ಮುಂಡಗೋಡ: ಮನೆಯ ಬಾಗಿಲಿನ ಕೀಲಿಯನ್ನು ಯಾವುದೋ ವಸ್ತುವಿನಿಂದ ತೆಗೆದು ಒಳನುಗ್ಗಿದ ಕಳ್ಳರು ಟ್ರಜರಿಯಲ್ಲಿದ್ದ 4.60 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಮುಂಡಗೋಡ ಟಿಬೆಟಿಯನ್ ಕ್ಯಾಂಪ್ ನಂ.4ರಲ್ಲಿ ನಡೆದಿದೆ.
ಕ್ಯಾಂಪ್ನ ಮನೆ ನಂ.76(ಬಿ)ರಲ್ಲಿ ಸೆ.8ರ ಮಧ್ಯಾಹ್ನ 3 ಗಂಟೆಯಿಂದ ಸೆ.9ರ ಸಂಜೆ 5 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮನೆಯ ಮುಂಭಾಗದ ಬಾಗಿಲಿಗೆ ಹಾಕಿದ್ದ ಕೀಲಿಯನ್ನು ಯಾವುದೋ ವಸ್ತುವಿನ ಸಹಾಯದಿಂದ ತೆಗೆದು ಕಳ್ಳರು ಒಳ ಪ್ರವೇಶಿಸಿದ್ದಾರೆ. ಬಳಿಕ ಕೊಠಡಿಯಲ್ಲಿದ್ದ ಟ್ರಜರಿಯ ಬಾಗಿಲನ್ನು ತೆಗೆದು ಅದರಲ್ಲಿದ್ದ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಕಳುವಾದ ವಸ್ತುಗಳಲ್ಲಿ ಸುಮಾರು 1.50 ಲಕ್ಷ ರೂ ಮೌಲ್ಯದ 15 ಗ್ರಾಂ ತೂಕದ ಒಂದು ಬಂಗಾರದ ಸರ, 2.50 ಲಕ್ಷ ರೂ ಮೌಲ್ಯದ 25 ಗ್ರಾಂ ತೂಕದ ಒಂದು ಬಂಗಾರದ ಬಿಸ್ಕೇಟ್ ಚೈನ್, 40 ಸಾವಿರ ರೂ ಮೌಲ್ಯದ ಏಳು ಬೆಳ್ಳಿ ಬಾಲ್ಗಳು ಹಾಗೂ 20 ಸಾವಿರ ರೂ ಮೌಲ್ಯದ ಒಂದು ಬೆಳ್ಳಿ ದೀಪ ಸೇರಿವೆ. ಒಟ್ಟು 4.60 ಲಕ್ಷ ರೂ ಮೌಲ್ಯದ ವಸ್ತುಗಳು ಕಳವಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.