Ad
Home Information Special ಈ ಐಎಎಸ್ ಅಧಿಕಾರಿ ಪಡೆಯುತ್ತಿದ್ದ ಸಂಬಳ 1 ರೂ!

ಈ ಐಎಎಸ್ ಅಧಿಕಾರಿ ಪಡೆಯುತ್ತಿದ್ದ ಸಂಬಳ 1 ರೂ!

0
6

ಐಎಎಸ್‌ನಂತಹ ಉನ್ನತ ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳು ಆಗಾಗ ವಿವಿಧ ವಿಷಯಗಳಿಗೆ ಸುದ್ದಿಯಾಗಿಬಿಡುತ್ತಾರೆ. ಅದು ಸಮಾಜಮುಖಿ ಕಾರ್ಯ, ಕರ್ತವ್ಯದಲ್ಲಿನ ನಿಷ್ಠೆ ಅಥವಾ ಅಕ್ರಮ ಆಸ್ತಿ ಗಳಿಕೆಯಂತಹ ಕುಖ್ಯಾತಿ, ವಿವಾದಗಳವರೆಗೂ ಸಾಗಿಬಿಡಬಹುದು. ಯಾಕೆಂದರೆ, ಐಎಎಸ್ ಎನ್ನುವುದು ಸಾಮಾನ್ಯವಾದ ಹುದ್ದೆಯಲ್ಲವಲ್ಲ!

ಆದರೆ, ಇವೆಲ್ಲವುಗಳನ್ನು ಬದಿಗೊತ್ತಿ, ಸೇವೆಗೆ ಸೇರಿದಾಗಿನಿಂದಲೂ ಖ್ಯಾತಿ ಮತ್ತು ವಿವಾದ ಎರಡರಲ್ಲಿಯೂ ಚರ್ಚೆಗೆ ಗ್ರಾಸವಾದ ಐಎಎಸ್ ಅಧಿಕಾರಿಯೊಬ್ಬರಿದ್ದರೆ, ಅವರು ಅಮಿತ್ ಕಟಾರಿಯಾ! ಸಂಪತ್ತು, ಸೇವೆ, ವಿವಾದಗಳಿಂದಲೂ ಗುರುತಿಸಲ್ಪಟ್ಟ ಐಎಎಸ್ ಅಮಿತ್ ಕಟಾರಿಯಾ ಭಾರತದ ಅತ್ಯಂತ ಗಮನಾರ್ಹ ಅಧಿಕಾರಿಗಳಲ್ಲಿ ಒಬ್ಬರು.

ದೇಶದ ಅತ್ಯಂತ ಶ್ರೀಮಂತ ಐಎಎಸ್ ಅಧಿಕಾರಿಯಾಗಿರುವ ಕಟಾರಿಯಾ ಸುಮಾರು 8.90 ಕೋಟಿ ರೂ.ಗಳ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಕೆಲ ವರ್ಷಗಳ ಹಿಂದೆ ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿದ್ದವು.

ಹಾಗೆಂದು, ಈ ಆಸ್ತಿಯೇನೂ ಅಕ್ರಮ ಸಂಪಾದನೆಯಲ್ಲ. ಅಮಿತ್ ಕಟಾರಿಯಾ ಛತ್ತೀಸ್‌ಗಢ ಕೇಡರ್‌ನ 2004ನೇ ಬ್ಯಾಚ್‌ನ ಹಿರಿಯ ಐಎಎಸ್ ಅಧಿಕಾರಿ. ಹರಿಯಾಣದ ಗುರುಗ್ರಾಮದಲ್ಲಿ ಹುಟ್ಟಿ ಬೆಳೆದ ಅವರು, ಆರ್.ಕೆ. ಪುರಂನ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.

ಕಟಾರಿಯಾ 2003ರಲ್ಲಿ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 18ನೇ ಸ್ಥಾನ ಪಡೆದಾಗ ಮೊದಲ ಬಾರಿಗೆ ಪ್ರಾಮುಖ್ಯತೆ ಪಡೆದರು. ಅವರು ಜಿಲ್ಲಾಧಿಕಾರಿಯಾಗಿ ಮತ್ತು ನಂತರ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇರಿದಂತೆ ವಿವಿಧ ಪ್ರಮುಖ ಆಡಳಿತಾತ್ಮಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಅವರ ನಾಯಕತ್ವ ಮತ್ತು ದೃಷ್ಟಿಕೋನ ಅಧಿಕಾರಶಾಹಿಯಲ್ಲಿ ವ್ಯಾಪಕ ಮೆಚ್ಚುಗೆಯನ್ನು ಗಳಿಸಿತು.

ಇಷ್ಟೆಲ್ಲ ಪೀಠಿಕೆ ಹೇಳಿದ್ದೇಕೆಂದರೆ, ಕಟಾರಿಯಾ ಅವರ ವೃತ್ತಿಜೀವನದ ಅತ್ಯಂತ ವಿಶಿಷ್ಟ ಅಂಶದ ಬಗ್ಗೆ ತಿಳಿಸಲು. ಅವರ ಸೇವೆಯ ಆರಂಭದ ಹಂತದಲ್ಲಿ ಕೇವಲ 1 ರೂ.ಗಳ ಸಂಬಳವನ್ನು ಸಾಂಕೇತಿಕವಾಗಿ ತೆಗೆದುಕೊಳ್ಳುವ ನಿರ್ಧಾರ ಮಾಡಿದರು. ಲಕ್ಷದ ಲೆಕ್ಕಾಚಾರದಲ್ಲಿ ಸಂಬಳ ಪಡೆಯುವ ಐಎಎಸ್ ಹಂತದ ಹುದ್ದೆಯಲ್ಲಿದ್ದು ತಿಂಗಳಿಗೆ ಕೇವಲ 1 ರೂ ಸಂಬಳ ಪಡೆಯುತ್ತಾರೆಂಬ ವಿಷಯ ತಿಳಿದು ಇಡೀ ದೇಶವೇ ಹುಬ್ಬೇರಿಸಿತು.

ಮತ್ತೆ, ಕೇವಲ 1 ರೂ ಸಂಬಳ ಪಡೆದ ಅಧಿಕಾರಿ ದೇಶದ ಅತ್ಯಂತ ಶ್ರೀಮಂತ ಅಧಿಕಾರಿ ಎಂದರೆ ಹೇಗೆ ಸಾಧ್ಯ ಎಂದಿರಾ? ಉನ್ನತ ಹುದ್ದೆಗಳನ್ನು ಹೊಂದಿದ್ದರೂ, ಕಟಾರಿಯಾ ಸಂಪತ್ತು ಅವರ ಐಎಎಸ್ ಹುದ್ದೆಯಿಂದ ಗಳಿಸಿದ್ದಲ್ಲ. ಐಎಎಸ್ ಅಧಿಕಾರಿ ಅಮಿತ್ ಕಟಾರಿಯಾ ಕುಟುಂಬ ದಶಕಗಳಿಂದಲೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಶೇಷವಾಗಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಕಟಾರಿಯಾ ಕುಟುಂಬ ಗಣನೀಯ ಲಾಭವನ್ನು ಗಳಿಸುತ್ತದೆ ಎಂದು ಹೇಳಲಾಗುತ್ತದೆ. ಕುಟಂಬವರ್ಗದ ಆಸ್ತಿಯೇ ಕಟಾರಿಯಾ ಅವರನ್ನು ದೇಶದ ಶ್ರೀಮಂತ ಐಎಎಸ್ ಅಧಿಕಾರಿ ಎಂಬ ಹೆಸರು ತಂದುಕೊಟ್ಟಿದೆಯಷ್ಟೇ.

ಅಮಿತ್ ಕಟಾರಿಯಾ 2015ರಲ್ಲಿ ಛತ್ತೀಸ್‌ಗಢದ ಬಸ್ತಾರ್ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಮೊದಲ ಬಾರಿಗೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಗಮನ ಸೆಳೆದರು. ಕಾರಣವಿಷ್ಟೇ. ಈ ಸೇವಾ ಅವಧಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಈ ಪ್ರದೇಶಕ್ಕೆ ಭೇಟಿ ನೀಡಿದ್ದರು. ಭೇಟಿಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಟಾರಿಯಾ ಕಡುಗಪ್ಪು ಕನ್ನಡಕ ಧರಿಸಿ ಶುಭಾಶಯ ಕೋರಿದ್ದು! ಇದು ಸರ್ಕಾರದ ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ದೇಶಾದ್ಯಂತ ಚರ್ಚೆಗೆ ಕಾರಣವಾಯಿತು.

 ಕೆಲವರು ಕಟಾರಿಯಾ ಅವರ ದಿರಿಸನ್ನು ಟೀಕಿಸಿದರೆ, ಹಲವರು ಅವರ ವೈಯಕ್ತಿಕ ವ್ಯಕ್ತಿತ್ವ, ಶೈಲಿಯನ್ನು ಶ್ಲಾಘಿಸಿದರು. ಇನ್ನೂ ಕೆಲವರು ದುಡ್ಡಿನ ಅಮಲು ಹೆಚ್ಚಾಗಿದೆ ಎಂದು ಕೊಂಕು ನುಡಿದರು. ಈ ಘಟನೆಯು ಕಟಾರಿಯಾ ಅವರಿಗೆ ರಾಜ್ಯ ಸರ್ಕಾರದಿಂದ ಶೋಕಾಸ್ ನೋಟಿಸ್ ಪಡೆಯಲು ಕಾರಣವಾಯಿತು.

ಆಗ ರಮಣ್ ಸಿಂಗ್ ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿದ್ದರು. ಇತ್ತೀಚೆಗೆ ಕೇಂದ್ರ ಡೆಪ್ಯುಟೇಶನ್‌ನಲ್ಲಿ 7 ವರ್ಷಗಳ ಅಧಿಕಾರಾವಧಿಯ ನಂತರ ಇದೀಗ ಪುನಃ ಸೇವೆಗೆ ಮರಳಿದ್ದಾರೆ.

Previous articleತಲೆಬಿಸಿಯೇ, ಮನೆಯಲ್ಲೇ ಇದೆ ತಂಪಿನ ಮದ್ದು!
Next articleಶೇ.300 ಲಾಭದ ಆಸೆಗೆ 30 ಲಕ್ಷ ಕಳೆದುಕೊಂಡ ರೈತ!
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!