Friday, July 24, 2026
Join WhatsApp Group
HomeCrimeಮ್ಯಾಟ್ರಮೋನಿ; ಪ್ರೊಫೈಲ್‌ ನೋಡಿ ಮರುಳಾಗಬೇಡಿ!

ಮ್ಯಾಟ್ರಮೋನಿ; ಪ್ರೊಫೈಲ್‌ ನೋಡಿ ಮರುಳಾಗಬೇಡಿ!

ಶಿರಸಿ ನಗರದಲ್ಲಿ 24 ವರ್ಷದ ಯುವತಿಗೆ ಯೋಗ್ಯ ವರ ಬೇಕು, ಮಡಿಕೇರಿಯಲ್ಲಿರುವ ವಿಚ್ಛೇದಿತ ವಧುವಿಗೆ ಸೂಕ್ತ ವರ ಬೇಕು ಇತ್ಯಾದಿ ಪ್ರಮೋಷನ್‌ಗಳನ್ನು ಸೋಶಿಯಲ್‌ ಮೀಡಿಯಾಗಳಲ್ಲಿ ನೀವೆಲ್ಲ ನೋಡಿಯೇ ಇರುತ್ತೀರಿ. ನಿಜವೆಂದು ನಂಬಿ ಆ ಪ್ರೊಫೈಲ್‌ನ ವ್ಯಕ್ತಿಯನ್ನು ಸಂಪರ್ಕಿಸಲು ಹೋದಿರೆಂದರೆ, ಕಬ್ಬಿನ ಗಾಣಕ್ಕೆ ಕೈ ಇಟ್ಟಂತೆಯೇ ಇಲ್ಲ. ಯಾಕೆಂದರೆ, ಇತ್ತೀಚೆಗಿದು ಸುಲಭದ ದಂಧೆಯಾಗಿಬಿಟ್ಟಿದೆ!

ಈಗಿನ ಕಾಲಮಾನಕ್ಕೆ ಮದುವೆಗೆ ಸೂಕ್ತ ಸಂಗಾತಿಯನ್ನು ಹುಡುಕುವ ಸವಾಲಿನ ಕೆಲಸವನ್ನು ದುರುಪಯೋಗಪಡಿಸಿಕೊಂಡು ನಕಲಿ ಪ್ರೊಫೈಲ್‌ಗಳ ಮೂಲಕ ವಂಚಿಸುವ ಘಟನೆಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ.

ಮದುವೆ ಎಂಬ ಭಾವನಾತ್ಮಕ ಹಾಗೂ ನಂಬಿಕೆಗೆ ಆಧಾರವಾದ ಸಂಬಂಧವನ್ನು ಆಯುಧವನ್ನಾಗಿ ಮಾಡಿಕೊಂಡು ವಂಚಕರು ಮೊದಲಿಗೆ ಆಕರ್ಷಕ ಫೋಟೋಗಳು, ಉನ್ನತ ಉದ್ಯೋಗ, ವಿದೇಶಿ ನೆಲೆ, ಹೆಚ್ಚಿನ ಆದಾಯ ಇತ್ಯಾದಿ ಸುಳ್ಳು ವಿವರಗಳನ್ನು ನೀಡುವ ಮೂಲಕ ವಿಶ್ವಾಸ ಗಳಿಸುತ್ತಾರೆ. ಕೆಲವರು ತಾವು ಎನ್‌ಆರ್‌ಐ, ರಕ್ಷಣಾ ಇಲಾಖೆಯ ಅಧಿಕಾರಿ, ವೈದ್ಯರು ಅಥವಾ ಉದ್ಯಮಿ ಎಂದು ಹೇಳಿಕೊಳ್ಳುತ್ತಾರೆ.

 ಪ್ರಾರಂಭದಲ್ಲಿ ಮೃದುವಾಗಿ, ಗೌರವದಿಂದ ಮಾತನಾಡಿ ಅಲ್ಪಾವಧಿಯಲ್ಲಿ ಆಪ್ತತೆಯನ್ನು ಹೆಚ್ಚಿಸಿ, “ನಾನು ನಿಮ್ಮನ್ನೇ ಮದುವೆಯಾಗಲು ಇಷ್ಟಪಡುತ್ತೇನೆ” ಎಂಬ ಭಾವನಾತ್ಮಕ ಮಾತುಗಳಿಂದ ನಂಬಿಕೆ ಗಟ್ಟಿಗೊಳಿಸುತ್ತಾರೆ. ನಂತರ ತುರ್ತು ಪರಿಸ್ಥಿತಿ ಎಂಬ ನೆಪದಲ್ಲಿ ಹಣ ಕೇಳುವುದು, ವಿದೇಶದಿಂದ ಉಡುಗೊರೆ ಕಳುಹಿಸಿದ್ದೇನೆ ಎಂದು ಕಸ್ಟಮ್ಸ್ ಶುಲ್ಕ ಕೇಳುವುದು, ಆಸ್ಪತ್ರೆ ಖರ್ಚು ಅಥವಾ ಹೂಡಿಕೆ ಅವಕಾಶಗಳ ಹೆಸರಿನಲ್ಲಿ ಹಣ ವರ್ಗಾವಣೆ ಮಾಡಿಸಿಕೊಳ್ಳುವುದು ಸಾಮಾನ್ಯ ವಿಧಾನಗಳಾಗಿವೆ. ಇನ್ನೂ ಕೆಲವು ಪ್ರಕರಣಗಳಲ್ಲಿ ವಿಡಿಯೋ ಕಾಲ್ ಮೂಲಕ ಖಾಸಗಿ ಕ್ಷಣಗಳನ್ನು ದಾಖಲಿಸಿ ನಂತರ ಬ್ಲ್ಯಾಕ್‌ಮೇಲ್ ಮಾಡುವ ದುರುದ್ದೇಶವೂ ಕಂಡುಬರುತ್ತಿದೆ.

ಈ ರೀತಿಯ ಮೋಸಗಳನ್ನು ಗುರುತಿಸಬಹುದು. ತುಂಬಾ ಪರಿಪೂರ್ಣವಾಗಿ ಕಾಣುವ ಪ್ರೊಫೈಲ್ ಆದರೆ ವೈಯಕ್ತಿಕ ವಿವರಗಳಲ್ಲಿ ಸ್ಪಷ್ಟತೆ ಇಲ್ಲದಿರುವುದು, ತಕ್ಷಣವೇ ಪ್ಲಾಟ್‌ಫಾರ್ಮ್ ಹೊರಗೆ ವಾಟ್ಸಾಪ್ ಅಥವಾ ಇತರ ಅಪ್ಲಿಕೇಶನ್‌ಗೆ ಬನ್ನಿ ಎಂದು ಒತ್ತಾಯಿಸುವುದು, ನೇರವಾಗಿ ಭೇಟಿ ಮಾಡುವುದನ್ನು ತಪ್ಪಿಸುವುದು, ಕಡಿಮೆ ದಿನಗಳಲ್ಲಿ ಅತಿಯಾದ ಭಾವನಾತ್ಮಕ ಒತ್ತಡ ತರುವ ಮಾತುಗಳು, ಹಣಕಾಸು ಸಹಾಯ ಕೇಳುವುದು ಇವೆಲ್ಲವೂ ಅನುಮಾನಕ್ಕೆ ಕಾರಣವಾಗಬೇಕು.

ಪರಿಚಯದ ಕೆಲವೇ ದಿನಗಳಲ್ಲಿ ಹಣ ಕಳುಹಿಸುವಂತೆ ಕೇಳಿದರೆ ಅದು ಬಹುತೇಕ ವಂಚನೆಯ ಲಕ್ಷಣವೇ ಆಗಿರುತ್ತದೆ. ಯಾವುದೇ ಪರಿಸ್ಥಿತಿಯಲ್ಲೂ ಬ್ಯಾಂಕ್ ಖಾತೆ ವಿವರಗಳು, ಒಟಿಪಿ, ಆಧಾರ್, ಪಾಸ್‌ಪೋರ್ಟ್ ನಕಲು, ಖಾಸಗಿ ಫೋಟೋಗಳು ಅಥವಾ ವಿಡಿಯೋಗಳನ್ನು ಹಂಚಿಕೊಳ್ಳಬಾರದು. ಪ್ರೊಫೈಲ್ ಫೋಟೋಗಳನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ ಪರಿಶೀಲಿಸಬಹುದು; ಅನೇಕ ಬಾರಿ ಅದೇ ಫೋಟೋ ಬೇರೆ ದೇಶದ ವ್ಯಕ್ತಿಯದ್ದಾಗಿರುವುದು ಪತ್ತೆಯಾಗುತ್ತದೆ.

ಮೋಸವಾದ ಅನುಮಾನ ಬಂದ ತಕ್ಷಣವೇ ಕ್ರಮ ಕೈಗೊಳ್ಳುವುದು ಅತ್ಯಂತ ಮುಖ್ಯ. ಹಣ ವರ್ಗಾವಣೆ ಮಾಡಿದಿದ್ದರೆ ತಕ್ಷಣವೇ ನಿಮ್ಮ ಬ್ಯಾಂಕ್‌ಗೆ ಮಾಹಿತಿ ನೀಡಿ. ಸಮೀಪದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಅಥವಾ ರಾಷ್ಟ್ರೀಯ ಸೈಬರ್ ಕ್ರೈಂ ಪೋರ್ಟಲ್ (cybercrime.gov.in) ಮೂಲಕ ಆನ್‌ಲೈನ್ ದೂರು ಸಲ್ಲಿಸಬಹುದು.

1930 ಹೆಲ್ಪ್‌ಲೈನ್‌ಗೆ ಕರೆ ಮಾಡಿದರೆ ಆನ್‌ಲೈನ್ ಹಣಕಾಸು ವಂಚನೆ ಪ್ರಕರಣಗಳಲ್ಲಿ ತಕ್ಷಣದ ಸಹಾಯ ದೊರೆಯಬಹುದು. ಮದುವೆ ಜೀವನದ ಪ್ರಮುಖ ನಿರ್ಧಾರವಾಗಿರುವುದರಿಂದ ಒಬ್ಬರೇ ತುರ್ತು ನಿರ್ಧಾರ ಕೈಗೊಳ್ಳದೆ ಕುಟುಂಬದವರೊಂದಿಗೆ ಚರ್ಚಿಸುವುದು, ವ್ಯಕ್ತಿಯನ್ನು ನೇರವಾಗಿ ಭೇಟಿ ಮಾಡಿ ಹಿನ್ನೆಲೆ ಪರಿಶೀಲಿಸುವುದು ಮತ್ತು ಅಗತ್ಯವಿದ್ದರೆ ವೃತ್ತಿಪರ ಪರಿಶೀಲನೆ ನಡೆಸುವುದು ಸುರಕ್ಷಿತ ಕ್ರಮಗಳು.

ಡಿಜಿಟಲ್ ಯುಗದಲ್ಲಿ ವಿಶ್ವಾಸಕ್ಕಿಂತ ಜಾಗೃತಿ ಮುಖ್ಯ; ಎಚ್ಚರಿಕೆಯಿಂದ ನಡೆದುಕೊಂಡರೆ ಮ್ಯಾಟ್ರಿಮೋನಿ ವೇದಿಕೆಗಳು ಒಳ್ಳೆಯ ಅವಕಾಶವಾಗಬಹುದು, ಆದರೆ ನಿರ್ಲಕ್ಷ್ಯ ಮಾಡಿದರೆ ಆರ್ಥಿಕ ನಷ್ಟ ಮಾತ್ರವಲ್ಲ, ಮಾನಸಿಕ ಒತ್ತಡಕ್ಕೂ ಕಾರಣವಾಗಬಹುದು!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share