಟಿಫಿಕೇಶನ್‌ಗಳು, ಮಕ್ಕಳ ಪರೀಕ್ಷೆ, ಮನೆಯ ಖರ್ಚು, ಕಚೇರಿಯ ಡೆಡ್‌ಲೈನ್‌ಗಳು… ಹೀಗೆ ಬೆಳಗ್ಗೆಯಿಂದ ರಾತ್ರಿ ತನಕ ಮನಸ್ಸಿಗೆ ವಿಶ್ರಾಂತಿ ಸಿಗದ ಪರಿಸ್ಥಿತಿ.
ಇದರ ಜೊತೆಗೆ ಬೇಸಿಗೆಯ ಉರಿ, ನಿದ್ದೆಯ ಕೊರತೆ, ಅನಿಯಮಿತ ಆಹಾರ ಪದ್ಧತಿ ಮತ್ತು ದೇಹದ ಒಳಗಿನ ಉಷ್ಣತೆಯೂ ಸೇರಿಕೊಂಡರೆ ತಲೆ ಸಿಡಿಯುವಂತಾಗುತ್ತದೆ. ಆಗ ಹಲವರು ತಕ್ಷಣ ನವರತ್ನ, ಅಮೃತಾಂಜನ ಅಥವಾ ಇತರೆ ಕೂಲಿಂಗ್ ಆಯಿಲ್‌ಗಳ ಮೊರೆ ಹೋಗುತ್ತಾರೆ. ಅವು ಕ್ಷಣಿಕ ತಂಪು ನೀಡುತ್ತವೆ. ಆದರೆ, ನಮ್ಮ ಹಿರಿಯರು ಇಂತಹ ತಲೆಬಿಸಿಯನ್ನು ಕಡಿಮೆ ಮಾಡಲು ಮನೆಯಲ್ಲೇ ಸಿಗುವ ಕೆಲವು ಸರಳ ನೈಸರ್ಗಿಕ ವಿಧಾನಗಳನ್ನು ಬಳಸುತ್ತಿದ್ದರು ಎಂಬುದನ್ನು ನೆಪಿಸಿಕೊಳ್ಳಲೇಬೇಕು.
ತಲೆ ಬಿಸಿಯಾದಾಗ ಮೊದಲು ನೆನಪಾಗಬೇಕಾದದ್ದು ಅಲೋವೆರಾ (ಲೋಳೆಸರ). ತಾಜಾ ಲೋಳೆಸರದ ತಿರುಳನ್ನು ತೆಗೆದು ನೆತ್ತಿ ಮತ್ತು ತಲೆಯ ಮೇಲ್ಭಾಗಕ್ಕೆ ಸವರಿದರೆ ತಂಪಿನ ಅನುಭವ ಸಿಗುತ್ತದೆ. ದೇಹದ ಉಷ್ಣತೆ ಹೆಚ್ಚಾದ ಸಂದರ್ಭಗಳಲ್ಲಿ ಇದು ಸಾಕಷ್ಟು ನೆಮ್ಮದಿ ನೀಡುತ್ತದೆ.
ಇನ್ನೊಂದು ಸರಳ ಪರಿಹಾರ ಪುದೀನಾ ಎಲೆ. ಪುದೀನಾ ಎಲೆಗಳನ್ನು ಅರೆದು ಸ್ವಲ್ಪ ನೀರು ಸೇರಿಸಿ ನೆತ್ತಿಗೆ ಹಚ್ಚಿದರೆ ಅದರಲ್ಲಿರುವ ಮೆಂಥಾಲ್ ಅಂಶ ತಂಪಿನ ಅನುಭವ ನೀಡುತ್ತದೆ. ಪುದೀನಾ ಚಹಾ ಕುಡಿಯುವುದೂ ದೇಹವನ್ನು ಒಳಗಿನಿಂದ ಹಿತವಾಗಿಡಲು ನೆರವಾಗುತ್ತದೆ.
ತುಳಸಿ ಎಲೆಗಳೂ ಈ ವಿಷಯದಲ್ಲಿ ಸಹಕಾರಿ. ತುಳಸಿ ಎಲೆಗಳನ್ನು ಅರೆದು ನೆತ್ತಿಗೆ ಹಚ್ಚುವುದು ಅಥವಾ ತುಳಸಿ ಕಷಾಯ ಕುಡಿಯುವುದು ಮನಸ್ಸಿಗೆ ಹಿತ ನೀಡುತ್ತದೆ. ತುಳಸಿಯ ಸುವಾಸನೆಯೇ ಒಂದು ರೀತಿಯ ಆರಾಮ ನೀಡುತ್ತದೆ.
ಹಳ್ಳಿಗಳಲ್ಲಿ ಕೆಲವರು ಚಂದನದ ಲೇಪನ ಬಳಸುತ್ತಿದ್ದರು. ಚಂದನವನ್ನು ತೇಯ್ದು ತೆಗೆದ ಲೇಪನವನ್ನು ಹಣೆಗೆ ಹಚ್ಚಿದರೆ ತಂಪು ಸಿಗುತ್ತದೆ. ಬೇಸಿಗೆಯಲ್ಲಿ ಇದು ಇನ್ನೂ ಹೆಚ್ಚು ಆರಾಮದಾಯಕ. ಚಂದನದ ಪರಿಮಳವೂ ಮನಸ್ಸಿನ ಉದ್ವಿಗ್ನತೆಯನ್ನು ಕಡಿಮೆ ಮಾಡುತ್ತದೆ.
ಗುಲಾಬಿ ಹೂವಿನ ದಳಗಳು ಕೂಡ ತಲೆಬಿಸಿಗೆ ಒಳ್ಳೆಯ ಮನೆಮದ್ದು. ಗುಲಾಬಿ ನೀರಿನಲ್ಲಿ ಬಟ್ಟೆಯನ್ನು ನೆನೆಸಿ ನೆತ್ತಿಯ ಮೇಲೆ ಇಟ್ಟರೆ ತಂಪಿನ ಅನುಭವ ಸಿಗುತ್ತದೆ. ಅದಕ್ಕೇ ಅನೇಕ ಆಯುರ್ವೇದ ಮತ್ತು ನೈಸರ್ಗಿಕ ಚಿಕಿತ್ಸಾ ವಿಧಾನಗಳಲ್ಲಿ ಗುಲಾಬಿ ನೀರಿಗೆ ವಿಶೇಷ ಸ್ಥಾನವಿದೆ.
ಬ್ರಾಹ್ಮಿ ಅಥವಾ ಒಂದೆಲಗವನ್ನು ಆಯುರ್ವೇದದಲ್ಲಿ ಮೆದುಳಿನ ಆರೋಗ್ಯಕ್ಕೆ ಬಳಸಲಾಗುತ್ತದೆ. ಬ್ರಾಹ್ಮಿ ಎಲೆಗಳ ರಸ ಅಥವಾ ಬ್ರಾಹ್ಮಿ ತೈಲವನ್ನು ತಲೆಗೆ ಹಚ್ಚುವುದು ಮನಸ್ಸನ್ನು ಶಾಂತಗೊಳಿಸಲು ನೆರವಾಗುತ್ತದೆ ಎಂದು ಪರಂಪರೆಯ ವೈದ್ಯ ಪದ್ಧತಿಗಳು ಹೇಳುತ್ತವೆ.
ಇವೆಲ್ಲಕ್ಕಿಂತ ಮುಖ್ಯವಾದದ್ದು ನೀರು. ಹಲವೊಮ್ಮೆ ತಲೆಬಿಸಿ ಎನ್ನುವುದು ನಿಜವಾಗಿ ದೇಹದ ನಿರ್ಜಲೀಕರಣದ ಲಕ್ಷಣವಾಗಿರಬಹುದು. ದಿನವಿಡೀ ಸಾಕಷ್ಟು ನೀರು ಕುಡಿಯದೇ ಇದ್ದರೆ ತಲೆಭಾರ, ತಲೆನೋವು, ಬಿಸಿ ಅನುಭವವಾಗಬಹುದು. ಹೀಗಾಗಿ ಮೊದಲು ಒಂದು ಲೋಟ ತಣ್ಣನೆಯ ನೀರು ಕುಡಿದು ನೋಡಿ. ಕೆಲವೊಮ್ಮೆ ಅದೇ ದೊಡ್ಡ ಔಷಧಿಯಾಗಬಹುದು!
ಅದೇ ರೀತಿ ಎಳನೀರು, ಮಜ್ಜಿಗೆ, ನಿಂಬೆ ಪಾನಕ ಮುಂತಾದ ನೈಸರ್ಗಿಕ ಪಾನೀಯಗಳು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ನೆರವಾಗುತ್ತವೆ. ನಮ್ಮ ಹಿರಿಯರು ಬೇಸಿಗೆಯಲ್ಲಿ ಇವುಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದದ್ದು ಸುಮ್ಮನೇ ಅಲ್ಲ!
ಆದರೆ ಒಂದು ವಿಷಯ ನೆನಪಿರಲಿ. ತಲೆಬಿಸಿ ಎನ್ನುವುದು ಯಾವಾಗಲೂ ದೇಹದ ಉಷ್ಣತೆಯ ಸಮಸ್ಯೆಯೇ ಆಗಿರಬೇಕೆಂದಿಲ್ಲ. ಕೆಲವೊಮ್ಮೆ ಅದು ಒತ್ತಡ, ಆತಂಕ, ರಕ್ತದೊತ್ತಡ ಅಥವಾ ಇತರ ಆರೋಗ್ಯ ಸಮಸ್ಯೆಗಳ ಸೂಚನೆಯೂ ಆಗಿರಬಹುದು. ಪದೇಪದೇ ತಲೆಬಿಸಿ, ತಲೆನೋವು ಅಥವಾ ಅಸ್ವಸ್ಥತೆ ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ.
ಕೊನೆಗೆ, ತಲೆಬಿಸಿ ನಿವಾರಣೆಗೆ ಅತ್ಯುತ್ತಮ ಔಷಧಿ ಯಾವುದು ಗೊತ್ತೇ? ದಿನದಲ್ಲಿ ಒಂದಿಷ್ಟು ಸಮಯವಾದರೂ ಮೊಬೈಲ್‌ನ್ನು ಪಕ್ಕಕ್ಕಿಟ್ಟು, ಒಂದು ಮರದ ನೆರಳಲ್ಲಿ ಕುಳಿತು, ಆಳವಾಗಿ ಉಸಿರಾಡುವುದು! ಏಕೆಂದರೆ ಇಂದಿನ ಕಾಲದಲ್ಲಿ ದೇಹಕ್ಕಿಂತ ಮೊದಲು ಬಿಸಿಯಾಗುವುದು ತಲೆಯಲ್ಲ, ಮನಸ್ಸು. ಮನಸ್ಸಿಗೆ ತಂಪು ಸಿಕ್ಕರೆ, ತಲೆಗೂ ತಂಪು ಸಿಕ್ಕಂತೆಯೇ!