Ad
Ad
Ad
Home Local News ಅಧಿಕಾರಿಗಳು ಕಾರ್ಯಶೈಲಿ ಬದಲಿಸಿಕೊಂಡು ಜನಸ್ನೇಹಿಗಳಾಗಿ

ಅಧಿಕಾರಿಗಳು ಕಾರ್ಯಶೈಲಿ ಬದಲಿಸಿಕೊಂಡು ಜನಸ್ನೇಹಿಗಳಾಗಿ

0
5

ಮಂಚಿಕೇರಿಯಲ್ಲಿ ‘ಪ್ರಜಾಸೇವೆ’: ಜನರ ಅಹವಾಲು ಆಲಿಸಿದ ಶಾಸಕ ಹೆಬ್ಬಾರ್

ಯಲ್ಲಾಪುರ: ಅಧಿಕಾರಿಗಳು ಮತ್ತು ಜನಸಾಮಾನ್ಯರ ನಡುವಿನ ಅಂತರವನ್ನು ಕಡಿಮೆ ಮಾಡಿ, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವೆ ಅಭಿಯಾನ ನಡೆಯುತ್ತಿದೆ. ಅಧಿಕಾರಿಗಳು ತಮ್ಮ ಕಾರ್ಯಶೈಲಿಯನ್ನು ಬದಲಿಸಿಕೊಂಡು ಅಧಿಕಾರಶಾಹಿ ಆಡಳಿತದ ಬದಲಾಗಿ ಜನಸ್ನೇಹಿ ಹಾಗೂ ಜನಪರ ಆಡಳಿತ ನೀಡಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಶನಿವಾರ ಮಂಚಿಕೇರಿಯಲ್ಲಿ ನಡೆದ ಹೋಬಳಿ ಮಟ್ಟದ ‘ಪ್ರಜಾಸೇವೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಂಚಿಕೇರಿಯ ರಾಜರಾಜೇಶ್ವರಿ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ 2.30ರವರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಶಾಸಕರು, ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಹುತೇಕ ಸಾರ್ವಜನಿಕರು ರಸ್ತೆ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಿದರು. ಅನುದಾನದ ಲಭ್ಯತೆ ಆಧರಿಸಿ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳುವ ಭರವಸೆಯನ್ನು ಹೆಬ್ಬಾರ್ ನೀಡಿದರು. ವಿದ್ಯುತ್ ಸಮಸ್ಯೆ, ಪಿಂಚಣಿ, ವಿಧವಾ ವೇತನ, ಕುಡಿಯುವ ನೀರು, ಮನೆ ಮಂಜೂರಾತಿ, ವಿದ್ಯುತ್ ಲೈನ್ ಬದಲಾವಣೆ, ಬಸ್ ನಿಲ್ದಾಣ ನಿರ್ಮಾಣ ಹಾಗೂ ಗೃಹಲಕ್ಷ್ಮಿ ಹಣ ಬಾರದಿರುವ ಕುರಿತು ಜನರು ಸಮಸ್ಯೆಗಳನ್ನು ಮುಂದಿಟ್ಟರು.

ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡ ಶಾಸಕ ಹೆಬ್ಬಾರ್, ಸಮಸ್ಯೆಗಳ ಕುರಿತು ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಕಾಲುಸಂಕ ನಿರ್ಮಾಣ, ರಸ್ತೆ ದುರಸ್ತಿ ಹಾಗೂ ವಸತಿ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಪ್ರಸ್ತಾವನೆ ಸಲ್ಲಿಸುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅರಣ್ಯ ಅತಿಕ್ರಮಣದಾರರು ಸಹ ತಮ್ಮ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದಾಗ, ಜಿಪಿಎಸ್ ಆಗಿರುವ ಜಮೀನುಗಳ ವಿಚಾರದಲ್ಲಿ ಅತಿಕ್ರಮಣದಾರರಿಗೆ ಅನಗತ್ಯ ತೊಂದರೆ ನೀಡಬಾರದು ಎಂದು ಅರಣ್ಯಾಧಿಕಾರಿಗಳಿಗೆ ಹೆಬ್ಬಾರ್ ಸೂಚಿಸಿದರು.

ತಹಶೀಲ್ದಾರ್ ಎಂ.ಆರ್. ಕುಲಕರ್ಣಿ, ತಾಲೂಕು ಪಂಚಾಯಿತಿ ಇಒ ರಾಜೇಶ ಧನವಾಡಕರ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ, ಪಿಐ ಸುರೇಶ ಕುಂಬಾರ, ಎಸಿಎಫ್ ಸಂಗಮೇಶ ಸೇರಿದಂತೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!