ಬಂಗಾರಮಕ್ಕಿ: ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸಬಲರಾಗಲು ಕೌಶಲ್ಯಾಧಾರಿತ ತರಬೇತಿಗಳು ಸಹಕಾರಿಯಾಗುತ್ತವೆ ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳು ಹಾಗೂ ಸಿಲೆಕ್ಟ್ ಫೌಂಡೇಶನ್ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿ ಹೇಳಿದರು.
ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಸಿಲೆಕ್ಟ್ ಫೌಂಡೇಶನ್ (ರಿ) ಹಾಗೂ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಸೆ.17ರಿಂದ 30ರವರೆಗೆ 14 ದಿನಗಳ ಕಾಲ ಆಯೋಜಿಸಿರುವ ಉಚಿತ ಕೃತಕ ಆಭರಣ ತಯಾರಿಕೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆಯರು ತಮ್ಮಲ್ಲಿರುವ ಕೌಶಲ್ಯವನ್ನು ಉದ್ಯೋಗ ಹಾಗೂ ಸ್ವಉದ್ಯಮವಾಗಿ ರೂಪಿಸಿಕೊಂಡು ಕುಟುಂಬದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಬಹುದು. ಇಂತಹ ಉಚಿತ ತರಬೇತಿ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಮಹಿಳೆಯರಿಗೆ ಹೊಸ ಅವಕಾಶಗಳನ್ನು ಕಲ್ಪಿಸುವುದರ ಜೊತೆಗೆ ಸ್ವಾವಲಂಬನೆಯತ್ತ ಮುನ್ನಡೆಯಲು ಪ್ರೇರಣೆ ನೀಡುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್ಸಿಟಿ ನಿರ್ದೇಶಕ ಹರೀಶ್, ಎನ್ಆರ್ಎಲ್ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪದ್ಮಾವತಿ ಗೌಡ, ಎನ್ಆರ್ಎಲ್ಎಂ ವಲಯ ಮೇಲ್ವಿಚಾರಕಿ ಮೇಘನಾ ಭಟ್ಟ, ಶ್ರೀಗೌರೀಶ್ ಹಾಗೂ ತರಬೇತಿ ಪಡೆಯಲು ಆಗಮಿಸಿದ್ದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ತರಬೇತಿ ಅವಧಿಯಲ್ಲಿ ಕೃತಕ ಆಭರಣಗಳ ವಿನ್ಯಾಸ, ತಯಾರಿಕೆ ಹಾಗೂ ಸಂಬಂಧಿತ ಕೌಶಲ್ಯಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದ್ದು, ತರಬೇತಿಯಲ್ಲಿ ಭಾಗವಹಿಸುವವರು ಸ್ವಉದ್ಯೋಗ ಆರಂಭಿಸಲು ಅಗತ್ಯವಾದ ಕೌಶಲ್ಯವನ್ನು ಪಡೆದುಕೊಳ್ಳಲಿದ್ದಾರೆ. ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ಹಾಗೂ ಆದಾಯದಲ್ಲಿ ಸ್ವಾವಲಂಬನೆ ಸಾಧಿಸಲು ಉತ್ತೇಜನ ನೀಡುವ ಉದ್ದೇಶದಿಂದ ಈ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.