Friday, July 24, 2026
Join WhatsApp Group
HomeLocal Newsಎಸ್‌ಐಆರ್‌ಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ; ಡಿಸಿ

ಎಸ್‌ಐಆರ್‌ಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ; ಡಿಸಿ

ನಿಗದಿತ ಅವಧಿಗೂ ಮುನ್ನ ಪ್ರಕ್ರಿಯೆ ಪೂರ್ಣಗೊಳಿಸಲು ಯತ್ನ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ಕೆ ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳಿಂದ ಉತ್ತಮ ಸಹಕಾರ ದೊರೆಯುತ್ತಿದ್ದು, ನಿಗದಿತ ಅವಧಿಗೂ ಮುನ್ನವೇ ಪ್ರಕ್ರಿಯೆ ಪೂರ್ಣಗೊಳಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸರ್ಕಾರಿ ನೌಕರರಿಗಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ ಶೇ.100ರಷ್ಟು ಎನ್ಯೂಮರೇಷನ್ ಫಾರಂಗಳನ್ನು ವಿತರಿಸಲಾಗಿದ್ದು, ಫಾರಂಗಳ ಡಿಜಿಟಲೀಕರಣ ಕಾರ್ಯದಲ್ಲಿ ಶೇ.64ರಷ್ಟು ಪ್ರಗತಿ ಸಾಧಿಸಲಾಗಿದೆ. ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಒಂದೇ ಕುಟುಂಬದ ಮತದಾರರು ಬೇರೆ ಬೇರೆ ಮತಗಟ್ಟೆಗಳಲ್ಲಿ ಹಂಚಿಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಮಾತನಾಡಿ, ಇತ್ತೀಚೆಗೆ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯುವುದು ಅಗತ್ಯ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮಾತನಾಡಿ, ಎಸ್‌ಐಆರ್ ಹೆಸರಿನಲ್ಲಿ ಓಟಿಪಿ ಅಥವಾ ಬ್ಯಾಂಕ್ ಮಾಹಿತಿ ಕೇಳುವ ಸೈಬರ್ ವಂಚಕರ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಪೊಲೀಸ್ ಇಲಾಖೆ ಈ ಕುರಿತು ನಿರಂತರ ಜಾಗೃತಿ ಮೂಡಿಸುತ್ತಿದ್ದು, ಯಾವುದೇ ಕಾರಣಕ್ಕೂ ವೈಯಕ್ತಿಕ ಬ್ಯಾಂಕ್ ಮಾಹಿತಿ ಅಥವಾ ಓಟಿಪಿ ಹಂಚಿಕೊಳ್ಳಬಾರದು ಎಂದು ಹೇಳಿದರು.

ಆರೋಗ್ಯ ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಇಸಿಜಿ, ಎಕ್ಸ್‌ರೇ, ಕಣ್ಣು, ದಂತ, ಚರ್ಮ, ಮೂಳೆ, ಕಿವಿ-ಮೂಗು-ಗಂಟಲು ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು. ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share