ಯಲ್ಲಾಪುರ: ಪುಟ್ಟ ಮಕ್ಕಳು ಕೃಷ್ಣನ ವೇಷ ಧರಿಸಿ ಮಿಂಚಿದರೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಸಲ್ಲಿಸಲಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹುತ್ಕಂಡದ ಶ್ರೀ ಮಹಾಗಣಪತಿ ಕಲಾಬಳಗ ಆಯೋಜಿಸಿದ್ದ ಕೃಷ್ಣವೇಷ ಸ್ಪರ್ಧೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಗೌರವ ಸಮರ್ಪಣೆ ಕಾರ್ಯಕ್ರಮ ಗಮನ ಸೆಳೆಯಿತು.
ತಾಲೂಕಿನ ಉಪಳೇಶ್ವರ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಲ್ಎಸ್ಎಂಪಿ ಅಧ್ಯಕ್ಷ ನಾಗರಾಜ ಕವಡಿಕೆರೆ ಮಾತನಾಡಿ, ಹುತ್ಕಂಡದಂತಹ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಶ್ರೀ ಮಹಾಗಣಪತಿ ಕಲಾಬಳಗ ವಿಶೇಷ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಪುಟ್ಟ ಮಕ್ಕಳನ್ನು ಕೃಷ್ಣನ ವೇಷದಲ್ಲಿ ನೋಡುವುದೇ ಸೊಗಸು. ಕಲಾಬಳಗದ ಸಂಘಟನೆ ಮತ್ತಷ್ಟು ಸದೃಢವಾಗಿ, ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಿ ಎಂದು ಆಶಿಸಿದರು.
ಕಲಾಬಳಗದ ಅಧ್ಯಕ್ಷ ಸುಬ್ಬಣ್ಣ ಉದ್ದಾಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಇದು ಬಳಗ ಆಯೋಜಿಸುತ್ತಿರುವ ಎರಡನೇ ವರ್ಷದ ಕೃಷ್ಣವೇಷ ಸ್ಪರ್ಧೆಯಾಗಿದೆ. ಎಲ್ಲ ಕಾರ್ಯಕ್ರಮಗಳಿಗೂ ಪಂಚಾಯಿತಿ ವ್ಯಾಪ್ತಿಯ ಹಿರಿಯರು, ಗ್ರಾಮಸ್ಥರು ಹಾಗೂ ತಾಯಂದಿರು ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದರು.
ಅಂಗನವಾಡಿ ಕಾರ್ಯಕರ್ತೆ ಲಲಿತಾ ಹೆಗಡೆ ಗೌರವ ಸ್ವೀಕರಿಸಿ ಮಾತನಾಡಿ, ಕಲಾಬಳಗದವರು ಅಂಗನವಾಡಿ ಕಾರ್ಯಕರ್ತೆಯರನ್ನು ಗೌರವಿಸುತ್ತಿರುವುದು ಹೆಮ್ಮೆಯ ಭಾವ ಮೂಡಿಸಿದೆ ಎಂದರು.
ಉಪಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 56ಕ್ಕೂ ಹೆಚ್ಚು ಮುದ್ದು ಮಕ್ಕಳು ಕೃಷ್ಣನ ವೇಷದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.
0ರಿಂದ 3 ವರ್ಷದ ವಿಭಾಗದಲ್ಲಿ ಧೃವ ಗಣೇಶ ಭಟ್ಟ ಹಲಸ್ಕಂಡ ಪ್ರಥಮ, ಸ್ಕಂದ ಕುಮಾರ ಭಟ್ಟ ಹಂಡ್ರಮನೆ ದ್ವಿತೀಯ ಹಾಗೂ ಶ್ರೀಶ ವೆಂಕಟ್ರಮಣ ಆಚಾರಿ ತೃತೀಯ ಬಹುಮಾನ ಪಡೆದರು.
4ರಿಂದ 7 ವರ್ಷದ ವಿಭಾಗದಲ್ಲಿ ಸುಧಾಮ ಪ್ರಮೋದ ಹೆಗಡೆ ಪ್ರಥಮ, ಹಂಸಿಕಾ ದಯಾನಂದ ಆಗೇರ ದ್ವಿತೀಯ ಹಾಗೂ ಶಯನ್ ವಿಶ್ವನಾಥ ಪೂಜಾರಿ ತೃತೀಯ ಸ್ಥಾನ ಗಳಿಸಿದರು.
ವೈಷ್ಣವಿ ವಿಶ್ವನಾಥ ಭಟ್ ಪ್ರಾರ್ಥಿಸಿದರು. ಸುಬ್ಬಣ್ಣ ಉದ್ದಾಬೈಲ್ ಸ್ವಾಗತಿಸಿದರು. ನರಸಿಂಹ ಜೂಜಿನಬೈಲ್ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ಭಟ್ ವಂದಿಸಿದರು. ವಿಘ್ನೇಶ್ವರ ಜಮಗುಳಿ ಹಾಗೂ ಗೀತಾ ಭಟ್ ಹುಲೆಕೋಣೆ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.