ಅನಂತಮೂರ್ತಿ ಹೆಗಡೆ ಹೇಳಿಕೆಗೆ ಭೀಮಣ್ಣ ನಾಯ್ಕ ಅಭಿಮಾನಿಗಳ ತಿರುಗೇಟು
ಶಿರಸಿ: ಅನಂತಮೂರ್ತಿ ಹೆಗಡೆಯವರೇ, ನೀವು ಬಿಜೆಪಿಯವರು ಹೌದೋ ಅಲ್ಲವೋ ಗೊತ್ತಿಲ್ಲ. ಪಕ್ಷಕ್ಕೆ ದುಡ್ಡು ಸುರಿದು ರೈತ ಮೋರ್ಚಾ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿರಿ. ಸಂತೋಷ. ನೀವೂ ಕೆಲಸ ಮಾಡಿ. ನಿಮಗೂ ಅವಕಾಶವಿದೆ. ಆದರೆ, ನೀವು ಪ್ರಚಾರಕ್ಕಾಗಿ ಭೀಮಣ್ಣ ಅವರ ಬಗ್ಗೆ ನಾಲಗೆ ಹರಿಬಿಟ್ಟಿದ್ದೀರಿ. ನಿಮ್ಮನ್ನು ಅನಾಥಮೂರ್ತಿ ಎನ್ನಬೇಕೋ, ಪ್ರಚಾರಮೂರ್ತಿ ಎನ್ನಬೇಕೋ ತಿಳಿಯದಾಗಿದೆ ಎಂದು ಭೀಮಣ್ಣ ನಾಯ್ಕ ಅಭಿಮಾನಿ ಬಳಗದ ಪ್ರಮುಖ ಮಧುಕೇಶ್ವರ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಭೀಮಣ್ಣ ನಾಯ್ಕ ಅವರ ವಿರುದ್ಧ ಆಧಾರರಹಿತ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಅಪಪ್ರಚಾರ ನಡೆಸುತ್ತಿದ್ದಾರೆ. ಅನಂತಮೂರ್ತಿ ಹೆಗಡೆಯವರಿಗೆ ಭೀಮಣ್ಣ ನಾಯ್ಕ ಅವರ ಸಂಪೂರ್ಣ ಪರಿಚಯ ಇದ್ದಂತಿಲ್ಲ. ನಿಷ್ಠೆಯಿಂದ ತಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದಾರೆ.
ನೀವು ಕೇವಲ ನಿಮ್ಮ ಸ್ವಾರ್ಥಕ್ಕಾಗಿ ನೀವು ಚಾರಿಟೇಬಲ್ ಟ್ರಸ್ಟ್ ಇತ್ಯಾದಿಗಳನ್ನು ಮಾಡಿಕೊಂಡಿರಬಹುದು. ಇತ್ತೀಚೆಗೆ ಅದೇನೋ ಹೋರಾಟ ಸಮಿತಿ ಎಂದು ಮಾಡಿಕೊಂಡಿರಿ. ನಿಮಗೆ ಬೇಕಾಗಿರುವುದು ಕೇವಲ ಪ್ರಚಾರವಷ್ಟೇ. ಸಾರ್ವಜನಿಕ ಬದುಕಿನಲ್ಲಿ ಇಂತಹ ನಾಲಿಗೆ ಹರಿಬಿಟ್ಟ ಹೇಳಿಕೆಗಳನ್ನು ಮುಂದುವರಿಸಿದರೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಶಾಸಕ ಭೀಮಣ್ಣ ನಾಯ್ಕ ಅವರು ಕ್ಷೇತ್ರದಲ್ಲಿ ಜನಪರ ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ವಿಶ್ವಾಸ ಗಳಿಸಿರುವ ಜನನಾಯಕ ಹಾಗೂ ಕೃಷಿಕರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಅವರ ಅಭಿವೃದ್ಧಿ ಕಾರ್ಯಗಳು ಮೆಚ್ಚುಗೆ ಪಡೆಯುತ್ತಿರುವ ಸಂದರ್ಭದಲ್ಲಿ, ಕೇವಲ ಅಗ್ಗದ ಪ್ರಚಾರಕ್ಕಾಗಿ ಅವರ ವಿರುದ್ಧ ಕೆಳಮಟ್ಟದ ಆರೋಪಗಳನ್ನು ಮಾಡುವುದು ರಾಜಕೀಯ ಸಂಸ್ಕೃತಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ರಾಘವೇಂದ್ರ ನಾಯ್ಕ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳು ಮತ್ತು ಟೀಕೆಗಳು ಸಹಜ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ನಾಗರಿಕ ಸಮಾಜ ತಲೆತಗ್ಗಿಸುವ ರೀತಿಯ ಪದಗಳನ್ನು ಬಳಸುವುದು ಅವರ ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಶಾಸಕರ ವಿರುದ್ಧದ ನಿಂದನಾತ್ಮಕ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲವಾದರೆ ಮುಂದಾಗುವ ಬೆಳವಣಿಗೆಗಳಿಗೆ ಅನಂತಮೂರ್ತಿ ಹೆಗಡೆ ಅವರೇ ಹೊಣೆಗಾರರಾಗಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಭಿಮಾನಿ ಬಳಗದ ಸದಸ್ಯರಾದ ರವಿ ನಾಯ್ಕ (ಕಲಕರಡಿ), ಜಗದೀಶ ನಾಯ್ಕ, ಅಶೋಕ ಗುಡ್ನಾಪುರ, ಲೋಕೇಶ ನಾಯ್ಕ, ಮಧುಕರ ನಾಯ್ಕ, ಅಣ್ಣಪ್ಪ ನಾಯ್ಕ, ರಮಾಕಾಂತ ನಾಯ್ಕ, ಭದ್ರಗೌಡ, ಗಣಪತಿ ಬಾಶಿ, ಮಂಜುನಾಥ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.