ಥೈಲ್ಯಾಂಡ್‌ನಲ್ಲಿ ಭಾರತ ಪ್ರತಿನಿಧಿಸಲಿರುವ ಗಣೇಶ ನಾಯ್ಕರನ್ನು ಅಭಿನಂದಿಸಿದ ಬಿಜೆಪಿ
ಶಿರಸಿ: ಬೆಳಗ್ಗಿನಿಂದ ಸಂಜೆವರೆಗೆ ಸೆಂಟ್ರಿಂಗ್ ಕೆಲಸ… ದುಡಿಮೆಯ ನಡುವೆ ಯೋಗಾಭ್ಯಾಸ… ಆ ಬಳಿಕ ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಸಾಧನೆ. ಇದೀಗ ಇದೇ ಪರಿಶ್ರಮದ ಫಲವಾಗಿ ವಿದೇಶದಲ್ಲಿ ನಡೆಯಲಿರುವ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ.
ಇದು ತಾಲೂಕಿನ ಕಬ್ಬೆ (ಉಂಚಳ್ಳಿ) ಗ್ರಾಮದ ಗಣೇಶ ವಿಷ್ಣು ನಾಯ್ಕ ಅವರ ಸಾಧನೆಯ ಕಥೆ. ಆರ್ಥಿಕ ಸಂಕಷ್ಟದ ನಡುವೆಯೂ ತಮ್ಮ ಆಸಕ್ತಿಯನ್ನು ಕೈಬಿಡದೆ ಯೋಗಾಭ್ಯಾಸ ಮುಂದುವರಿಸಿರುವ ಗಣೇಶ ನಾಯ್ಕ, ಇತ್ತೀಚೆಗೆ ತುಮಕೂರಿನಲ್ಲಿ ನಡೆದ 8ನೇ ರಾಷ್ಟ್ರಮಟ್ಟದ ಯೋಗ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಇದೀಗ ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಇಂಡೋ-ಥೈಲ್ಯಾಂಡ್ ವರ್ಲ್ಡ್ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಜೀವನ ನಿರ್ವಹಣೆಗಾಗಿ ತಂದೆಯೊಂದಿಗೆ ಸೆಂಟ್ರಿಂಗ್ ಕೆಲಸ ಮಾಡುತ್ತಿರುವ ಗಣೇಶ ನಾಯ್ಕ ಅವರಿಗೆ ಯೋಗ ಕೇವಲ ಹವ್ಯಾಸವಾಗಿರಲಿಲ್ಲ. ನಿರಂತರ ಅಭ್ಯಾಸ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಅದನ್ನೇ ತಮ್ಮ ಸಾಧನೆಯ ಹಾದಿಯನ್ನಾಗಿ ಮಾಡಿಕೊಂಡಿದ್ದಾರೆ. ಸೀಮಿತ ಆರ್ಥಿಕ ಸಂಪನ್ಮೂಲಗಳ ನಡುವೆಯೂ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಇದೀಗ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸುವ ಹಂತಕ್ಕೆ ತಲುಪಿರುವುದು ಅವರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
ಈ ಸಾಧನೆಯನ್ನು ಗುರುತಿಸಿರುವ ಬನವಾಸಿ ಬಿಜೆಪಿ ಮಂಡಲ ಹಾಗೂ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರ ತಂಡ ಗಣೇಶ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸುವುದರ ಜೊತೆಗೆ, ಥೈಲ್ಯಾಂಡ್ ಸ್ಪರ್ಧೆಯಲ್ಲಿ ಭಾಗವಹಿಸಲು ಆರ್ಥಿಕ ನೆರವನ್ನೂ ನೀಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಅನಂತಮೂರ್ತಿ ಹೆಗಡೆ, ಬಡತನದ ನಡುವೆಯೂ ಗಣೇಶ ನಾಯ್ಕ ಯೋಗಾಸನದಲ್ಲಿ ಸಾಧನೆ ಮಾಡಿ ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಆರ್ಥಿಕ ಸಂಕಷ್ಟದ ಕಾರಣ ತಂದೆಯೊಂದಿಗೆ ದಿನನಿತ್ಯ ಸೆಂಟ್ರಿಂಗ್ ಕೆಲಸ ಮಾಡುತ್ತಲೇ ಯೋಗದಲ್ಲಿ ಸಾಧನೆ ಮಾಡಿ, ಇದೀಗ ದೇಶವನ್ನು ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದಿರುವುದು ಹೆಮ್ಮೆಯ ಸಂಗತಿ ಎಂದರು.
ಪ್ರತಿಯೊಬ್ಬರೂ ಬೆಳಿಗ್ಗೆ ಯೋಗಾಭ್ಯಾಸ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಯೋಗ ದೇಹ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಉತ್ತಮ ಜೀವನದತ್ತ ಕೊಂಡೊಯ್ಯುವ ಸಾಧನವಾಗಿದೆ ಎಂದು ಅವರು ಹೇಳಿದರು.
ಬನವಾಸಿ ಬಿಜೆಪಿ ಮಂಡಲ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಮಾತನಾಡಿ, ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಯೋಗಕ್ಕೆ ಮಹತ್ವವಿದೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದಿಂದ ಯೋಗ ವಿಶ್ವದಾದ್ಯಂತ ಹೆಚ್ಚು ಪರಿಚಿತವಾಗಿದೆ. ಗಣೇಶ ವಿಷ್ಣು ನಾಯ್ಕ ಅವರ ಸಾಧನೆ ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿದೆ ಎಂದರು.
ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾರತದ ಪರವಾಗಿ ಕಣಕ್ಕಿಳಿಯಲಿರುವ ಗಣೇಶ ನಾಯ್ಕ ಅವರ ಮುಂದಿನ ಸಾಧನೆಗೆ ಎಲ್ಲರೂ ಶುಭ ಹಾರೈಸಿದರು.