ಸುಸಂಸ್ಕೃತರ ತಾಲೂಕಿನಲ್ಲಿ ಕೇಳಿಬರುತ್ತಿದೆ ಗಂಭೀರ ಆರೋಪ
ಶಿರಸಿ: ಕೆಲಸದಲ್ಲಿ ವಿದ್ಯಾರ್ಹತೆಯನ್ನೂ ಮೀರಿದ ಸಂಬಳ, ಬೇಕು-ಬೇಕಾದ ಸೌಲಭ್ಯಗಳು, ಅದರಾಚೆಯೂ ಒಂದಿಷ್ಟು ವೈಯಕ್ತಿಕ ಸಹಕಾರಗಳು… ಓದು ಮುಗಿಸಿದ ಯಾವ ಹೆಣ್ಣುಮಕ್ಕಳಿಗೆ ತಾನೇ ಇಂತಹ ಆಫರ್ ಒಪ್ಪಿಗೆಯಾಗದು? ಕೆಲಸ ಸಿಕ್ಕರೆ ಸಾಕು ಎಂದುಕೊಂಡು ಯುವತಿಯೊಬ್ಬಳು ತಕ್ಷಣ ಒಪ್ಪಿಕೊಂಡುಬಿಡುತ್ತಾಳೆ. ಆದರೆ, ಮುಂದಿನ ದಿನಗಳು ಮಾತ್ರ ಅಂದುಕೊಂಡಷ್ಟು ಸಹಜವಾಗಿಲ್ಲ!
ಅಲ್ಲಿಂದ ಶುರುವಾಗುವುದೇನು? ಶಿರಸಿ ನಗರದಲ್ಲಿ ಉದ್ಯೋಗ ಹುಡುಕುತ್ತಿರುವ ಯುವತಿಯರನ್ನು ಕುರಿತಂತೆ ಸಾಮಾಜಿಕ ವಲಯದಲ್ಲಿ ಕೇಳಿಬರುತ್ತಿರುವ ಕೆಲವು ಮಾಹಿತಿಗಳು ಈಗ ಹೊಸ ಆತಂಕವನ್ನೂ ಹುಟ್ಟುಹಾಕಿವೆ. ಉದ್ಯೋಗದ ಹೆಸರಿನಲ್ಲಿ ಯುವತಿಯರನ್ನು ಆಯ್ಕೆ ಮಾಡಿಕೊಂಡು, ಹೆಚ್ಚಿನ ಸಂಬಳದ ಆಮಿಷವೊಡ್ಡಿ, ನಂತರ ಕೆಲಸದ ವ್ಯಾಪ್ತಿಯನ್ನು ಮೀರಿದ ರೀತಿಯಲ್ಲಿ ಅವರನ್ನು ಬಳಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಗಂಭೀರ ಅನುಮಾನ ವ್ಯಕ್ತವಾಗಿದೆ.
ಇಂತಹ ಅನುಮಾನಗಳು ಕೇಳಿಬಂದಿರುವುದು ಒಂದು ವಿಷಯವನ್ನು ಗಂಭೀರವಾಗಿ ಪರಿಶೀಲಿಸುವ ಅಗತ್ಯವನ್ನು ಹುಟ್ಟುಹಾಕಿದೆ. ಮಾಹಿತಿಯ ಪ್ರಕಾರ, ಮಹಿಳಾ ಉದ್ಯೋಗಿಗಳ ಆಯ್ಕೆಯ ಸಂದರ್ಭದಲ್ಲಿ ಯುವತಿಯರ ರೂಪಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇತ್ತೀಚಿನ ದಿನಗಳಲ್ಲಿ ಶಿರಸಿ ನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಪದವಿ ಮುಗಿಸಿದ ಮುಗ್ಧ, ಅವಿವಾಹಿತ, ವಿದ್ಯಾವಂತ ಹಾಗೂ ವಿಶೇಷವಾಗಿ ಸುಂದರವಾದ ಯುವತಿಯರನ್ನು ಗುರಿಯಾಗಿಸಿಕೊಂಡು ಉದ್ಯೋಗದ ನೆಪದಲ್ಲಿ ಶೋಷಿಸುವ ಮತ್ತು ವಂಚಿಸುವ ಜಾಲಗಳು ಸಕ್ರಿಯವಾಗಿರುವ ಬಗ್ಗೆ ಅತ್ಯಂತ ಆಘಾತಕಾರಿ ಅಭಿಪ್ರಾಯಗಳು ವ್ಯಕ್ತವಾಗತೊಡಗಿವೆ.
ನಗರದ ಪ್ರಮುಖ ಉದ್ಯಮಿಯೊಬ್ಬರ ಮಳಿಗೆಯಲ್ಲಿ ʻಉತ್ತಮ ವಿದ್ಯಾರ್ಹತೆ ಹೊಂದಿರಬೇಕುʼ ಎಂಬ ನಿಯಮದೊಂದಿಗೆ, ಕೇವಲ ಆಕರ್ಷಕ ರೂಪ ಹೊಂದಿರುವ ಯುವತಿಯರನ್ನು ಆಯ್ದುಕೊಂಡು ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ತದನಂತರ ಯಾವುದೇ ಕಠಿಣ ಪರಿಶ್ರಮವಿಲ್ಲದಿದ್ದರೂ ಸಹಕರಿಸಿದರೆ ದೊಡ್ಡ ಮೊತ್ತದ ವೇತನದ ಆಮಿಷ ಒಡ್ಡಲಾಗುತ್ತಿದೆ.
ಉದ್ಯಮದ ಆವರಣದ ಒಳಗೆ ಅನಗತ್ಯವಾಗಿ ನಿರ್ಮಿಸಿಕೊಂಡಿರುವ ರಹಸ್ಯ ಕೊಠಡಿಗಳಲ್ಲಿ ವಿಶೇಷ ತರಬೇತಿ ಹಾಗೂ ಖಾಸಗಿ ಸಮಾಲೋಚನೆಯ ನೆಪದಲ್ಲಿ ಯುವತಿಯರನ್ನು ಒಂಟಿಯಾಗಿ ಕರೆಯಿಸಿಕೊಂಡು ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎನ್ನುವ ದೂರುಗಳು ಕೇಳಿಬರುತ್ತಿವೆ. ಕೆಲವು ಕಡೆ ಹೆಣ್ಣುಮಕ್ಕಳು ಸಮಾಜದ ಭಯದಿಂದ ನರಕಯಾತನೆ ಅನುಭವಿಸುತ್ತಿದ್ದರೆ, ಇನ್ನು ಕೆಲವು ಕಡೆ ಯುವತಿಯರು ಕೇವಲ ಹಣದ ಆಸೆ ಹಾಗೂ ಐಷಾರಾಮಿ ಜೀವನದ ಆಮಿಷಕ್ಕೆ ಒಳಗಾಗಿ ಇಂತಹ ತಪ್ಪು ಕೃತ್ಯಗಳಿಗೆ ಸಹಕರಿಸುತ್ತಿರುವುದು ಮತ್ತು ಕಿರುಕುಳವನ್ನು ಸಹಿಸಿಕೊಳ್ಳುತ್ತಿದ್ದಾರೆ ಎಂಬ ಕಳವಳ ವ್ಯಕ್ತವಾಗಿದೆ ಎನ್ನಲಾಗುತ್ತಿದೆ.
ಕೆಲಸದ ಸ್ಥಳದಲ್ಲಿ ಪ್ರತ್ಯೇಕ ಕೊಠಡಿ ಏಕೆ, ತರಬೇತಿ ಎಂದರೆ ಅದು ಎಲ್ಲರ ಮುಂದೆಯೇ ನಡೆಯಬಾರದೇ, ವೈಯಕ್ತಿಕ ಸಮಾಲೋಚನೆ ಎನ್ನುವುದಕ್ಕೆ ಕೆಲಸದ ಸ್ವರೂಪಕ್ಕೂ ಸಂಬಂಧವಿದೆಯೇ ಎಂಬಂತಹ ಪ್ರಶ್ನೆಗಳೇ ಈಗ ಸಾಮಾಜಿಕ ಕಾರ್ಯಕರ್ತರೊಬ್ಬರನ್ನು ಈ ವಿಚಾರದ ಬಗ್ಗೆ ಧ್ವನಿ ಎತ್ತುವಂತೆ ಮಾಡಿವೆ.
ಕೆಲವು ಯುವತಿಯರು ಇಂತಹ ವರ್ತನೆಯಿಂದ ಮಾನಸಿಕವಾಗಿ ನೊಂದಿದ್ದರೂ ಸಮಾಜದ ಭಯದಿಂದ ಬಾಯಿ ತೆರೆಯುತ್ತಿಲ್ಲ ಎಂಬ ಮಾಹಿತಿಯೂ ತಮ್ಮ ಗಮನಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ. ಮತ್ತೊಂದೆಡೆ, ಹಣ ಮತ್ತು ಐಷಾರಾಮಿ ಜೀವನದ ಆಮಿಷಕ್ಕೆ ಒಳಗಾಗಿ ಕೆಲವರು ಇಂತಹ ಪರಿಸ್ಥಿತಿಗಳನ್ನು ಸಹಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ನಿಜಕ್ಕೂ ಇಂತಹ ಚಟುವಟಿಕೆ ನಡೆಯುತ್ತಿದ್ದರೆ ಅದರ ಹಿಂದೆ ಯಾರಿದ್ದಾರೆ, ಎಷ್ಟು ಮಂದಿ ಯುವತಿಯರು ಇದರಿಂದ ತೊಂದರೆಗೊಳಗಾಗಿದ್ದಾರೆ, ಉದ್ಯೋಗದ ಹೆಸರಿನಲ್ಲಿ ಯಾವುದೇ ಒತ್ತಡ ಅಥವಾ ಕಿರುಕುಳ ನಡೆದಿದೆಯೇ ಎಂಬುದನ್ನು ಪರಿಶೀಲಿಸಬೇಕಾಗಿದೆ.
ಒಂದು ಉದ್ಯೋಗದ ಜಾಹೀರಾತು, ಒಂದು ಸಂದರ್ಶನ, ಒಂದು ಆಫರ್ ಲೆಟರ್… ಇವೆಲ್ಲದರ ನಡುವೆ ನಡೆಯುವ ಕೆಲವು ಸಂಗತಿಗಳು ಹೊರಗಿನವರಿಗೆ ಗೊತ್ತಾಗದೇ ಹೋಗಬಹುದು. ವಿಶೇಷವಾಗಿ ಯುವತಿಯೊಬ್ಬಳು ತನ್ನ ಅನುಭವವನ್ನು ಮನೆಯವರಿಗೂ ಹೇಳಲು ಹೆದರಿದರೆ, ಅಂತಹ ಘಟನೆ ಹೊರಗೆ ಬರುವುದು ಇನ್ನಷ್ಟು ಕಷ್ಟ.
ಹೀಗಾಗಿ ಪೋಷಕರೂ ಎಚ್ಚರವಾಗಬೇಕಿದೆ. ತಮ್ಮ ಮಗಳು ಎಲ್ಲಿ ಕೆಲಸ ಮಾಡುತ್ತಿದ್ದಾಳೆ ಎನ್ನುವುದು ಮಾತ್ರವಲ್ಲ, ಯಾವ ರೀತಿಯ ಕೆಲಸ, ಯಾರ ಮೇಲ್ವಿಚಾರಣೆ, ವೇತನದ ಸ್ವರೂಪ, ಕೆಲಸದ ಸಮಯ ಮತ್ತು ಕೆಲಸದ ಸ್ಥಳದ ವಾತಾವರಣ ಹೇಗಿದೆ ಎಂಬುದನ್ನೂ ತಿಳಿದುಕೊಳ್ಳುವುದು ಮುಖ್ಯ.
ಈಗಾಗಲೇ ತಮ್ಮ ಬಳಿ ಕೆಲವು ರಹಸ್ಯ ಮಾಹಿತಿ ಮತ್ತು ಸುಳಿವುಗಳಿವೆ ಎಂದು ಹೇಳಿರುವ ಸಾಮಾಜಿಕ ಕಾರ್ಯಕರ್ತರು, ಅವುಗಳನ್ನು ಪರಿಶೀಲಿಸಿ ಸೂಕ್ತ ಸಾಕ್ಷ್ಯಾಧಾರ ದೊರೆತರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರುವುದಾಗಿಯೂ ತಿಳಿಸಿದ್ದಾರೆ.