ಕೇರಳ: ಕೇರಳದ ನಿಲಂಬೂರ್ನಲ್ಲಿ ಅಚ್ಚರಿಯ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕ್ಲಿನಿಕ್ಗೆ ಚಿಕಿತ್ಸೆಗಾಗಿ ಬಂದಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತು, ಅದನ್ನೇ ನುಂಗಿದ ಮಹಿಳೆ ಈಗ ಆಸ್ಪತ್ರೆಯಲ್ಲೇ ಪೊಲೀಸರ ಕಾವಲಿನಲ್ಲಿ ಇದ್ದಾಳೆ.
ಪಾಲೆಮಾಡ್ ಕಲ್ಲನ್ಕುನ್ನನ್ ನಿವಾಸಿ ಸಮೀನಾ (35) ಎನ್ನುವ ಮಹಿಳೆ, ಸುಮಾರು 3.5 ಗ್ರಾಂ ತೂಕದ ಚಿನ್ನದ ಸರವನ್ನು ಮಗುವಿನ ಕುತ್ತಿಗೆಯಿಂದ ಕಿತ್ತು ನುಂಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಅನುಮಾನ ವ್ಯಕ್ತವಾಗುತ್ತಿದ್ದಂತೆಯೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು.
ನಿಲಂಬೂರ್ ಜಿಲ್ಲಾ ಆಸ್ಪತ್ರೆಯಲ್ಲಿ ತೆಗೆದ ಎಕ್ಸ್ರೇನಲ್ಲಿ ಮಹಿಳೆಯ ಹೊಟ್ಟೆಯೊಳಗೆ ಸರ ಇರುವುದನ್ನು ವೈದ್ಯರು ದೃಢಪಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೊದಲು ಮಂಜೇರಿ ಮೆಡಿಕಲ್ ಕಾಲೇಜಿಗೆ, ನಂತರ ಕೋಯಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದ ಪೊಲೀಸರು, ವೈದ್ಯರ ಸಲಹೆ ಮೇರೆಗೆ ಎನಿಮಾ ಸೇರಿದಂತೆ ಹಲವು ವಿಧಾನಗಳನ್ನು ಪ್ರಯತ್ನಿಸಿದರೂ ಸರ ಹೊರಬರಲಿಲ್ಲ. ಹೀಗಾಗಿ ಸದ್ಯ ಸರ್ಜರಿ ವಾರ್ಡ್ನಲ್ಲಿ ನಿಗಾ ವಹಿಸಲಾಗಿದ್ದು, ಅಗತ್ಯವಿದ್ದರೆ ಶಸ್ತ್ರಚಿಕಿತ್ಸೆ ನಡೆಸುವ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತಿದೆ.
ವಿಚಿತ್ರ ಕಳ್ಳತನ ಇದೀಗ ವೈದ್ಯಕೀಯ ಪ್ರಕರಣವಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.