ಮುಂಡಗೋಡ: ತಾಲೂಕಿನ ಶಿಡ್ಲಗುಂಡಿ ಸಮೀಪ ಬುಧವಾರ ಸಂಜೆ ಎರಡು ಸಾರಿಗೆ ಬಸ್ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬಸ್ ಚಾಲಕರು ಸೇರಿದಂತೆ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಎರಡೂ ಬಸ್ಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನಿಂದ ಮುಂಡಗೋಡ ಮಾರ್ಗವಾಗಿ ಯಲ್ಲಾಪುರದತ್ತ ತೆರಳುತ್ತಿದ್ದ ಸಾರಿಗೆ ಬಸ್ ಹಾಗೂ ಯಲ್ಲಾಪುರದಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಮತ್ತೊಂದು ಬಸ್ ಶಿಡ್ಲಗುಂಡಿ ಬಳಿ ಪರಸ್ಪರ ಡಿಕ್ಕಿಯಾಗಿವೆ. ಡಿಕ್ಕಿಯ ರಭಸಕ್ಕೆ ಎರಡೂ ಬಸ್ಗಳ ಮುಂಭಾಗಕ್ಕೆ ಭಾರೀ ಹಾನಿಯಾಗಿದೆ.
ಅಪಘಾತದಲ್ಲಿ ಯಲ್ಲಾಪುರದತ್ತ ತೆರಳುತ್ತಿದ್ದ ಬಸ್ನ ಚಾಲಕ ಬಸ್ನೊಳಗೆ ಸಿಲುಕಿಕೊಂಡಿದ್ದು, ಅವರನ್ನು ಹೊರತೆಗೆಯಲು ಸ್ಥಳೀಯರು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಬಳಿಕ ಜೆಸಿಬಿ ಯಂತ್ರದ ನೆರವಿನಿಂದ ಚಾಲಕನನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.
ಎರಡೂ ಬಸ್ಗಳಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದ, ಗಾಯಾಳುಗಳನ್ನು ತಕ್ಷಣ ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಅಪಘಾತದಿಂದ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡು ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಿಷಯ ತಿಳಿದು ಮುಂಡಗೋಡ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಅಪಘಾತದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.