Ad
Home Crime ಯಲ್ಲಾಪುರ | ಪಟ್ಟಣದಂಚಿನಲ್ಲೇ ಶ್ರೀಗಂಧಕ್ಕೆ ಕನ್ನ!

ಯಲ್ಲಾಪುರ | ಪಟ್ಟಣದಂಚಿನಲ್ಲೇ ಶ್ರೀಗಂಧಕ್ಕೆ ಕನ್ನ!

0
5

ಯಲ್ಲಾಪುರ: ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸುತ್ತಿದ್ದ ಕಳ್ಳರು, ಮರದ ಕೆಲವು ಭಾಗಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆ ಯಲ್ಲಾಪುರ ಗಸ್ತು ವ್ಯಾಪ್ತಿಯ ಸಬಗೇರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಯಲ್ಲಾಪುರ ಗಸ್ತು ಬ್ಲಾಕ್ ಕಂ. XXXI-33ರ ಸಬಗೇರಿ ಗ್ರಾಮದ ನಾರಾಯಣಪುರ ಅರಣ್ಯ ಸರ್ವೆ ನಂ. 4ಎ ವ್ಯಾಪ್ತಿಯಲ್ಲಿ ಶ್ರೀಗಂಧದ ಮರಗಳನ್ನು ಕಳ್ಳರು ಕಡಿದಿರುವುದು ಪತ್ತೆಯಾಗಿದೆ. ಹಸಿ ಹಾಗೂ ಉತ್ತಮ ತಿರುಳಿಲ್ಲದ ಶ್ರೀಗಂಧದ ಮರಗಳನ್ನು ಕಡಿದು, ಅದರ ಕೆಲವು ಭಾಗಗಳನ್ನು ಸಾಗಿಸಲಾಗಿದ್ದು, ತುದಿ ಹಾಗೂ ಬುಡದ ಭಾಗಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಿರುವುದು ತನಿಖೆಯಿಂದ ತಿಳಿದುಬಂದಿದೆ.

ಸ್ಥಳದಲ್ಲಿ ಪತ್ತೆಯಾದ ಹಸಿ ಶ್ರೀಗಂಧದ ಬುಡದ ತುಂಡುಗಳ ಒಟ್ಟು ತೂಕ ಸುಮಾರು 44 ಕೆ.ಜಿ. ಇದ್ದು, ಅವುಗಳಲ್ಲಿ ಗಂಟು ಹಾಗೂ ಮಣ್ಣು ಅಂಟಿಕೊಂಡಿದೆ. ಇದರ ಜೊತೆಗೆ ತಿರುಳಿಲ್ಲದ, ಹಸಿ ಹಾಗೂ ಸಿಪ್ಪೆ ಸಹಿತ ಶ್ರೀಗಂಧದ ತುಂಡುಗಳು ಸುಮಾರು 85 ಕೆ.ಜಿ. ತೂಕವಿದ್ದು, ಒಟ್ಟು 129 ಕೆ.ಜಿ. ಶ್ರೀಗಂಧದ ಮರದ ತುಂಡುಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ.

ಘಟನೆಗೆ ಸಂಬಂಧಿಸಿದ ಆರೋಪಿತರು ಇದುವರೆಗೆ ಪತ್ತೆಯಾಗಿಲ್ಲ. ಹೀಗಾಗಿ ಪ್ರಕರಣದ ಮುಂದಿನ ಸೂಕ್ತ ತನಿಖೆಗಾಗಿ ಗೌರವಾನ್ವಿತ ಜೆಎಂಎಫ್‌ಸಿ ನ್ಯಾಯಾಲಯದ ಅನುಮತಿ ಪಡೆದು ಪ್ರಥಮ ವರ್ತಮಾನ ವರದಿ ಸಲ್ಲಿಸಲಾಗಿದ್ದು, ಆರೋಪಿತರ ಪತ್ತೆಗಾಗಿ ತನಿಖೆ ಮುಂದುವರಿದಿದೆ.

ವಿಶೇಷವೆಂದರೆ, ಈ ಮರಗಳ್ಳತನ ನಡೆದಿರುವ ಪ್ರದೇಶ ನಾರಾಯಣಪುರ ಪಟ್ಟಣಕ್ಕೆ ಹೊಂದಿಕೊಂಡೇ ಇದೆ. ಜನವಸತಿ ಹಾಗೂ ಪಟ್ಟಣದ ಸಮೀಪದಲ್ಲೇ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಿರುವುದು ಬೆಳಕಿಗೆ ಬಂದಿರುವಾಗ, ಜನರ ಕಣ್ಣಿಗೆ ಸುಲಭವಾಗಿ ಬೀಳದ ಗ್ರಾಮೀಣ ಕಾಡು ಪ್ರದೇಶಗಳಲ್ಲಿ ನಡೆಯುತ್ತಿರುವ ಮರಗಳ್ಳತನದ ಮೇಲೆ ನಿಗಾ ಹೇಗಿದೆ ಎಂಬ ಪ್ರಶ್ನೆಯೂ ಸಹಜವಾಗಿಯೇ ಮೂಡಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!