Sunday, September 6, 2026
Join WhatsApp Group
HomeLocal Newsನೆಟ್‌ವರ್ಕ್‌ ಇಲ್ಲದಿದ್ದರೆ ಮತದಾನವೂ ಇಲ್ಲ!

ನೆಟ್‌ವರ್ಕ್‌ ಇಲ್ಲದಿದ್ದರೆ ಮತದಾನವೂ ಇಲ್ಲ!

ನವಣಗೇರಿ, ಮುಂಡಿಗೆಹಳ್ಳಿ, ಗೋಳಿಕಟ್ಟದಲ್ಲಿ ಮೊಬೈಲ್ ಟವರ್‌ಗಾಗಿ ಗುಡ್ನಾಪುರ ಗ್ರಾ.ಪಂ.ಗೆ ಮನವಿ

ಬನವಾಸಿ: ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ಬೇಕು, ಉದ್ಯೋಗದ ಅರ್ಜಿ ಸಲ್ಲಿಸಬೇಕು, ಬ್ಯಾಂಕಿಂಗ್‌ ಸೇವೆ ಪಡೆಯಬೇಕು, ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್‌ ಸಂಪರ್ಕಿಸಬೇಕು. ಆದರೆ ನಮ್ಮ ಊರಿನಲ್ಲಿ ಒಂದು ಮೊಬೈಲ್‌ ಕರೆ ಮಾಡಲು ಕೂಡ ನೆಟ್‌ವರ್ಕ್‌ ಸಿಗುವುದಿಲ್ಲ. ಇನ್ನೆಷ್ಟು ವರ್ಷ ಹೀಗೆಯೇ ಇರಬೇಕು?

ಇದು ನವಣಗೇರಿ, ಮುಂಡಿಗೆಹಳ್ಳಿ ಹಾಗೂ ಗೋಳಿಕಟ್ಟ ಗ್ರಾಮದ ಜನರ ಪ್ರಶ್ನೆ. ವರ್ಷಗಳಿಂದ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಎದುರಿಸುತ್ತಿರುವ ಗ್ರಾಮಸ್ಥರು, ಇದೀಗ ಸಮಸ್ಯೆ ಬಗೆಹರಿಯದಿದ್ದರೆ ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆಯೊಂದಿಗೆ ಗುಡ್ನಾಪುರ ಗ್ರಾಮ ಪಂಚಾಯಿತಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.

ಈ ಮೂರು ಗ್ರಾಮಗಳ ವ್ಯಾಪ್ತಿಯಲ್ಲಿ ಯಾವುದೇ ಮೊಬೈಲ್‌ ಕಂಪನಿಯ ಸಮರ್ಪಕ ನೆಟ್‌ವರ್ಕ್‌ ಲಭ್ಯವಿಲ್ಲ. ಪರಿಣಾಮ, ಮೊಬೈಲ್‌ ಸಂಪರ್ಕವಷ್ಟೇ ಅಲ್ಲದೆ, ದಿನನಿತ್ಯದ ಹಲವು ಅಗತ್ಯ ಸೇವೆಗಳಿಗೂ ಗ್ರಾಮಸ್ಥರು ಪರದಾಡುವಂತಾಗಿದೆ.

ವಿದ್ಯಾರ್ಥಿಗಳ ಆನ್‌ಲೈನ್‌ ತರಗತಿಗಳು, ಉದ್ಯೋಗಕ್ಕೆ ಸಂಬಂಧಿಸಿದ ಅರ್ಜಿ ಸಲ್ಲಿಕೆ, ಸರ್ಕಾರಿ ಸೇವೆಗಳ ಬಳಕೆ, ಬ್ಯಾಂಕಿಂಗ್‌ ವ್ಯವಹಾರ, ಆಸ್ಪತ್ರೆ ಹಾಗೂ ಆಂಬ್ಯುಲೆನ್ಸ್‌ ಸಂಪರ್ಕ ಸೇರಿದಂತೆ ತುರ್ತು ಸಂದರ್ಭಗಳಲ್ಲಿಯೂ ನೆಟ್‌ವರ್ಕ್‌ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ.

ಮೊಬೈಲ್‌ ನೆಟ್‌ವರ್ಕ್‌ ಕಲ್ಪಿಸುವಂತೆ ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಇದುವರೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರ ಹಿತದೃಷ್ಟಿಯಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಂಬಂಧಪಟ್ಟ ಮೊಬೈಲ್‌ ನೆಟ್‌ವರ್ಕ್‌ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ, ಗ್ರಾಮದಲ್ಲಿ ಮೊಬೈಲ್‌ ಟವರ್‌ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯದಿದ್ದರೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಮತದಾನ ಬಹಿಷ್ಕಾರದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. ಗುಡ್ನಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಿಯಾಜ್‌ ಅಹ್ಮದ್‌ ಮನವಿ ಸ್ವೀಕರಿಸಿ, ಗ್ರಾಮಸ್ಥರ ಸಮಸ್ಯೆಯ ಬಗ್ಗೆ ಮನವರಿಕೆಯಾಗಿದೆ. ಈ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆದು ವಾಸ್ತವ ಸ್ಥಿತಿಯನ್ನು ತಿಳಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ನಾಯ್ಕ, ಸುಧೀರ ಪಟಗಾರ, ಮಹೇಶ ದೇವಾಡಿಗ, ಗಣೇಶ, ಮಂಜುನಾಥ ಮಡಿವಾಳ, ವಿನಾಯಕ, ಲೋಕೇಶ್‌, ಗೋಪಾಲ ಪಟಗಾರ, ರವಿ ಮಡಿವಾಳ, ಜಯಂತ್‌ ಗೌಡ, ಮಂಜುನಾಥ ಗೌಡ, ಚಂದ್ರ ನಾಯ್ಕ್‌, ಅಣ್ಣಪ್ಪ ನಾಯ್ಕ್‌, ಗಣಪತಿ ನಾಯ್ಕ್‌, ಮಹೇಶ ನಾಯ್ಕ್‌, ಕೇಶವ ಆಚಾರಿ, ವಿನಾಯಕ ಶೇಟ್‌ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ಸುಧೀರ್‌ ನಾಯರ್.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share