6 ಸಾವಿರಕ್ಕೂ ಅಧಿಕ ಆಕ್ಷೇಪಣೆ ಸಲ್ಲಿಕೆ
ಹೊನ್ನಾವರ: ಕಸ್ತೂರಿ ರಂಗನ್ ವರದಿಯ 7ನೇ ಅಧಿಸೂಚನೆಯನ್ನು ತಿರಸ್ಕರಿಸುವಂತೆ ಆಗ್ರಹಿಸಿ ಹೊನ್ನಾವರದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ತಾಲೂಕಿನ ಗ್ರಾಮೀಣ ಭಾಗಗಳಿಂದ ಸಾವಿರಾರು ಜನರು ಹರಿದುಬಂದರು. ಸುಮಾರು 3 ಕಿ.ಮೀ. ಉದ್ದದ ಮೆರವಣಿಗೆಯಲ್ಲಿ ವರದಿ ವಿರೋಧಿ ಘೋಷಣೆಗಳು ಮೊಳಗಿದವು.
ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರಾವತಿ ಸರ್ಕಲ್ನಿಂದ ಮೆರವಣಿಗೆ ಆರಂಭವಾಯಿತು. ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಡೊಳ್ಳು ಬಾರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯ ಬಳಿಕ ಸ್ಥಳೀಯ ಮೂಡಗಣಪತಿ ದೇವಸ್ಥಾನದ ಆವರಣದಲ್ಲಿ ಬಹಿರಂಗ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ, ಜಿಲ್ಲೆಯಲ್ಲಿ ಬೆಡ್ತಿ, ಪಂಪ್ಸ್ಟೋರೇಜ್, ಕೈಗಾ ಅಣುಸ್ಥಾವರ ಸೇರಿದಂತೆ ವಿವಿಧ ಯೋಜನೆಗಳಿಗೆ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶವನ್ನು ನೀಡುವ ಸಂದರ್ಭದಲ್ಲಿ ಅನ್ವಯಿಸದ ಅತೀ ಸೂಕ್ಷ್ಮ ಪ್ರದೇಶದ ಮಾನದಂಡವನ್ನು ಕಸ್ತೂರಿ ರಂಗನ್ ವರದಿಯ ಸಂದರ್ಭದಲ್ಲಿ ಮಾತ್ರ ಮುಂದಿಡುತ್ತಿರುವುದು ಸರ್ಕಾರದ ನೀತಿಯಲ್ಲಿನ ವೈರುಧ್ಯವನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಸ್ತೂರಿ ರಂಗನ್ ವರದಿ ಜಾರಿಯಾದರೆ ಅರಣ್ಯವಾಸಿಗಳು ಹಾಗೂ ಇತರ ಜನಸಾಮಾನ್ಯರ ಜೀವನ ಮತ್ತು ವಾಸಸ್ಥಳದ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು. ಜಿಲ್ಲೆಯಾದ್ಯಂತ 1 ಲಕ್ಷ ಆಕ್ಷೇಪಣಾ ಪತ್ರಗಳನ್ನು ಸಲ್ಲಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಕಸ್ತೂರಿ ರಂಗನ್ ವರದಿಯ 7ನೇ ಅಧಿಸೂಚನೆ ವಿರೋಧಿಸಿ ಹೊನ್ನಾವರ ತಾಲೂಕಿನಲ್ಲಿ 6 ಸಾವಿರಕ್ಕೂ ಅಧಿಕ ಲಿಖಿತ ಆಕ್ಷೇಪಣಾ ಪತ್ರಗಳನ್ನು ದ್ವಿಪ್ರತಿಯಲ್ಲಿ ತಾಲೂಕು ಆಡಳಿತಕ್ಕೆ ಸಲ್ಲಿಸಲಾಯಿತು. ಕೇಂದ್ರ ಸರ್ಕಾರದ ಅರಣ್ಯ ಸಚಿವರಿಗೆ ಉದ್ದೇಶಿಸಿ ಸಲ್ಲಿಸಲಾದ ಆಕ್ಷೇಪಣಾ ಪತ್ರಗಳಲ್ಲಿ ವರದಿ ಅವೈಜ್ಞಾನಿಕವಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ 10 ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಲಾಗಿದೆ.
ತಾಲೂಕು ದಂಡಾಧಿಕಾರಿ ಪ್ರವೀಣ ಕರಾಂಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಹಾಗೂ ಸಿಪಿಐ ಸಿದ್ದರಾಮೇಶ್ವರ ಸೇರಿದಂತೆ ಅಧಿಕಾರಿಗಳು ವೇದಿಕೆಗೆ ಆಗಮಿಸಿ ಆಕ್ಷೇಪಣಾ ಪತ್ರಗಳನ್ನು ಸ್ವೀಕರಿಸಿದರು.
ನಗರಾಧ್ಯಕ್ಷ ಸುರೇಶ್ ಮೇಸ್ತ ಮಾತನಾಡಿ, ವರದಿ ವಿರೋಧಿಸಿ ಸಂಘಟನಾತ್ಮಕವಾಗಿ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು. ಸಂಚಾಲಕ ಮಹೇಶ್ ನಾಯ್ಕ ಕಾನಕ್ಕಿ ಮುಂದಿನ ಹೋರಾಟದ ರೂಪುರೇಷೆಗಳನ್ನು ವಿವರಿಸಿದರು.
ಜಿಲ್ಲೆಗೆ ಮಾರಕವಾಗಬಹುದಾದ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ವಿರೋಧಿಸಿ, ಅದನ್ನು ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಧ್ವನಿ ಎತ್ತಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಈ ಹೋರಾಟಕ್ಕೆ ಕುಮಟಾ ತಾಲೂಕಿನ ವಿಕಲಚೇತನರ ಸಂಘವೂ ಬೆಂಬಲ ವ್ಯಕ್ತಪಡಿಸಿದ್ದು, ಸಂಘದ ಅಧ್ಯಕ್ಷ ಪ್ರವೀಣ ಶೆಟ್ಟಿ ಸೇರಿದಂತೆ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.